ಯೋಗಿ ಆದಿತ್ಯನಾಥ ಅವಹೇಳನಕ್ಕೆ ಖಂಡನೆ: ಸಿ.ಎಂ. ಇಬ್ರಾಹಿಂ ವಿರುದ್ಧ ಬೃಹತ್ ಪ್ರತಿಭಟನೆ

11_01_Mdy_02(Bjp Protest)..
Published on

ಮಂಡ್ಯ: ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಖಾಸಗಿ ಬದುಕಿನ ಕುರಿತಂತೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ, ನಗರದಲ್ಲಿ ಬಿಜೆಪಿ ಹಾಗೂ ಹಿಂದುಪರ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು, ಬೆಂಗಳೂರು-ಮೈಸೂರು ಹೆದ್ದಾರಿ ಮಾರ್ಗವಾಗಿ ಡಿಸಿ ಕಚೇರಿಗೆ ಮೆರವಣಿಗೆ ಮೂಲಕ ತೆರಳಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಈ ವೇಳೆ ಐವರಿಗೆ ಬುರ್ಕಾ ಹಾಕಿಸಿ ಹಾಗೂ ಐವರ ಹೆಂಡಿರ ಗಂಡನಿಗೆ ಸಂತರ ಬಗ್ಗೆ ಏನು ಗೊತ್ತೆಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಮಾತ್ರವಲ್ಲದೆ, ಡಿಸಿ ಕಚೇರಿ ಎದುರು ಸಿ.ಎಂ. ಇಬ್ರಾಹಿಂ ಪ್ರತಿಕೃತಿ ದಹಿಸಲು ಮುಂದಾದಾಗ ಪೊಲೀಸರು ಫ್ಲೆಕ್ಸ್ ಕಸಿದುಕೊಂಡರು. ಇದರಿಂದ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿ ಮತ್ತೆ ಫ್ಲೆಕ್ಸ್ ತಂದು ದಹಿಸಿದರು.

ನಾಥ ಸಂಪ್ರದಾಯದ ಪ್ರಮುಖರೂ ಆದ ಯೋಗಿ ಆದಿತ್ಯನಾಥ ಅವರು ಗೋರಖ್‌ಪುರದ ಮಠಾಧೀಶರು ಮಾತ್ರವಲ್ಲ. ಮಂಗಳೂರಿನ ಕದ್ರಿಯಲ್ಲೂ ನಾಥ ಸಂಪ್ರದಾಯದ ಯೋಗೇಶ್ವರ ಮಠ ಇದೆ. ಆದಿಚುಂಚನಗಿರಿ ಶ್ರೆಕ್ಷೇತ್ರವೂ ನಾಥ ಪರಂಪರೆಯ ಮಠಗಳಲ್ಲೊಂದಾಗಿದೆ. ಯೋಗಿ ಆದಿತ್ಯನಾಥ ಅವರು ಕದ್ರಿ ಯೋಗೇಶ್ವರ ಮಠದ ರಾಜರ ಆಯ್ಕೆ ಮತ್ತು ಪಟ್ಟಾಭಿಷೇಕ 12 ವರ್ಷಕ್ಕೊಮ್ಮೆ ವಿಜೃಂಭಣೆಯಿಂದ ನಡೆಯುತ್ತಿದೆ. ಶೃಂಗೇರಿ ಮಠದಲ್ಲಿ ವಿದ್ಯಾಭ್ಯಾಸ ಪಡೆದಿರುವ ಸಿ.ಎಂ. ಇಬ್ರಾಹಿಂ ಅವರು ನಾಥ ಪರಂಪರೆಯ ಬಗ್ಗೆ ತಿಳಿದಿದ್ದರೂ ಇಂತಹ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಕಿಡಿಕಾರಿದರು.

ಆದಿಚುಂಚನಗಿರಿ ಶ್ರೆಮಠದ ಬಗ್ಗೆ ಅಪಾರವಾದ ಭಕ್ತಿಯನ್ನು ಇಟ್ಟುಕೊಂಡಂತೆ ನಟಿಸುವ ಜೆಡಿಎಸ್ ವರಿಷ್ಠರು, ತಮ್ಮದೇ ಪಕ್ಷದ ರಾಜ್ಯಾಧ್ಯಕ್ಷರು ಇಂತಹ ಅವಹೇಳನಕಾರಿಯಾಗಿ ಮಾತನಾಡಿದ್ದರೂ, ಅವರನ್ನು ಇನ್ನೂ ಅಧ್ಯಕ್ಷ ಸ್ಥಾನದಿಂದ ಪದಚ್ಯುತಿಗೊಳಿಸುವುದನ್ನು ಬಿಟ್ಟು ನಿರ್ಲಕ್ಷ್ಯ ವಹಿಸುವ ಮೂಲಕ ನಾಥ ಪರಂಪರೆಗೆ ಅಪಮಾನ ಮಾಡಿದ್ದಾರೆ. ಶ್ರೆಮಠಕ್ಕೆ ಅಪಮಾನ ಮಾಡಿರುವ ಜೆಡಿಎಸ್‌ಗೆ ಮುಂದಿನ ದಿನಗಳಲ್ಲಿ ಜನತೆ ತಕ್ಕ ಪಾಠ ಕಲಿಸಲಿದ್ದಾರೆ. ಜೆಡಿಎಸ್ ವರಿಷ್ಠರಿಗೆ ಸ್ವಲ್ಪವಾದರೂ ಗೌರವವಿದ್ದರೆ ತಕ್ಷಣ ಅವರನ್ನು ಪದಚ್ಯುತಿಗೊಳಿಸುವಂತೆ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಎಂಎಲ್‌ಸಿ ಸಿ.ಪಿ. ಯೋಗೇಶ್ವರ್, ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲ್‌ಕುಮಾರ್ ಸುರಾನಾ, ಜಿಲ್ಲಾಧ್ಯಕ್ಷ ಸಿ.ಪಿ. ಉಮೇಶ್, ರಾಜ್ಯ ವಕ್ತಾರ ಚಂದ್ರಶೇಖರ್, ರಾಜ್ಯಕಾರ್ಯಕಾರಿಣಿ ಸದಸ್ಯ ಡಾ. ಸಿದ್ದರಾಮಯ್ಯ, ಮನ್‌ಮುಲ್ ನಿರ್ದೇಶಕರಾದ ಸಾದೊಳಲು ಸ್ವಾಮಿ, ರೂಪಾ, ಮುಖಂಡರಾದ ಇಂಡುವಾಳು ಸಚ್ಚಿದಾನಂದ, ಮಲ್ಲಿಕಾರ್ಜುನ್(ಫೈಟರ್ ರವಿ), ಎಚ್.ಆರ್. ಅರವಿಂದ್, ಮಳವಳ್ಳಿ ಮುನಿರಾಜು, ಅಶೋಕ್ ಜಯರಾಂ, ಸಿ.ಟಿ. ಮಂಜುನಾಥ್, ಚಂದಗಾಲು ಶಿವಣ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net