

ಮಂಡ್ಯ: ಕೃಷಿ ಇಲಾಖೆ ಅಧಿಕಾರಿಗಳ ಬಳಿ ಲಂಚಕ್ಕೆ ಬೇಡಿಕೆ ಇಟ್ಟಿರುವ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ರಾಜೀನಾಮೆ ಹಾಗೂ ರಾಜ್ಯ ಸರ್ಕಾರದ ಮಂತ್ರಿಗಳು ಮಾಡುತ್ತಿರುವ ಭ್ರಷ್ಟಾಚಾರ ವಿರೋಧಿಸಿ ಆ.11ರಿಂದ ನಗರದಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಎನ್.ಚಲುವರಾಯಸ್ವಾಮಿ ಅವರು ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರ ಮೂಲಕ ಪ್ರತಿ ತಾಲೂಕಿನ ಸಹಾಯಕ ಕೃಷಿ ಅಧಿಕಾರಿಗಳಿಂದ 6 ರಿಂದ 8 ಲಕ್ಷ ರೂ ಲಂಚದ ಹಣವನ್ನು ಸಂಗ್ರಹ ಮಾಡಲು ಸೂಚಿಸಿದ್ದರ ವಿರುದ್ಧ ರಾಜ್ಯಪಾಲರಿಗೆ ಅಧಿಕಾರಿಗಳು ಪತ್ರ ಬರೆದು ನಮ್ಮ ಕುಟುಂಬ ಸಮೇತ ವಿಷ ಕುಡಿಯುತ್ತೇವೆ ಎಂದು ವಿವರಿಸಿದ್ದಾರೆ. ರಾಜ್ಯ ಸರ್ಕಾರದ ಇತಿಹಾಸದಲ್ಲೇ ಅಧಿಕಾರಿಗಳು ಸಚಿವರ ವಿರುದ್ದ ಪತ್ರ ಬರೆದಿರುವುದು ಲಜ್ಜೆಗೇಡಿತನದ ಸಂಗತಿಯಾಗಿದೆ. ಆದ್ದರಿಂದ ಆರೋಪ ಮುಕ್ತರಾಗುವವರೆಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ತನಿಖೆಗೆ ಸಹಕಾರ ನೀಡಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ಡಾ.ಎನ್.ಎಸ್.ಇಂದ್ರೇಶ್, ಶ್ರೀಧರ್, ಪ.ನಾ.ಸುರೇಶ್, ಬಸವರಾಜು, ವಸಂತಕುಮಾರ್ ಇತರರಿದ್ದರು.