ಪ್ರತಿಭಟನೆ ತೀವ್ರಗೊಳಿಸಿದ ಬಿಜೆಪಿ

idga ganesh
Published on

ಹುಬ್ಬಳ್ಳಿ: ನಗರದ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಅನುಮತಿ ನೀಡಬೇಕೆಂದು ಆಗ್ರಹಿಸಿ ಬಿಜೆಪಿ ಮತ್ತು ಹಿಂದು ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆಯನ್ನು ತೀವ್ರಗೊಳಿಸಿದರು.

ಇಲ್ಲಿಯ ಮಹಾನಗರ ಪಾಲಿಕೆ ಆಯುಕ್ತರ ಕಚೇರಿಯಲ್ಲಿ ಗುರುವಾರ ಮಧ್ಯಾಹ್ನದಿಂದ ಪ್ರತಿಭಟನೆ ಆರಂಭಿಸಿ, ಅಹೋರಾತ್ರಿ ಧರಣಿ ನಡೆಸಿದ್ದರು. ಶುಕ್ರವಾರ ಬೆಳಗ್ಗೆಯಿಂದ ಧರಣಿ ಮುಂದುವರಿಸಿದರು. ಬಿಜೆಪಿ ಹಾಗೂ ಹಿಂದು ಸಂಘಟನೆಗಳ ಹೋರಾಟ ಸಂಜೆ ವೇಳೆ ತೀವ್ರ ಸ್ವರೂಪ ಪಡೆದಿತ್ತು.

ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಸ್ಥಾಪನೆಗೆ ಅನುಮತಿ ನೀಡಿ ಪಾಲಿಕೆ ಸ್ವೀಕರಿಸಿದ ಠರಾವು ಪ್ರಶ್ನಿಸಿ ಅಂಜುಮನ್ ಇಸ್ಲಾಂ ಸಂಸ್ಥೆ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಧಾರವಾಡ ಹೈ ಕೋರ್ಟ್ ಪೀಠ ಶುಕ್ರವಾರ ಮಧ್ಯಾಹ್ನ ತಿರಸ್ಕರಿಸಿ ತೀರ್ಪು ನೀಡಿದೆ. ಇದರ ನಂತರವೂ ಪಾಲಿಕೆ ಆಯುಕ್ತರು ಅನುಮತಿ ನೀಡಲು ವಿಳಂಬ ಮಾಡುತ್ತಿದ್ದಾರೆಂದು ಆರೋಪಿಸಿ, ಪ್ರತಿಭಟನಾಕಾರರು ಪಾಲಿಕೆ ಕಚೇರಿ ಎದುರಿನ ರಸ್ತೆ ಸಂಚಾರ ತಡೆದು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರತಿಕೃತಿ ದಹನ ಮಾಡಿ, ಆಕ್ರೋಶ ವ್ಯಕ್ತಪಡಿಸಿದರು.

ಹಿಂದು ವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ, ನ್ಯಾಯಾಲಯ ಆದೇಶ ಪಾಲಿಸದ ಸರ್ಕಾರಕ್ಕೆ ಧಿಕ್ಕಾರ...ಧಿಕ್ಕಾರ, ಬೇಕೇ ಬೇಕು ಅನುಮತಿ ಬೇಕು....ಬೋಲೋ ಶ್ರೀ ಗಜಾನನ ಮಹಾರಾಜ್ ಕೀ. ಜೈ...ಹಿಂದು ವಿರೋಧಿ ಸಿದ್ದರಾಮಯ್ಯಗೆ ಧಿಕ್ಕಾರ...ಕಾಂಗ್ರೆಸ್ ಏಜೆಂಟ್ ಆಗಿ ವರ್ತಿಸುತ್ತಿರುವ ಪಾಲಿಕೆ ಆಯುಕ್ತರಿಗೆ ಧಿಕ್ಕಾರ...ಎಂಬಿತ್ಯಾದಿ ಘೊಷಣೆ ಕೂಗಿ ಅಸಮಾಧಾನ ವ್ಯಕ್ತಪಡಿಸಿದರು.

ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಪಾಲಿಕೆ ಸದಸ್ಯರಾದ ಶಿವು ಮೆಣಸಿನಕಾಯಿ, ರಾಜಣ್ಣ ಕೊರವಿ, ಉಮೇಶ ಕೌಜಗೇರಿ, ಮೀನಾಕ್ಷಿ ವಂಟಮೂರಿ, ಬೀರಪ್ಪ ಖಂಡೇಕಾರ, ಸಂತೋಷ ಚವ್ಹಾಣ, ಬಿಜೆಪಿ ಮುಖಂಡರಾದ ಶಿವಾನಂದ ಮುತ್ತಣ್ಣವರ, ರವಿ ನಾಯ್ಕ, ರಂಗಾ ಬದ್ದಿ, ಅಶೋಕ ವಾಲ್ಮೀಕಿ, ರಾಜು ಕಾಳೆ ಇದ್ದರು.

ರಸ್ತೆ ತಡೆ ಹಿನ್ನೆಲೆಯಲ್ಲಿ ವಾಹನ ಸವಾರರು ತೊಂದರೆ ಅನುಭವಿಸಿದರು. ಕೆಲ ಸಮಯದ ಬಳಿಕ ಪಾಲಿಕೆ ಆಯುಕ್ತರ ಕಚೇರಿಗೆ ತೆರಳಿ ಧರಣಿ ಮುಂದುವರಿಸಿದರು. ಪೊಲೀಸರು ಸಂಚಾರ ದಟ್ಟಣೆ ನಿಯಂತ್ರಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net