ಕತ್ತಲೆ ಭಾಗ್ಯ ಕೊಟ್ಟು ಇಂಧನ ಸಚಿವರು ನಾಪತ್ತೆ, ಹುಡುಕಿಕೊಟ್ಟವರಿಗೆ ವಿದ್ಯುತ್ ಉಚಿತ, ಖಚಿತ: ಮಂಡ್ಯದಲ್ಲಿ ಬಿಜೆಪಿಯಿಂದ ವಿನೂತನ ಪ್ರತಿಭಟನೆ

BJP protest against state Congress government mandya
Published on

ಮಂಡ್ಯ: ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಆರೋಪಿಸಿ ನಗರದಲ್ಲಿ ಸೋಮವಾರ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು, ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಅಂತೆಯೇ ರಾಜ್ಯದ ಜನರಿಗೆ ಕತ್ತಲೆ ಭಾಗ್ಯ ಕೊಟ್ಟು ಇಂಧನ ಸಚಿವ ಕೆ.ಜೆ.ಜಾರ್ಜ್ ನಾಪತ್ತೆಯಾಗಿದ್ದಾರೆ. ಸಚಿವರನ್ನು ಹುಡುಕಿಕೊಟ್ಟವರಿಗೆ ಸಿಂಗಲ್ ಫೇಸ್ ವಿದ್ಯುತ್ ಉಚಿತ, ಖಚಿತ, ನಿಶ್ಚಿತವೆಂದು ಫ್ಲೆಕ್ಸ್‌ಗಳನ್ನು ಹಿಡಿದು ವ್ಯಂಗ್ಯವಾಡಲಾಯಿತು.

ರಾಜಧಾನಿಯಲ್ಲಿ ನಡೆದಿರುವ ಐಟಿ ದಾಳಿಯಲ್ಲಿ ನೂರಾರು ಕೋಟಿ ರೂ ಪತ್ತೆಯಾಗಿದೆ. ಈ ಹಣದ ಮೂಲ ಕಾಂಗ್ರೆಸ್ಸಿಗರಿಗೆ ಸೇರಿದ್ದಾಗಿದೆ. ಹೊರ ರಾಜ್ಯಗಳಲ್ಲಿ ನಡೆಯುತ್ತಿರುವ ಚುನಾವಣೆಗೆಂದು ರಾಜ್ಯ ಕಾಂಗ್ರೆಸ್ ಸರ್ಕಾರ ಹಣ ಸಂಗ್ರಹಿಸಿ ತನ್ನ ಹೈಕಮಾಂಡ್‌ಗೆ ಕಳುಹಿಸುತ್ತಿದೆ. ಕಾಂಗ್ರೆಸ್ ಪಕ್ಷಕ್ಕೆ ರಾಜ್ಯ ಸರ್ಕಾರ ಎಟಿಎಂ ಹಾಗೂ ಶೇ.60 ಕಮಿಷನ್ ಪಡೆಯುವ ಸರ್ಕಾರವಾಗಿ ಬದಲಾಗಿದೆ. ಅಧಿಕಾರಿಗಳಿಗೆ ಹಣ ವಸೂಲು ಮಾಡಲು ಟಾರ್ಗೆಟ್ ನೀಡಲಾಗಿದೆ. ಹಿರಿಯ ಕಲಾವಿದ ಪಂಡಿತ್ ರಾಜೀವ್ ತಾರಾನಾಥ್ ಅವರ ಕಾರ್ಯಕ್ರಮ ನೀಡಲು ಕಮಿಷನ್‌ಗೆ ಬೇಡಿಕೆ ಇಡಲಾಗಿದೆ ಎನ್ನುವ ಆರೋಪವಿದೆ. ಇದು ರಾಜ್ಯಸರ್ಕಾರದ ಕಮಿಷನ್ ದಂಧೆಗೆ ಸಾಕ್ಷಿಯಾಗಿದೆ. ಆದ್ದರಿಂದ ಭ್ರಷ್ಟಾಚಾರದ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಬಿಜೆಪಿ ರಾಜ್ಯಕಾರ್ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ, ಒಕ್ಕಲಿಗರ ಸಂಘದ ನಿರ್ದೇಶಕ ಅಶೋಕ್ ಜಯರಾಂ, ಜಿಲ್ಲಾ ಮಾಧ್ಯಮ ವಕ್ತಾರ ಸಿ.ಟಿ.ಮಂಜುನಾಥ್, ನಗರ ಘಟಕದ ಮಾಜಿ ಅಧ್ಯಕ್ಷ ಅರವಿಂದ್, ವಿವೇಕ್, ನಾಗಾನಂದ್, ಪ್ರಸನ್ನ, ಹನಿಯಂಬಾಡಿ ನಾಗರಾಜು, ಸುರೇಶ್, ಬಿ.ಟಿ.ಶಿವಲಿಂಗಯ್ಯ, ಮಹಾಂತಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net