ಎಸ್ಸಿ, ಎಸ್ಟಿ ಹಣ ದುರ್ಬಳಕೆ ಆರೋಪ: ನಗರದಲ್ಲಿ ಬಿಜೆಪಿಯಿಂದ ಪ್ರತಿಭಟನೆ

BJP protest Mandya
Published on

ಮಂಡ್ಯ: ರಾಜ್ಯಸರ್ಕಾರ ಗ್ಯಾರೆಂಟಿ ಯೋಜನೆಗಳಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಹಣ ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿ ಬಿಜೆಪಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ಸಂಸದ ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾಯಿಸಿದ ಮುಖಂಡರು ಮತ್ತು ಕಾರ್ಯಕರ್ತರು, ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿ ವಿರುದ್ಧ ಘೋಷಣೆ ಕೂಗಿದರು. ಬಳಿಕ ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿಗೆ ಮನವಿ ಸಲ್ಲಿಸಿದರು.

ಎಸ್ಸಿ, ಎಸ್ಟಿ ಸಮುದಾಯಗಳ ನಿಗಮಗಳು ಸರ್ಕಾರದ ಹಣಕಾಸಿನ ನೆರವಿಲ್ಲದೆ ಸೊರಗಿವೆ. ಯಾವ ನಿಗಮದಲ್ಲಿಯೂ ಯೋಜನೆ ಜಾರಿಯಾಗುತ್ತಿಲ್ಲ. ಸಾರಿಗೆ ನೌಕರರಿಗೆ ಸಂಬಳಕ್ಕೂ ಕಾಸಿಲ್ಲದೆ ದಿವಾಳಿ ಸ್ಥಿತಿ ತಲುಪಿವೆ. ಸರ್ಕಾರ ತಾನು ತುಳಿದಿರುವ ಅನೈತಿಕ ದಾರಿಯಿಂದ ಹಿಂದೆ ಸರಿಯಬೇಕು. ಎಸ್‌ಸಿ ಮತ್ತು ಎಸ್ಟಿ ಸಮುದಾಯಗಳ ಏಳು ನಿಗಮಗೆ ಸರ್ಕಾರ 332 ಕೋಟಿ ರೂ. ಹಂಚಿಕೆ ಮಾಡಿದ್ದು, ಇದುವರೆಗೂ ಕೇವಲ 82 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ ಎಂದು ಟೀಕಿಸಿದರು.

ಹಣ ವರ್ಗಾವಣೆಗೆ ಅವಕಾಶವಿಲ್ಲದಂತೆ 7ಡಿ ರದ್ದು ಮಾಡಿದ್ದು ತಾನೇ ಎಂದು ಬೆನ್ನುತಟ್ಟಿಕೊಳ್ಳುವ ಸರ್ಕಾರ, ಈಗ 7ಸಿ ಕಾಯ್ದೆ ರದ್ದು ಮಾಡಿಲ್ಲವೆಂದು ಪಿಸುಗುಟ್ಟುತ್ತಿದೆ. 7ಸಿ ರದ್ದು ಮಾಡಿ ದಲಿತರ, ಆದಿವಾಸಿಗಳ ಮೀಸಲು ಹಣ ಪೂರ್ತಿಯಾಗಿ ಅವರಿಗೇ ಸಲ್ಲುವಂತೆ ಮಾಡಬೇಕು. ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಖಜಾನೆಯಿಂದ ನೇರ ಪಾವತಿ ಮಾಡಿ. ದಲಿತರ ನಿಧಿಯನ್ನು ದುರ್ಬಳಕೆ ಮಾಡುವುದು ಸರಿಯಲ್ಲ. ಕಾಂಗ್ರೆಸ್ ಸರ್ಕಾರದ ದಲಿತ ವಿರೋಧಿ ನೀತಿಯನ್ನು ನಾವು ಒಪ್ಪುವುದಿಲ್ಲ. ಸದನದ ಹೊರಗೆ ಮತ್ತು ಒಳಗೆ ಗಂಭೀರವಾಗಿ ಹೋರಾಟ ಮಾಡುತ್ತೇವೆ. ಪ್ರತಿ ಜಿಲ್ಲೆ ಹಾಗೂ ತಾಲೂಕಿನಲ್ಲಿ ಜನರನ್ನು ಒಗ್ಗೂಡಿಸಿ ಬೀದಿಗಿಳಿದು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಸಕಲೇಶಪುರ ಶಾಸಕ ಮಂಜು, ಮಾಜಿ ಶಾಸಕ ಬಾಲರಾಜು, ಬೆಳ್ಳಿ ಗಂಗಾಧರ್, ಡಾ.ಸಿದ್ದರಾಮಯ್ಯ, ಇಂದ್ರೇಶ್, ಎಸ್.ಸಚ್ಚಿದಾನಂದ, ಅಶೋಕ್ ಜಯರಾಂ, ಎಸ್.ಪಿ.ಸ್ವಾಮಿ, ಅರುಣ್‌ಕುಮಾರ್, ಎಸ್.ಪಿ.ಲಿಂಬಿಯಾನಾಯಕ್, ಪ್ರಶಾಂತ್‌ಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net