

ನರಗುಂದ: ಪೆಟ್ರೋಲ್, ಡೀಸೆಲ್, ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಬಿಜೆಪಿಯ ನೂರಾರು ಕಾರ್ಯಕರ್ತರು ಶಾಸಕ ಸಿ.ಸಿ. ಪಾಟೀಲ ನೇತೃತ್ವದಲ್ಲಿ ಎತ್ತು, ಚಕ್ಕಡಿಯಲ್ಲಿ ಬೈಕ್ ಹಾಗೂ ಕಾರಿನ ಮೆರವಣಿಗೆ ಮಾಡುವ ಮೂಲಕ ಪಟ್ಟಣದಲ್ಲಿ ಸೋಮವಾರ ವಿನೂತನ ಪ್ರತಿಭಟನೆ ನಡೆಸಿದರು.
ಶಾಸಕ ಸಿ.ಸಿ. ಪಾಟೀಲ ಮಾತನಾಡಿ, ಪಂಚ ಗ್ಯಾರಂಟಿ ಯೋಜನೆಗಳ ಭರವಸೆ ನೀಡಿ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ, ಲೋಕಸಭೆ ಚುನಾವಣೆ ಬಳಿಕ ಯಾವುದೇ ಗ್ಯಾರಂಟಿಗಳನ್ನು ಸಮರ್ಪಕ ಅನುಷ್ಠಾನಗೊಳಿಸುತ್ತಿಲ್ಲ. ಮೇ ತಿಂಗಳಿನ ಗೃಹಲಕ್ಷ್ಮಿ ಯೋಜನೆ ಕಂತು, ಸಾರಿಗೆ ಸಂಸ್ಥೆಗೆ ಪಾವತಿಸಬೇಕಾದ ಕೋಟ್ಯಂತರ ರೂ. ಬಾಕಿ ಇಟ್ಟುಕೊಂಡಿದೆ. ಅನ್ನಭಾಗ್ಯದ 5 ಕೆಜಿ ಅಕ್ಕಿ ಹಣ ಇದುವರೆಗೆ ಪಾವತಿ ಆಗಿಲ್ಲ. ಕೇಂದ್ರ ಸರ್ಕಾರದಿಂದ ಬಿಡುಗಡೆಗೊಳಿಸಿರುವ ಬರ ಪರಿಹಾರ ಹಣ ರಾಜ್ಯದ ಬಹುತೇಕ ರೈತರಿಗೆ ಇನ್ನೂ ತಲುಪಿಸಿಲ್ಲ. 7 ತಿಂಗಳಿಂದ ಹಾಲು ಉತ್ಪಾಧಕರ ಪ್ರೋತ್ಸಾಹಧನ ನೀಡಿಲ್ಲ. ರೈತರ ಮಕ್ಕಳಿಗೆ ನೀಡುತ್ತಿದ್ದ ರೈತ ವಿದ್ಯಾನಿಧಿ, ಕೇಂದ್ರ ಸರ್ಕಾರದ ಕಿಸಾನ್ ಸಮ್ಮಾನ್ 6 ಸಾವಿರ ರೂಪಾಯಿ ಜತೆಗೆ ರಾಜ್ಯದಿಂದ ನೀಡುತ್ತಿದ್ದ ಹೆಚ್ಚುವರಿ 4 ಸಾವಿರ ರೂಪಾಯಿ ಕೊಡುತ್ತಿಲ್ಲ ಎಂದು ಆರೋಪಿಸಿದರು.
ಎಸ್ಸಿ-ಎಸ್ಟಿ ಸಮುದಾಯದ ರೈತರಿಗೆ ನೀಡಬೇಕಾದ ಬಿತ್ತನೆ ಬೀಜದ ಸಹಾಯಧನ ನಿಲ್ಲಿಸುವ ಮೂಲಕ ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ. ಎಸ್ಸಿ, ಎಸ್ಟಿ ಸಮುದಾಯಕ್ಕೆ ಮೀಸಲಿರಿಸಿದ್ದ 11 ಸಾವಿರ ಕೋಟಿ ರೂಪಾಯಿ ಅನುದಾನ ಗ್ಯಾರಂಟಿ ಯೋಜನೆಗೆ ಬಳಸಿಕೊಳ್ಳಲಾಗಿದೆ. ವಾಲ್ಮೀಕಿ ನಿಗಮದಲ್ಲಿ 187 ಕೋಟಿ ರೂ. ಭಾರಿ ಹಗರಣ ನಡೆದಿದ್ದರಿಂದ ಅಮಾಯಕ ಅಧಿಕಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬಿಜೆಪಿ ಸರ್ಕಾರವಿದ್ದಾಗ ವಿವಿಧ ಮಠ-ಮಾನ್ಯಗಳ ನೀಡಿರುವ ಅನುದಾನ ಹಿಂಪಡೆಯಲಾಗಿದೆ. ದೇವಸ್ಥಾನದ ದೇಣಿಗೆ ಹಣಕ್ಕೂ ಸರ್ಕಾರ ಕನ್ನ ಹಾಕುತ್ತಿದೆ. ಧಾರ್ಮಿಕ ದತ್ತಿ ಇಲಾಖೆಯಿಂದ ಅರ್ಚಕರಿಗೆ ನೀಡುತ್ತಿದ್ದ ಗೌರವಧನ ಸ್ಥಗಿತಗೊಳಿಸಿದೆ. 108 ಆಂಬುಲೆನ್ಸ್ ನೌಕರರ ಸಂಬಳ ಕಡಿತಗೊಳಿಸಿದೆ ಎಂದು ಹರಿಹಾಯ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕಾಂಗ್ರೆಸ್ ಹೈಕಮಾಂಡ್ ಸ್ವತಂತ್ರ ಅಧಿಕಾರ ನಡೆಸಲು ಬಿಡುತ್ತಿಲ್ಲ. ಈ ಹಿಂದೆ ನಡೆಸಿದಂತೆ ಈ ಬಾರಿ ದಕ್ಷತೆಯಿಂದ ಏಕೆ ಅಧಿಕಾರ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ರಾಜ್ಯದ ಹಣಕಾಸಿನ ಸ್ಥಿತಿಗತಿ ಬಗ್ಗೆ ಸರ್ಕಾರ ಶ್ವೇತಪತ್ರ ಹೊರಡಿಸಬೇಕು. ಇಲ್ಲದಿದ್ದರೆ ಪಾಕಿಸ್ತಾನದ ಪರಿಸ್ಥಿತಿ ನಮ್ಮ ರಾಜ್ಯಕ್ಕೂ ಬಂದೊದಗಲಿದೆ ಎಂದರು.
ಪಟ್ಟಣದ ಪುರಸಭೆ ಆವರಣದಲ್ಲಿರುವ ಬಾಬಾಸಾಹೇಬ್ ಭಾವೆ ಪುತ್ಥಳಿಗೆ ಮಾಲಾರ್ಪನೆಗೈದು ಶಿವಾಜಿ ವರ್ತುಲದವರೆಗೆ ವಿವಿಧ ಘೋಷಣೆ ಕೂಗುತ್ತಾ ಬಿಜೆಪಿ ಕಾರ್ಯಕರ್ತರು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ, ತಹಸೀಲ್ದಾರ್ ಶ್ರೀಶೈಲ ತಳವಾರ ಮೂಲಕ ಮನವಿ ಸಲ್ಲಿಸಲಾಯಿತು.
ಚಂದ್ರು ದಂಡಿನ, ವಾಸು ಜೋಗಣ್ಣವರ, ಪ್ರಕಾಶಗೌಡ ತಿರಕನಗೌಡ್ರ, ಮುತ್ತು ರಾಯರಡ್ಡಿ, ಮುತ್ತಣ್ಣ ಜಂಗಣ್ಣವರ, ಉಮೇಶಗೌಡ ಪಾಟೀಲ, ಮಲ್ಲಪ್ಪ ಮೇಟಿ, ಶಿವಾನಂದ ಮುತವಾಡ, ಎಂ.ಎಚ್.ತಿಮ್ಮನಗೌಡ್ರ, ಎ.ಎಂ. ಹುಡೇದ, ನೇತಾಜಿಗೌಡ ಕೆಂಪನಗೌಡ್ರ, ಸಂತೋಷ ಹಂಚಿನಾಳ, ಅಜ್ಜನಗೌಡ ಪಾಟೀಲ, ಬಿ.ಬಿ. ಐನಾಪೂರ, ವಿಠ್ಠಲ ಹವಾಲ್ದಾರ, ಹಸನ ನವದಿ, ಅಶೋಕ ಪತ್ರಿ, ಹನುಮಂತ ಹವಾಲ್ದಾರ, ಸುರೇಶ ಹುಡೇದಮನಿ, ಬಿ.ಎಸ್. ಸುಂಕದ, ಬಸು ಪಾಟೀಲ ಉಪಸ್ಥಿತರಿದ್ದರು.