ಸಿಎಂಗೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟಿಸಲು ಯತ್ನಿಸಿದ ಬಿಜೆಪಿ ಕಾರ್ಯಕರ್ತರು ವಶಕ್ಕೆ

mng--17 Feb Bjp protest
Published on

ಮಂಗಳೂರು : ಶಾಸಕರ ವಿರುದ್ಧ ಎಫ್‌ಐಆರ್ ದಾಖಲಿಸಿರುವುದನ್ನು ಖಂಡಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬೋಂದೇಲ್ ಬಳಿ ಕಪ್ಪು ಪಟ್ಟಿ ಧರಿಸಿ, ಭಿತ್ತಿಪತ್ರ ಪ್ರದರ್ಶಿಸಿ ಪ್ರತಿಭಟಿಸಲು ಸಿದ್ಧತೆ ನಡೆಸಿದ್ದ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.


ವಿಮಾನ ನಿಲ್ದಾಣದಿಂದ ರಸ್ತೆ ಮಾರ್ಗ ಮೂಲಕ ಕಾಂಗ್ರೆಸ್ ಸಮಾವೇಶ ನಡೆಯುವ ಅಡ್ಯಾರ್ ಸಹ್ಯಾದ್ರಿ ಮೈದಾನದ ಕಡೆಗೆ ತೆರಳುವ ವೇಳೆ ಬೋಂದೆಲ್ ಬಳಿ 50ಕ್ಕೂ ಅಧಿಕ ಬಿಜೆಪಿ ಕಾರ್ಯಕರ್ತರು ಸೇರಿದ್ದು, ಮುಖ್ಯಮಂತ್ರಿ ಬರುವಾಗ ಕಪ್ಪು ಪಟ್ಟಿ ಕಟ್ಟಿಕೊಂಡು, ಭಿತ್ತಿಪತ್ರ ಹಿಡಿದು ಪ್ರತಿಭಟನೆಗೆ ಯತ್ನಿಸಿದ್ದರು. ಅಷ್ಟರಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಪೊಲೀಸರು ಸೇರಿದ್ದು ಕಾರ್ಯಕರ್ತರನ್ನು ಜಾಗ ಖಾಲಿ ಮಾಡುವಂತೆ ಸೂಚಿಸಿದ್ದಾರೆ. ಇದಕ್ಕೆ ಒಪ್ಪದ ಕಾರ್ಯಕರ್ತರು ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ. ಶಾಸಕರಾದ ವೇದವ್ಯಾಸ ಕಾಮತ್ ಹಾಗೂ ಡಾ.ಭರತ್ ಶೆಟ್ಟಿ ವಿರುದ್ಧ ಪ್ರಕರಣ ದಾಖಲಿಸಿದೆ. ಇದರ ವಿರುದ್ಧ ಹೋರಾಟ ಮಾಡುವ ಹಕ್ಕು ನಮಗಿದೆ ಎಂದು ಪ್ರತಿಭಟನೆಗೆ ಮುಂದಾಗಿದ್ದಾರೆ.


ಬಳಿಕ ವಿಮಾನ ನಿಲ್ದಾಣದಲ್ಲಿದ್ದ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ತಕ್ಷಣ ಸ್ಥಳಕ್ಕೆ ಆಗಮಿಸಿದ್ದು, ಅಲ್ಲಿದ್ದ ಕಾರ್ಯಕರ್ತರನ್ನು ಕೂಡಲೇ ಸ್ಥಳದಿಂದ ತೆರಳುವಂತೆ ಹೇಳಿದ್ದಾರೆ. ಶಾಸಕರ ವಿರುದ್ಧ ಎಫ್‌ಐಆರ್ ದಾಖಲಿಸಿರುವುದನ್ನು ಖಂಡಿಸಿ ಶಾಂತಿಯುತವಾಗಿ ಪ್ರತಿಭಟಿಸುವುದಾಗಿ ಹೇಳಿದ್ದಾರೆ. ಯಾವುದೇ ಅನುಮತಿ ಪಡೆಯದೆ ಈ ಸಮಯದಲ್ಲಿ ಏಕಾಏಕಿ ಪ್ರತಿಭಟನೆ ನಡೆಸಲು ಅವಕಾಶ ನೀಡುವುದಿಲ್ಲ ಎಂದು ಆಯುಕ್ತರು ತಿಳಿಸಿದ್ದಾರೆ. ಈ ಸಂದರ್ಭ ಬಿಜೆಪಿ ಕಾರ್ಯಕರ್ತರು ಕಮಿಷನರ್ ಜೊತೆಗೆ ಮಾತಿನ ಚಕಮಕಿ ನಡೆಸಿದ್ದಾರೆ. ಶಾಸಕರ ವಿರುದ್ಧ ಎಫ್‌ಐಆರ್ ದಾಖಲಿಸಿರುವ ಹಿನ್ನೆಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್‌ಗೆ ಧಿಕ್ಕಾರ ಕೂಗಿ ಪ್ರತಿಭಟನೆ ವಿಕೋಪಕ್ಕೆ ಹೋಗುತ್ತಿದ್ದಂತೆ ಎಲ್ಲರನ್ನು ವಶಕ್ಕೆ ಪಡೆಯಲು ಆಯುಕ್ತರು ಆದೇಶಿಸಿದ್ದಾರೆ. ತಕ್ಷಣ ಪೊಲೀಸರು ಎಲ್ಲಾ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದು ಕೆಲವು ಯುವಕರು ನೆಲದಲ್ಲಿ ಹೊರಳಾಡಿದ್ದಾರೆ. ಬಳಿಕ ಎಲ್ಲರನ್ನೂ ಪೊಲೀಸ್ ಬಸ್‌ಗೆ ತುಂಬಿಸಿ ಠಾಣೆಗೆ ಕರೆದೊಯ್ದು ಬಿಟ್ಟಿದ್ದಾರೆ. ಮುಖ್ಯಮಂತ್ರಿ ಪ್ರಯಾಣಿಸುತ್ತಿದ್ದ ಕಾರು ಬರುವ ಮೊದಲೇ ಪ್ರತಿಭಟನಾಕಾರರನ್ನು ತೆರವು ಮಾಡಿಸಿ, ಪೊಲೀಸರು ಬಚಾವ್ ಆಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net