

ಮಂಡ್ಯ: ಮೈಸೂರು ಮುಡಾದಲ್ಲಿನ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ನಗರದಲ್ಲಿ ಬಿಜೆಪಿಯಿಂದ ಪ್ರತಿಭಟನೆ ನಡೆಸಲಾಯಿತು.
ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ಸರ್‌ಎಂವಿ ಪ್ರತಿಮೆ ಎದುರು ಜಮಾಯಿಸಿದ ಮುಖಂಡರು ಮತ್ತು ಕಾರ್ಯಕರ್ತರು, ಸಿಎಂ ಸಿದ್ದರಾಮಯ್ಯ ಮತ್ತು ರಾಜ್ಯಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಅಂತೆಯೇ ಹಗರಣಕ್ಕೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆನ್ನುವ ಕಾರಣಕ್ಕೆ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಬಗ್ಗೆ ಅವಹೇಳನಕಾರಿ ಹಾಗೂ ಪ್ರಚೋದನಾಕಾರಿ ಹೇಳಿಕೆ ನೀಡಿರುವ ಕಾಂಗ್ರೆಸ್ ನಾಯಕರ ವಿರುದ್ಧ ಘೋಷಣೆ ಮೊಳಗಿಸಿದರು. ಮಾತ್ರವಲ್ಲದೆ ರಾಜ್ಯಪಾಲರ ವಿರುದ್ಧ ಬೆದರಿಕೆ ಮಾತುಗಳನ್ನಾಡಿರುವ ಕಾಂಗ್ರೆಸ್ ನಾಯಕರನ್ನು ಕಾನೂನು ಚೌಕಟ್ಟಿಗೆ ಒಳಪಡಿಸಿ ಕ್ರಮ ವಹಿಸಬೇಕೆಂದು ಆಗ್ರಹಿಸಿದರು.
ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಂಪುಟದ ಮಂತ್ರಿಗಳಿಗೆ ರಾಜ್ಯಪಾಲರು ಅಧಿಕಾರ ನೀಡಿದ್ದಾರೆ. ಆದರೆ ಅದೆನ್ನಲ್ಲ ಮರೆತು ಸಾಂವಿಧಾನಿಕ ರಾಜ್ಯಪಾಲರ ಹುದ್ದೆಗೆ ಅಗೌರವ ತರುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಮೈಸೂರು ಮುಡಾದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿರುವುದರಿಂದ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅವರು ತನಿಖೆಗೆ ಆದೇಶ ನೀಡಿದ್ದಾರೆ. ಹಗರಣಕ್ಕೆ ಸಂಬಂಧಿಸಿದಂತೆ ತನಿಖೆಯನ್ನೇ ಮಾಡಬಾರದು ಎಂದರೆ ಅದು ತುಘಲಕ್ ದರ್ಬಾರ್ ಎಂದು ರಾಜ್ಯ ಸರ್ಕಾರವನ್ನು ಟೀಕಿಸಿದರು.
ಪ್ರಾಸಿಕ್ಯೂಷನ್ ವಿರುದ್ಧ ಪ್ರತಿಭಟನೆ ನಡೆಸಿದ ಕಾಂಗ್ರೆಸ್‌ನವರು ರಾಜ್ಯಪಾಲರ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು ಅವಮಾನ ಮಾಡಿದ್ದಾರೆ. ಇದು ದಲಿತ ಸಮುದಾಯಕ್ಕೆ ಮಾಡುತ್ತಿರುವ ಅವಮಾನ. ಕಾಂಗ್ರೆಸ್ ಪಕ್ಷ ಹಾಗೂ ನಾಯಕರು ರಾಜ್ಯಪಾಲರಲ್ಲಿ ಕೂಡಲೇ ಕ್ಷಮೆ ಕೇಳಬೇಕು. ಸಂವಿಧಾನಕ್ಕೆ ಅಗೌರವ ತರುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಮುಡಾದಲ್ಲಿ ನಿವೇಶನ ಪಡೆದುಕೊಂಡಿರುವ ವಿಚಾರದಲ್ಲಿ ಯಾವುದೇ ತಪ್ಪು ಮಾಡಿಲ್ಲ ಎಂದರೆ ಕೋರ್ಟ್‌ನಲ್ಲಿ ಕೇಳಬೇಕು. ಅದನ್ನು ಬಿಟ್ಟು ಸಿಎಲ್‌ಪಿ ಮೀಟಿಂಗ್ ಮಾಡಿದರೆ ಏನು ಪ್ರಯೋಜನ ಇಲ್ಲ ಎಂದು ವ್ಯಂಗ್ಯವಾಡಿದರು.
ರಾಜ್ಯದಲ್ಲಿ ಯಾರು ಕಲ್ಲು ಹೊಡೆಯುತ್ತಿದ್ದಾರೆ, ಯಾರು ಬೆಂಕಿ ಹಚ್ಚುತ್ತಿದ್ದಾರೆ ಎಂದು ಎಲ್ಲ ಗೊತ್ತು. ನಾವೇನು ಗುಲ್ಡುಗಳಲ್ಲ. ಕಾಂಗ್ರೆಸ್ ಎಂಎಲ್‌ಸಿ ಐವಾನ್ ಡಿಸೋಜ ಬಾಂಗ್ಲಾ ಮಾದರಿಯ ದಾಳಿ ನಡೆಯುತ್ತದೆ ಎಂದು ಹೇಳಿದ್ದರಿಂದ ರಾಜ್ಯಪಾಲರಿಗೆ ಬುಲೆಟ್ ಪ್ರೂಫ್ ಕಾರ್ ಕೊಟ್ಟಿದ್ದಾರೆ. ಐವಾನ್ ಡಿಸೋಜ ಎಂಬ ಕಳ್ಳ ಇದ್ದಾನೆ. ಬಾಂಗ್ಲಾದೇಶದಲ್ಲಿ ದಾಳಿಯಾಗಿರುವ ರೀತಿಯಲ್ಲೇ ರಾಜ್ಯದಲ್ಲೂ ಆಗುತ್ತದೆ ಎಂದು ವಿಧಾನ ಪರಿಷತ್ ಶಾಸಕ ಐವಾನ್ ಡಿಸೋಜ ಹೇಳುತ್ತಾನೆ. ಆತ ಐಎಸ್‌ಐ ಏಜೆಂಟ್. ಬಾಂಗ್ಲಾ ಮಾದರಿಯಲ್ಲಿ ದಾಳಿ ಆಗುತ್ತೆ ಎನ್ನುವುದಕ್ಕೆ ನಾಚಿಕೆ ಆಗಲ್ವಾ?. ನಮ್ಮದು ಪಾಕಿಸ್ತಾನ, ಬಾಂಗ್ಲಾದೇಶ ಅಲ್ಲ. ನಮ್ಮದು ಭಾರತ. ಕಾಂಗ್ರೆಸ್ ಪಕ್ಷ ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದರು.
ಐವಾನ್ ಡಿಸೋಜರನ್ನು ಇಲ್ಲಿಗೆ ಬಿಡಲ್ಲ. ರಾಜ್ಯಪಾಲರ ಭಾವಚಿತ್ರಕ್ಕೆ ಚಪ್ಪಲಿಯಲ್ಲಿ ಹೊಡೆಯುತ್ತಾರೆ. ಅದೇ ಸಿಎಂ ಸಿದ್ದರಾಮಯ್ಯಗೆ ಸೈಟ್ ನುಂಗಿರುವುದಕ್ಕೆ ಹಾಲಿನ ಅಭಿಷೇಕ ಮಾಡುತ್ತಾರೆ. ಅತ್ತ ಸಿದ್ದರಾಮಯ್ಯ ಅವರು ನಾನು ಕ್ಲೀನ್ ಎನ್ನುತ್ತಾರೆ. ಅವರು ಕೇವಲ ಸಿದ್ದರಾಮಯ್ಯ ಅಲ್ಲ, ವೈಟ್ನರ್ ಸಿದ್ದರಾಮಯ್ಯ. ನಾನು ಕಳ್ಳ ಅಲ್ಲವೆಂದು ಸಿದ್ದರಾಮಯ್ಯ ಹೇಳಿದರೆ ಯಾರು ನಂಬುತ್ತಾರೆ. ಮುಡಾ ಹಗರಣಕ್ಕೆ ನ್ಯಾಯಾಲಯ ಯಾವುದೇ ಸ್ಟೇ ಕೊಟ್ಟಿಲ್ಲ. 29ಕ್ಕೆ ಮುಂದೂಡಿದೆ ಅಷ್ಟೇ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್, ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಕೆ.ಎಸ್.ನಂಜುಂಡೇಗೌಡ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅಶೋಕ್ ಜಯರಾಂ, ಮನ್‌ಮುಲ್ ನಿರ್ದೇಶಕ ಸಾದೊಳಲು ಸ್ವಾಮಿ, ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್, ಮಾಧ್ಯಮ ಸಂಚಾಲಕ ನಾಗಾನಂದ್, ಡಾ.ಸದಾನಂದ, ಅಶೋಕ್ ಕುಮಾರ್, ಸಚಿನ್, ಹನುಮಂತು, ಶಿವಕುಮಾರ ಆರಾಧ್ಯ, ಟಿ.ಎಸ್.ವಿವೇಕ್, ಹೇಮಾವತಿ, ಸುಕನ್ಯಾ, ಶಿವಮ್ಮ, ತಾಯಮ್ಮ, ಪುಟ್ಟಮ್ಮ, ಸುಜಾತಾ ಕೃಷ್ಣ ಇತರರಿದ್ದರು.