

ಮಂಡ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್‌ನಲ್ಲಿ ರೈತ ಹಾಗೂ ದಲಿತ ವಿರೋಧಿ ನೀತಿ ಅನುಸರಿಸಿದೆ ಎಂದು ಆರೋಪಿಸಿ ನಗರದಲ್ಲಿ ಜಿಲ್ಲಾ ಬಿಜೆಪಿಯಿಂದ ಪ್ರತಿಭಟನೆ ನಡೆಸಲಾಯಿತು.
ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಜಮಾಯಿಸಿದ ಮುಖಂಡರು ಹಾಗೂ ಕಾರ್ಯಕರ್ತರು, ರಾಜ್ಯಸರ್ಕಾರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಅಲ್ಪಸಂಖ್ಯಾತ ಸಮುದಾಯಕ್ಕೆ ಹೆಚ್ಚಿನ ಆದ್ಯತೆ ಕೊಟ್ಟು ಇಡೀ ರಾಜ್ಯದ ಜನರಿಗೆ ಚೆಂಬು ಕೊಟ್ಟು ವಂಚಿಸಲಾಗಿದೆ ಎಂದು ಟೀಕಿಸಲಾಯಿತು.
ಯುವ ಮುಖಂಡ ಇಂಡುವಾಳು ಸಚ್ಚಿದಾನಂದ ಮಾತನಾಡಿ, ಕಾಂಗ್ರೆಸ್ ದಲಿತ ವಿರೋಧಿ ಧೋರಣೆ ಅನುರಿಸುತ್ತಿರುವುದು ಇದೇ ಮೊದಲೇನಲ್ಲ. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ಅವಮಾನ ಮಾಡಿತ್ತು. ಈಗ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗದವರ ಬೆಂಬಲ ಪಡೆದು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ, ಈ ಬಜೆಟ್ ಮೂಲಕ ದಲಿತ ವಿರೋಧಿ ಎನ್ನುವುದನ್ನು ತೋರಿಸಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಚಿವರಾದ ಎಚ್.ಸಿ.ಮಹದೇವಪ್ಪ, ಪ್ರಿಯಾಂಕ್ ಖರ್ಗೆ ಅವರು ಬಜೆಟ್‌ನಲ್ಲಿ ದಲಿತ ಸಮುದಾಯಕ್ಕೆ ಅನುದಾನ ಮೀಸಲಿರಿಸುವಂತೆ ಮಾಡುವಲ್ಲಿ ವಿಫಲರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಇನ್ನು ಕೃಷಿ ಕ್ಷೇತ್ರವನ್ನು ಸಂಪೂರ್ಣವಾಗಿ ಕಡೆಗಣಿಸುವ ಮೂಲಕ ರೈತರನ್ನು ವಂಚಿಸುವ ಕೆಲಸವನ್ನು ರಾಜ್ಯಸರ್ಕಾರ ಮಾಡಿದೆ. ಕೃಷಿ, ತೋಟಗಾರಿಕೆ, ಪಶುಪಾಲನೆ ಇಲಾಖೆ ಸೇರಿಯೂ 15 ಸಾವಿರ ಕೋಟಿ ರೂ ಬಜೆಟ್ ನೀಡಿಲ್ಲ. ಈ ಮೂಲಕ ಸಿಎಂ ಸಿದ್ದರಾಮಯ್ಯ ರೈತರಿಗೆ ಅವಮಾನ ಮಾಡಿದ್ದಾರೆ. ಯುವಕರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಇವರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೃಷಿ ಕ್ಷೇತ್ರಕ್ಕೆ ಆದ್ಯತೆ ನೀಡಿಲ್ಲ. ಶಾದಿ ಭಾಗ್ಯಕ್ಕೆ ತಲಾ 50 ಸಾವಿರ ರೂ ಆರ್ಥಿಕ ನೆರವು ನೀಡುತ್ತಿದ್ದಾರೆ. ಇದೇ ರೀತಿ ಯುವ ರೈತರು ಮದುವೆಯಾದರೆ ಮೂರು ಲಕ್ಷ ರೂ ಅಥವಾ ಉಚಿತವಾಗಿ ಒಂದು ಟ್ರಾೃಕ್ಟರ್, ಟಿಲ್ಲರ್ ಕೊಡಿ. ಇದರಿಂದ ಯಾವುದೇ ತಪ್ಪಾಗುವುದಿಲ್ಲ. ಇಲ್ಲದಿದ್ದರೆ ಮುಂದೆ ಕೃಷಿ ಮಾಡುವವರೇ ಇಲ್ಲದಂತಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಇದಲ್ಲದೆ ಕೃಷಿಗೆ ಪ್ರತ್ಯೇಕ ಬಜೆಟ್ ಮಂಡನೆ ಮಾಡುವ ಮೂಲಕ ವಿಶೇಷ ಪ್ಯಾಕೇಜ್ ನೀಡಬೇಕು. ಕನಿಷ್ಟ 50 ಸಾವಿರ ಕೋಟಿ ರೂಗಳನ್ನು ಕೃಷಿ ಹಾಗೂ ಇದಕ್ಕೆ ಪೂರಕವಾದ ಇಲಾಖೆಗೆಂದು ಮೀಸಲಿಡದಿದ್ದರೆ ಭವಿಷ್ಯದಲ್ಲಿ ಸಮಸ್ಯೆ ಎದುರಿಸಬೇಕಾಗುತ್ತದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕಿಸಾನ್ ಸಮ್ಮಾನ್ ಯೋಜನೆಯಡಿ ಪ್ರತಿ ರೈತರಿಗೆ 6 ಸಾವಿರ ರೂ ನೀಡುತ್ತಿದ್ದಾರೆ. ಇಂತಹ ರೈತಪರ ಕಾರ್ಯಕ್ರಮವನ್ನು ರಾಜ್ಯಸರ್ಕಾರ ನೀಡಬೇಕು. ಕೃಷಿ ಇಲ್ಲದೆ ದೇಶವಿಲ್ಲ ಎನ್ನುವುದನ್ನು ರಾಜ್ಯಸರ್ಕಾರ ಅರಿತುಕೊಳ್ಳಬೇಕು ಎಂದರು.
ಈ ಬಜೆಟ್ ಅನ್ನು ಮತ್ತೊಮ್ಮೆ ಪರಿಶೀಲನೆ ನಡೆಸಿ. 4 ಲಕ್ಷ ಕೋಟಿ ರೂ ಬಜೆಟ್ ಎಂದು ಬೀಗಬೇಡಿ. ಸಾಲವೇ ಒಂದು ಲಕ್ಷ ಕೋಟಿ ರೂ ಇದೆ. ಯೋಜನೆ ಹಾಗೂ ಯೋಜನೇತರ ವೆಚ್ಚವೆಂದು 2 ಲಕ್ಷ ಕೋಟಿ ರೂಗಳನ್ನು ವೇತನ ಕೊಡುವುದಕ್ಕೆ ಬೇಕು. ಉಳಿದ ಹಣದಲ್ಲಿ 50 ರಿಂದ 60 ಸಾವಿರ ಕೋಟಿ ರೂ ವೆಚ್ಚದ ಅಭಿವೃದ್ಧಿ ಕೆಲಸ ಮಾಡಬಹುದು. ಅದೆಲ್ಲವೂ ಒಂದೆಡೆ ಇರಲಿ, ರಾಜ್ಯಸರ್ಕಾರಕ್ಕೆ ಹಾಗೂ ಸಿಎಂ ಸಿದ್ದರಾಮಯ್ಯ ಅವರಿಗೆ ನಿಜವಾಗಿಯೂ ರೈತರ ಬಗ್ಗೆ ಕಾಳಜಿ ಇದ್ದರೆ ಕೃಷಿಗೆ ಒತ್ತು ನೀಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್, ನಗರ ಘಟಕದ ಅಧ್ಯಕ್ಷ ವಸಂತ್‌ಕುಮಾರ್, ವಿವೇಕ್, ಅರವಿಂದ್, ಶಿವಕುಮಾರ್ ಆರಾಧ್ಯ ಇತರರಿದ್ದರು.