

ಮಂಡ್ಯ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಮಾಡಿರುವ ರಾಜ್ಯ ಸರ್ಕಾರದ ಧೋರಣೆ ಖಂಡಿಸಿ ನಗರದಲ್ಲಿ ಸೋಮವಾರ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು, ಬೈಕೊಂದಕ್ಕೆ ಹಗ್ಗ ಬಿಗಿದು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬಿಂಬಿಸುವಂತಹ ಅಣಕು ಪ್ರದರ್ಶನ ನೀಡಿ ವಿನೂತನ ಪ್ರತಿಭಟನೆ ನಡೆಸಿದರು. ಮಾತ್ರವಲ್ಲದೆ ರಾಜ್ಯ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿದರು. ಕೆಲ ಕಾಲ ಮಾನವ ಸರಪಳಿ ನಿರ್ಮಿಸಿ ರಸ್ತೆ ಸಂಚಾರ ತಡೆದು ಆಕ್ರೋಶ ಹೊರಹಾಕಿದರು. ಸಾರಿಗೆ ಬಸ್‌ಗಳಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಹಾಗೂ ವಾಹನ ಸವಾರರಿಗೆ ಹೂ ಕೊಟ್ಟು ಕಿವಿಗೆ ಹೂವಿಟ್ಟ ಸರ್ಕಾರವೆಂದು ಘೋಷಣೆ ಮೊಳಗಿಸಿದರು.
ರಾಜ್ಯದಲ್ಲಿ ಹಣಕಾಸು ಪರಿಸ್ಥಿತಿ ಹದಗೆಟ್ಟಿರುವುದಕ್ಕೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯೇ ಸಾಕ್ಷಿ. ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವುದಕ್ಕಾಗಿ ತೈಲ ಬೆಲೆಗಳನ್ನು ಏರಿಕೆ ಮಾಡಿದೆ. ಲೋಕಸಭೆ ಚುನಾವಣೆ ಸೋಲಿನ ಹತಾಶೆ, ಹದಗೆಟ್ಟಿರುವ ಆರ್ಥಿಕ ಪರಿಸ್ಥಿತಿಯಿಂದ ಆಡಳಿತವನ್ನು ಸಮರ್ಥವಾಗಿ ನಿರ್ವಹಣೆ ಮಾಡಲು ಸಾಧ್ಯವಾಗುತ್ತಿಲ್ಲ. ರಾಜ್ಯದ ಆರ್ಥಿಕ ಪರಿಸ್ಥಿತಿ ಸದೃಢವಾಗಿದೆ ಎಂದು ಬಂಡತನದಿಂದ ಮಾತನಾಡುವ ರಾಜ್ಯಸರ್ಕಾರ, ಅಭಿವದ್ಧಿ ಯೋಜನೆಗಳಿಗೆ ಹಣ ನೀಡಲಾಗದಂತಹ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇಶ ಮತ್ತು ರಾಜ್ಯದಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾಗಿದೆ. ಆ ಸಿಟ್ಟನ್ನು ಈಗ ಜನರ ಮೇಲೆ ತೋರಿಸುತ್ತಿದ್ದಾರೆ. ಹಿಂದೆ ಸ್ಟಾೃಂಪ್ ಡ್ಯೂಟಿ ಹೆಚ್ಚಿಸಿದ್ದರು. ವಿದ್ಯುತ್ ದರವನ್ನು ಏರಿಸಲಾಗಿದೆ. ಇವರಿಂದ ಉತ್ತಮ ಆಡಳಿತ ನಿರೀಕ್ಷಿಸಲಾಗುವುದಿಲ್ಲ. ತೈಲ ಬೆಲೆ ಏರಿಕೆ ಮೂಲಕ ಕಾಂಗ್ರೆಸ್ ಸರ್ಕಾರ ರಾಜ್ಯದ ಜನತೆಯ ಮೇಲೆ ದರ ಏರಿಕೆಯ ಬರೆ ಹಾಕಿರುವುದು ಖಂಡನೀಯ. ಈಗಾಗಲೇ ವಿದ್ಯುತ್ ದರ, ಬಸ್ ಪ್ರಯಾಣ ದರ, ತರಕಾರಿ- ಬೇಳೆಕಾಳುಗಳ ಬೆಲೆ, ಮದ್ಯದ ಬೆಲೆ, ನಂದಿನಿ ಹಾಲು, ಮೊಸರು, ಮಜ್ಜಿಗೆಯ ಬೆಲೆ ಏರಿಸಿರುವುದು ಸರಿಯಲ್ಲ. ಜನರ ಮೇಲೆ ಹೊರೆ ಹೇರಿರುವುದು ಅಕ್ಷಮ್ಯ ಅಪರಾಧ. ಇನ್ನಾದರೂ ಜನಸಾಮಾನ್ಯರ ವಿರೋಧಿ ಧೋರಣೆ ಬಿಟ್ಟು ಕೂಡಲೇ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ನಿರ್ಧಾರ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್, ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ, ಮನ್‌ಮುಲ್ ನಿರ್ದೇಶಕಿ ಎಂ.ರೂಪಾ, ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ, ವಿದ್ಯಾ ನಾಗೇಂದ್ರ, ಎಚ್.ಆರ್.ಅರವಿಂದ್, ಎಚ್.ಆರ್.ಅಶೋಕ್, ವಿವೇಕ್, ಕೆಂಪಬೋರಯ್ಯ, ಸತೀಶ್, ಭೀಮೇಶ್, ವಸಂತ್‌ಕುಮಾರ್, ಹನುಮಂತು, ನಿತ್ಯಾನಂದ, ಸಿದ್ದರಾಜುಗೌಡ, ಎಂ.ಬಿ. ರಮೇಶ, ಪ್ರಸನ್ನ, ಶಿವಕುಮಾರ್, ಮಹಂತಪ್ಪ, ಆನಂದ್ ಇತರರಿದ್ದರು.