ಸಿಎಂ ಧೋರಣೆಗೆ ಅಸಮಾಧಾನ

bjp protest against congress in kolar
ಕೋಲಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಜಿಲ್ಲಾ ಅಧ್ಯಕ್ಷ ಡಾ. ವೇಣುಗೋಪಾಲ್​, ಮಾಜಿ ಶಾಸಕ ವೈ.ಸಂಪಂಗಿ, ಕೆಯುಡಿಎ ಮಾಜಿ ಅಧ್ಯಕ್ಷ ವಿಜಯಕುಮಾರ್​, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ ಇದ್ದರು.
Published on

ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ : ಸಿಎಂ ಸಿದ್ದರಾಮಯ್ಯ ಪ್ರತಿಕೃತಿ ದಹನ

ಕೋಲಾರ: ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಸರ್ವಾಧಿಕಾರದ ಧೋರಣೆ ಅನುಸರಿಸುತ್ತಿದೆ. ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸದೆ ಅಧಿಕಾರಿಗಳ ವರ್ಗಾವಣೆ ದಂಧೆಯಲ್ಲಿ ಮುಳುಗಿ, ಅಧಿಕಾರ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ನಗರದ ಹೊಸ ಬಸ್​ ನಿಲ್ದಾಣ ವೃತ್ತದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್​ ಮಾತನಾಡಿ, ಕಾಂಗ್ರೆಸ್​ ಆಡಳಿತದಲ್ಲಿ 48 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಐಎಎಸ್​ ಅಧಿಕಾರಿಗಳನ್ನು ಐಎನ್​ಡಿಐಎ ಸಭೆಗೆ ಆಗಮಿಸಿದ್ದ ವಿವಿಧ ಪಕ್ಷಗಳ ಮುಖಂಡರಿಗೆ ಯೋಗಕ್ಷೇಮ ನೋಡಿಕೊಳ್ಳಲು ನೇಮಿಸುವ ಮೂಲಕ ದ್ವಾರಪಾಲಕರು ಮತ್ತು ಕಾರ್ಯಕರ್ತರನ್ನಾಗಿ ಮಾಡಿಕೊಂಡಿದ್ದಾರೆ. ವರ್ಗಾವಣೆಗೆ ದರಗಳನ್ನು ನಿಗದಿಪಡಿಸಿ ದಂಧೆಯನ್ನಾಗಿ ಪರಿವರ್ತಿಸಿಕೊಂಡಿದ್ದಾರೆ. ಇತ್ತೀಚೆಗೆ ನಡೆದ ಬಜೆಟ್​ ಅಧಿವೇಶನದಲ್ಲಿ ರೈತರ ಆತ್ಮಹತ್ಯೆ, ಬೆಲೆ ಏರಿಕೆ, ವರ್ಗಾವಣೆ ಧಂದೆ, ಭಯೋತ್ಪಾದಕತೆ ಬಗ್ಗೆ ಮಾತನಾಡಲು ಅವಕಾಶ ನೀಡದೆ ಸರ್ವಾಧಿಕಾರ ಆಡಳಿತ ನಿರ್ವಹಿಸುತ್ತಿದ್ದಾರೆ ಎಂದು ದೂರಿದರು.
ಸಭಾಧ್ಯಕ್ಷ ಯು.ಟಿ.ಖಾದರ್​ ಕಾಂಗ್ರೆಸ್​ ಕಾರ್ಯಕರ್ತರಂತೆ ನಡೆದುಕೊಂಡಿದ್ದಾರೆ. ಪಕ್ಷದ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಇದಕ್ಕೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಲು ಅರ್ಧಗಂಟೆ ಕಾದು ಕುಳಿತಿದ್ದುದೇ ಇದಕ್ಕೆ ಸಾಕ್ಷಿ. ಸಭಾಧ್ಯಕ್ಷರು ಪಕ್ಷಬಂಧದಿಂದ ಮುಕ್ತವಾಗಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕೆಂಬುದು ಅವರ ಅರಿವಿಗಿಲ್ಲ ಎಂದರು.
ಜಿಲ್ಲಾ ವಕ್ತಾರ ಎಸ್​.ಬಿ.ಮುನಿವೆಂಕಟಪ್ಪ ಮಾತನಾಡಿ, ಕೇಂದ್ರ ಸರ್ಕಾರವು ಫಸಲ್​ ಬಿಮಾ ಯೋಜನೆಯಲ್ಲಿ ರೈತರ ಖಾತೆಗೆ 6 ಸಾವಿರ ರೂ. ಬಿಡುಗಡೆ ಮಾಡಿದ್ದು, ರಾಜ್ಯಸರ್ಕಾರವು 4 ಸಾವಿರ ರೂ. ಜಮೆ ಮಾಡಬೇಕಾಗಿದೆ. ನೀರಾವರಿಗೆ ಅನುದಾನಗಳನ್ನು ಬಿಡುಗಡೆ ಮಾಡಬೇಕು. ರೈತರು ಕೃಷಿ ಉತ್ಪನ್ನವನ್ನು ಸ್ವತಂತ್ರವಾಗಿ ಮಾರಾಟ ಮಾಡುವ ಹಕ್ಕನ್ನು ಕಸಿದು ಎಪಿಎಂಸಿ ಮಾರುಕಟ್ಟೆಯಲ್ಲಿ ದಲ್ಲಾಳಿಗಳ ಮೂಲಕವೇ ಕಮಿಷನ್​ ನೀಡಿ ಮಾರಾಟ ಮಾಡುವ ಹುನ್ನಾರ ಮಾಡಿದ್ದಾರೆ ಎಂದು ದೂರಿದರು.
ಮಾಜಿ ಶಾಸಕ ವೈ.ಸಂಪಂಗಿ ಮಾತನಾಡಿ, ರಾಜ್ಯದಲ್ಲಿ ಶಾಂತಿ, ಸುವ್ಯವಸ್ಥೆ ಹದಗೆಟ್ಟಿದೆ. ಗೃಹ ಇಲಾಖೆ ವೈಫಲ್ಯದಿಂದ ಹತ್ಯೆ, ಕಳವು, ಅತ್ಯಾಚಾರ, ದರೋಡೆ ಮತ್ತಿತರ ಪ್ರಕರಣಗಳು ಹೆಚ್ಚಾಗುತ್ತಿವೆ. ಸಾರ್ವಜನಿಕರು ನೆಮ್ಮದಿಯಿಂದ ಜೀವನ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಜೈನಮುನಿ ಭೀಕರ ಹತ್ಯೆ, ಬೆಂಗಳೂರಿನಲ್ಲಿ ಐವರು ಉಗ್ರರು ಬಾಂಬ್​ ಸ್ಫೋಟಿಸಲು ರೂಪಿಸಿದ ಸಂಚು ಸೇರಿ ನಾನಾ ಕಡೆ ಕ್ರಿಮಿನಲ್​ ಪ್ರಕರಣಗಳು ನಡೆಯುತ್ತಿದ್ದರೂ ಅಪರಾಧಿಗಳನ್ನು ಪತ್ತೆ ಹಚ್ಚಿ ಜೈಲಿಗೆ ಕಳುಹಿಸುವ ಕೆಲಸ ಮಾಡುತ್ತಿಲ್ಲ ಎಂದರು.
ಸಿದ್ದರಾಮಯ್ಯರ ಪ್ರತಿಕೃತಿ ದಹನ ಮಾಡಲಾಯಿತು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ, ಕೆಯುಡಿಎ ಮಾಜಿ ಅಧ್ಯಕ್ಷ ವಿಜಯಕುಮಾರ್​, ದಿಶಾ ಸಮಿತಿ ಸದಸ್ಯ ಅಪ್ಪಿನಾರಾಯಣಸ್ವಾಮಿ, ತಾಲೂಕು ಅಧ್ಯಕ್ಷ ಸಿ.ಡಿ.ರಾಮಚಂದ್ರ, ನಗರ ಘಟಕ ಅಧ್ಯಕ್ಷ ತಿಮ್ಮರಾಯಪ್ಪ, ಕಾರ್ಯದರ್ಶಿ ರಾಜೇಶ್​ಸಿಂಗ್​, ಮಾಧ್ಯಮ ವಕ್ತಾರ ಕೆಂಬೋಡಿ ನಾರಾಯಣಸ್ವಾಮಿ, ಆಶ್ರಯ ಸಮಿತಿ ಮಾಜಿ ಸದಸ್ಯ ಗೋವಿಂದರಾಜು, ಮುಖಂಡರಾದ ಮಾಗೇರಿ ನಾರಾಯಣಸ್ವಾಮಿ, ಶಿಳ್ಳೆಂಗೆರೆ ಮಹೇಶ್​, ಶ್ರೀನಿವಾಸಪುರ ಮುನಿವೆಂಕಟಪ್ಪ, ಮುಳಬಾಗಿಲು ಸುಂದರ್​, ಬಂಗಾರಪೇಟೆ ಚಂದ್ರಾರೆಡ್ಡಿ, ಮಂಜುನಾಥ್​ ಸಿಂಗ್​, ವೇಮಗಲ್​ ಓಹೀಲೇಶ್​, ಬಾಲಾಜಿ. ಮಂಜುನಾಥ್​,
ಮಹಿಳಾ ನಾಯಕಿ ಮಮತಮ್ಮ ಇದ್ದರು.

ಸ್ಥಳದಲ್ಲೇ ಉಳಿದ ಕಸ!
ರಾಜ್ಯ ಸರ್ಕಾರದ ವಿರುದ್ಧ ಜಿಲ್ಲಾ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಸಿದ್ದರಾಮಯ್ಯ ಪ್ರತಿಕೃತಿ ದಹಿಸಲು ತಂದಿದ್ದ ಪ್ಲಾಸ್ಟಿಕ್​, ರಬ್ಬರ್​, ಹಳೇ ಚಪ್ಪಲಿಗಳು, ಮತ್ತು ಒಣ ಹುಲ್ಲು, ಕಡ್ಡಿಗಳು, ಅರೆಬೆಂದ ಸ್ಥಿತಿಯಲ್ಲಿ ರಸ್ತೆ ಮಧ್ಯೆ ಹಾಗೆಯೇ ಬಿದ್ದು ಕೆಲಕಾಲ ಸಾರ್ವಜನಿಕರು ಮತ್ತು ವಾಹನ ಸವಾರರಿಗೆ ತೊಂದರೆ ಉಂಟು ಮಾಡಿತು. ಅರೆಬೆಂದ ಸ್ಥಿತಿಯಲ್ಲಿ ಬಿದ್ದಿದ್ದರಿಂದ ಪ್ರತಿಭಟನೆ ಮುಗಿದರೂ ರಸ್ತೆಯಲ್ಲಿ ಪ್ಲಾಸ್ಟಿಕ್​ ಸುಟ್ಟ ಕೆಟ್ಟ ವಾಸನೆ ಮತ್ತು ಹೊಗೆ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾದವು. ಸ್ವಲ್ಪ ಸಮಯದ ನಂತರ ಇದನ್ನು ಗಮನಿಸಿದ ಮಪ್ತಿ ಪೊಲೀಸ್​ ಪೇದೆಯೊಬ್ಬರು ಬಿಂದಿಗೆಯಲ್ಲಿ ನೀರುತಂದು ಉರಿಯುತ್ತಿದ್ದ ಪ್ರತಿಕೃತಿಯ ಮೇಲೆ ಸುರಿದು ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net