ಸಿಎಂ, ಡಿಸಿಎಂ, ಗೃಹ ಸಚಿವರ ರಾಜೀನಾಮೆಗೆ ಆಗ್ರಹ

17mlv2
ಮಳವಳ್ಳಿ ಪಟ್ಟಣದ ಬಸ್ ನಿಲ್ದಾಣದ ಮುಂಭಾಗ ಬಿಜೆಪಿ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. ಎಚ್.ಆರ್.ಅಶೋಕ್ ಕುಮಾರ್, ಯಮದೂರು ಸಿದ್ದರಾಜು, ಬಸವರಾಜು, ಕೃಷ್ಣ, ಆನಂದ್, ನಾಗೇಶ್, ನಾಗೇಗೌಡ, ಶಿವಲಿಂಗಸ್ವಾಮಿ, ಮೋಹನ್, ಮಹೇಂದ್ರ ಇದ್ದರು.
Published on

ಮಳವಳ್ಳಿ: ಐಪಿಎಲ್ ವಿಜಯೋತ್ಸವದ ಹೆಸರಿನಲ್ಲಿ 11 ಜನರ ಸಾವಿಗೆ ಕಾರಣವಾದ ರಾಜ್ಯ ಸರ್ಕಾರದ ವಿರುದ್ಧ ಹಾಗೂ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಗೃಹ ಸಚಿವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಬಿಜೆಪಿ ತಾಲೂಕು ಮಂಡಲದ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ಪಟ್ಟಣದ ಸಾರಿಗೆ ಬಸ್ ನಿಲ್ದಾಣದ ಮುಂಭಾಗದಲ್ಲಿ ನಡೆದ ಪ್ರತಿಭಟನೆಯಲ್ಲಿ ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿ ಎಚ್.ಆರ್.ಅಶೋಕ್ ಕುಮಾರ್ ಮಾತನಾಡಿ, ವಿಜಯೋತ್ಸವಕ್ಕೆ ಗೃಹ ಇಲಾಖೆ ಅನುಮತಿ ನೀಡದಿದ್ದರೂ ವಿಜಯೋತ್ಸವ ಮಾಡಿದವರು ಯಾರು? ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ನಮಗೇನು ಗೊತ್ತಿಲ್ಲವೆಂದು ಬೇಜವಾಬ್ದಾರಿ ಉತ್ತರ ನೀಡುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಕಿಡಿಕಾರಿದರು.

ರಾಜ್ಯಪಾಲರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದವರು ಮೊದಲಿಗೆ ನಾವಲ್ಲ ಅನ್ನುತ್ತಿದ್ದ ಸಿಎಂ, ನಂತರ ದಿನಗಳಲ್ಲಿ ನಾನೇ ಎನ್ನುತ್ತಾರೆ. ಸಿದ್ದರಾಮಯ್ಯ ಅವರ ಈ ಹೇಳಿಕೆ ಅವರ ರಾಜಕೀಯ ಮುತ್ಸದ್ದಿತನವನ್ನು ಅಣಕಿಸುವಂತಿದೆ. ವಿಧಾನಸೌಧದಲ್ಲಿ ಕಾರ್ಯಕ್ರಮವನ್ನು ಸರ್ಕಾರ ಮಾಡಲು ನಿರ್ಧರಿಸಿ ಕೇವಲ 30 ಜನ ವೇದಿಕೆಗೆ ಆಹ್ವಾನವಿರುತ್ತದೆ. ಆದರೆ ರಾಜ್ಯಪಾಲರು, ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಇರುವ ವೇದಿಕೆ ಕಾರ್ಯಕ್ರಮದಲ್ಲಿ ಸಚಿವರು ಅವರ ಕುಟುಂಬದವರು ಬಂದು ಫೋಟೋ ತೆಗೆಸಿಕೊಳ್ಳಲು ತಳ್ಳಾಟ, ನೂಕಾಟ ಆಗಿದ್ದು, ಸಂಪೂರ್ಣ ಶಿಷ್ಟಾಚಾರ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದರು.

ಸ್ಟೇಡಿಯಂ ಬಳಿ ಬೆಳಗ್ಗೆಯಿಂದಲೇ ಜನರು ಸೇರಿದ್ದು, ಕೊನೆ ಕ್ಷಣದಲ್ಲಿ ಕೆಲವು ಗೇಟ್‌ಗಳನ್ನು ತೆರೆದ ಪರಿಣಾಮ 11 ಅಮಾಯಕರ ಸಾವು ಸಂಭವಿಸಿದೆ. ಬಿಟ್ಟಿ ಪ್ರಚಾರಕ್ಕಾಗಿ ಸರ್ಕಾರ ತೆಗೆದುಕೊಂಡ ತಪು ್ಪನಿರ್ಧಾರದಿಂದ ಅಂದಿನ ಕಾರ್ಯಕ್ರಮ ಸೂತಕದ ಸಮಾರಂಭವಾಯಿತು. ಅವಘಡಕ್ಕೆ ಸಿಎಂ, ಡಿಸಿಎಂ ಹಾಗೂ ಗೃಹ ಸಚಿವರನ್ನು ನೇರ ಹೊಣೆಗಾರರನ್ನಾಗಿ ಮಾಡಬೇಕು. ಕೂಡಲೇ ರಾಜೀನಾಮೆ ನೀಡಬೇಕು ಮತ್ತು ಉನ್ನತ ಮಟ್ಟದ ತನಿಖೆಯಾಗಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡ ಯಮದೂರು ಸಿದ್ದರಾಜು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜು, ತಾಲೂಕು ಅಧ್ಯಕ್ಷ ಕೃಷ್ಣ, ಪ್ರಧಾನ ಕಾರ್ಯದರ್ಶಿಗಳಾದ ಆನಂದ್, ನಾಗೇಶ್, ಮುಖಂಡರಾದ ನಾಗೇಗೌಡ, ಶಿವಲಿಂಗಸ್ವಾಮಿ, ಮೋಹನ್, ಮಹೇಂದ್ರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net