

ವಿಜಯವಾಣಿ ಸುದ್ದಿಜಾಲ ಧಾರವಾಡ
ರಾಜ್ಯ ಬಜೆಟ್‌ನಲ್ಲಿ ಅಲ್ಪಸಂಖ್ಯಾತರಿಗೆ ಗುತ್ತಿಗೆಯಲ್ಲಿ ಶೇ. 4 ಮೀಸಲಾತಿ ನೀಡುವ ರಾಜ್ಯ ಕಾಂಗ್ರೆಸ್ ಸರ್ಕಾರದ ಧೋರಣೆ ಖಂಡಿಸಿ ಬಿಜೆಪಿ ಮಹಾನಗರ ಹಾಗೂ ಗ್ರಾಮಾಂತರ ಕಾರ್ಯಕರ್ತರಿಂದ ನಗರದ ಕೋರ್ಟ್ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು. ಮಾಜಿ ಮೇಯರ್ ಈರೇಶ ಅಂಚಟಗೇರಿ ಮಾತನಾಡಿ, ರಾಜ್ಯ ಸರ್ಕಾರ ಮುಸ್ಲಿಂ ತುಷ್ಟೀಕರಣ, ಧರ್ಮ ಆಧಾರಿತ ರಾಜಕಾರಣ ಮಾಡುವ ಮೂಲಕ ಬಹುಸಂಖ್ಯಾತ ಹಿಂದುಗಳಿಗೆ ಅನ್ಯಾಯ ಮಾಡುತ್ತಿದೆ. ಸರ್ಕಾರ ಈ ನಿರ್ಧಾರ ಕೈ ಬಿಡಬೇಕು ಎಂದರು.
ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ ಮಾತನಾಡಿ, ರಾಜ್ಯ ಸರ್ಕಾರ ಹಿಂದುಗಳಿಗೆ ಅನ್ಯಾಯ ಎಸಗುತ್ತಿದ್ದು, ಗುತ್ತಿಗೆಯಲ್ಲಿ ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡುವುದು ನ್ಯಾಯವಲ್ಲ. ಮತ ಬ್ಯಾಂಕ್ ರಾಜಕಾರಣ ಮಾಡುತ್ತಿರುವ ರಾಜ್ಯ ಸರ್ಕಾರ ಕೈ ಬಿಡದಿದ್ದರೆ ಹೋರಾಟ ಮುಂದುವರಿಸಲಾಗುವುದು ಎಂದರು.
ಕೋರ್ಟ್ ವೃತ್ತದಲ್ಲಿ ರಸ್ತೆ ತಡೆ ನಡೆಸಿದ್ದರಿಂದ ಕೆಲ ಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು.
ಬಿಜೆಪಿ ಮುಖಂಡರಾದ ಮಹೇಂದ್ರ ಕೌತಾಳ, ಲಿಂಗರಾಜ ಪಾಟೀಲ, ಜಯತೀರ್ಥ ಕಟ್ಟಿ, ನಿಂಗಪ್ಪ ಸುತಗಟ್ಟಿ, ಸಂಜಯ ಕಪಟಕರ, ಸುನೀಲ ಮೋರೆ, ಶ್ರೀನಿವಾಸ ಕೋಟ್ಯಾನ್, ಶಂಕರ ಶೆಳಕೆ, ದತ್ತಮೂರ್ತಿ ಕುಲಕರ್ಣಿ, ಶಿವು ಮೆಣಸಿನಕಾಯಿ, ಶಿವು ಹೀರೆಮಠ, ಜಯತೀರ್ಥ ಕಟ್ಟಿ, ಬಸವರಾಜ ಕುಂದಗೋಳಮಠ, ಸತೀಶ ಶೇಜವಾಡಕರ, ಮೋಹನ ರಾಮದರ್ಗ, ಸುರೇಶ ಬೇದರೆ, ಪ್ರಮೋದ ಕಾರಕೂನ, ಇತರರಿದ್ದರು.