

ಶಿವಮೊಗ್ಗ: ಒಡಿಶಾ ಕಾಂಗ್ರೆಸ್‌ನ ಸಂಸದ ಧೀರಜ್ ಸಾಹು ಅವರ ಮನೆಯಲ್ಲಿ 300 ಕೋಟಿ ರೂ.ಗೂ ಅಧಿಕ ನಗದು ಪತ್ತೆಯಾಗಿದ್ದು ತಕ್ಷಣವೇ ಭ್ರಷ್ಟ ಸಂಸದನನ್ನು ಬಂಧಿಸಬೇಕೆಂದು ಆಗ್ರಹಿಸಿ ಶಿವಮೊಗ್ಗ ಜಿಲ್ಲಾ ಬಿಜೆಪಿ ಕಾರ್ಯಕರ್ತರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿದರು.
ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯ ಧೀರಜ್ ಸಾಹು ಅವರ ಮನೆಯಲ್ಲಿ ಕೋಟ್ಯಂತರ ನಗದು ಪತ್ತೆಯಾಗಿದ್ದು, ಕಾಂಗ್ರೆಸ್ ಪ್ರಜಾಪ್ರಭುತ್ವ ವಿರೋಧಿ, ಲೂಟಿಕೋರ, ಲಂಚಕೋರ ಎಂಬುವುದು ಸಾಬೀತಾಗಿದೆ. ಬೆಂಗಳೂರಿನಲ್ಲಿ ಗುತ್ತಿಗೆದಾರರ ಬಳಿ 40 ಕೋಟಿ ರೂ., 80 ಕೋಟಿ ರೂ. ಸಿಕ್ಕಿತ್ತು. ಇದೀಗ ಕಾಂಗ್ರೆಸ್ ಸಂಸದನ ಮನೆಯಲ್ಲಿ 300 ಕೋಟಿ ರೂ. ನಗದು ಸಿಕ್ಕಿದೆ. ಇದರಿಂದ ಕಾಂಗ್ರೆಸ್‌ನ ಸಾಚಾತನ ಬಟಬಯಲಾಗಿದೆ ಎಂದು ಲೇವಡಿ ಮಾಡಿದರು.
ಸಂಸದ ಧೀರಜ್ ಸಾಹು ಅವರು ರಾಜೀನಾಮೆ ಕೊಡಬೇಕು. ತಕ್ಷಣ ಅವರನ್ನು ಐಟಿ ಅಧಿಕಾರಿಗಳು ಬಂಧಿಸಿ ಕ್ರಮ ತೆಗೆದುಕೊಳ್ಳಬೇಕು. ನೈತಿಕತೆ ಇದ್ದರೆ ಕಾಂಗ್ರೆಸ್ ಪಕ್ಷ ತಪ್ಪಿತಸ್ಥನ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಸವಾಲು ಹಾಕಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಮಾತನಾಡಿ, ಕಾಂಗ್ರೆಸ್‌ಗೆ ಇದೇನು ಹೊಸದಲ್ಲ. ಅಧಿಕಾರಕ್ಕೆ ಬಂದಾಗಿನಿಂದ ಎಲ್ಲ ಗುತ್ತಿಗೆದಾರರನ್ನು ಹಿಂಡಿ ಹಿಪ್ಪೆ ಮಾಡಿ ಕೋಟ್ಯಂತರ ರೂ. ಕಮಿಷನ್ ಪಡೆದಿರುವುದು ಬಹಿರಂಗವಾಗಿದೆ. ಡಿಸಿಎಂ ಡಿ.ಕೆ.ಶಿವಕುಮಾರ್ ಎಂದರೆ ಭ್ರಷ್ಟಾಚಾರಕ್ಕೆ ಮತ್ತೊಂದು ಅನ್ವರ್ಥ ನಾಮವಾಗಿದೆ ಎಂದು ಕಿಡಿಕಾರಿದರು.
ಗುತ್ತಿಗೆದಾರನ ಮನೆಯಲ್ಲಿ ಕೋಟಿ ಕೋಟಿ ಹಣ ಪತ್ತೆಯಾಗುತ್ತದೆ. ಒಡಿಶಾ ಸಂಸದ ಧೀರಜ್ ಸಾಹು ಮನೆಯಲ್ಲಿ ಕೋಟಿ ಕೋಟಿ ಹಣ ಪತ್ತೆಯಾದರೆ ಕಾಂಗ್ರೆಸ್ ಮೌನಕ್ಕೆ ಶರಣಾಗಿದೆ. ತಕ್ಷಣವೇ ಅವರು ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡುವಂತೆ ಆಗ್ರಹಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಬಿ.ಕೆ.ಶ್ರೀನಾಥ್, ಶಿವರಾಜ್, ನಗರ ಬಿಜೆಪಿ ಅಧ್ಯಕ್ಷ ಎನ್.ಕೆ.ಜಗದೀಶ್, ಪ್ರಮುಖರಾದ ಡಾ. ಧನಂಜಯ್ ಸರ್ಜಿ,ಎಸ್.ಎಸ್.ಜ್ಯೋತಿಪ್ರಕಾಶ್, ಸಿ.ಎಚ್.ಮಾಲತೇಶ್, ರತ್ನಾಕರ್ ಶೆಣೈ, ಆಯನೂರು ಕುಪೇಂದ್ರ, ಸುನೀತಾ ಅಣ್ಣಪ್ಪ, ಎಂ.ಪ್ರಭಾಕರ್, ಎಂ.ಬಿ.ಹರಿಕೃಷ್ಣ, ಬಳ್ಳೇಕೆರೆ ಸಂತೋಷ್, ಸುರೇಖಾ ಮುರಳಿಧರ್, ವಿನ್ಸೆಂಟ್ ರೋಡ್ರಿಗಸ್, ಈ. ವಿಶ್ವಾಸ್, ಶ್ರೀನಾಥ್, ಆರ್.ವಿ.ದರ್ಶನ್, ಸುರೇಖಾ ಪಾಲಾಕ್ಷಪ್ಪ, ರಶ್ಮಿ ಶ್ರೀನಿವಾಸ್ ಮತ್ತಿತರರಿದ್ದರು.