

ಮಂಗಳೂರು : ನಗರದ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಶ್ರೀರಾಮ ದೇವರ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಅವಹೇಳನವನ್ನು ವಿರೋಧಿಸಿದ ಬಿಜೆಪಿ ಶಾಸಕರಾದ ಡಿ.ವೇದವ್ಯಾಸ ಕಾಮತ್ , ಡಾ.ವೈ.ಭರತ್ ಶೆಟ್ಟಿ ಹಾಗೂ ಪಾಲಿಕೆ ಸದಸ್ಯರಿಬ್ಬರ ಮೇಲೆ ದಾಖಲಿಸಿರುವ ಸುಳ್ಳು ಕೇಸನ್ನು ಹಿಂಪಡೆಯುವಂತೆ ಆಗ್ರಹಿಸಿ ಬಿಜೆಪಿ ಮಂಗಳೂರು ದಕ್ಷಿಣ ಮಂಡಲದ ವತಿಯಿಂದ ಸೋಮವಾರ ನಗರದ ಕ್ಲಾಕ್ ಟವರ್ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು. ಜೆರೋಸಾ ಸಂಸ್ಥೆಯ ಶಿಕ್ಷಕಿ ಪ್ರಭಾ ಅವರ ವಿರುದ್ಧ ಸೂಕ್ತ ಕ್ರಮ ವಹಿಸುವಂತೆ ಪ್ರತಿಭಟನಾಕಾರರು ಅಗ್ರಹಿಸಿದರು.
ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ್ ಮಾತನಾಡಿ ‘ಶಾಲೆಯಲ್ಲಿ ನೈತಿಕ ಶಿಕ್ಷಣವನ್ನು ಕಲಿಸಬೇಕು. ಅದು ಬಿಟ್ಟು ವಿದ್ಯಾರ್ಥಿಗಳನ್ನು ಧರ್ಮದ ವಿರುದ್ಧ ಎತ್ತಿಕಟ್ಟುವುದನ್ನು ಸಹಿಸಲಾಗದು. ಜೆರೋಸಾ ಸಂಸ್ಥೆಯ ಶಿಕ್ಷಿಯ ವಿರುದ್ಧ ಕೇಸು ಹಾಕುವ ಬದಲು ಶಾಸಕರ ಮೇಲೆ ಕೇಸು ಹಾಕಿರುವುದು ದುರದೃಷ್ಟಕರ. ಅಲ್ಪಸಂಖ್ಯಾತರನ್ನು ಓಲೈಕೆ ಮಾಡುತ್ತಿರುವ ಕಾಂಗ್ರೆಸ್‌ಗೆ ಮುಂಬರುವ ದಿನಗಳಲ್ಲಿ ತಕ್ಕ ಉತ್ತರ ದೊರೆಯಲಿದೆ. ಕಾಂಗ್ರೆಸ್ ಕಂಗಾಲಾಗುವ ದಿನ ದೂರವಿಲ್ಲ ಎಂದರು.
ಬಿಜೆಪಿ ಮಾಜಿ ವಕ್ತಾರ ರವಿಶಂಕರ ಮಿಜಾರು ಮಾತನಾಡಿ, ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಆಡಳಿತಕ್ಕೆ ಬಂದ ಮೇಲೆ ಅಶಾಂತಿಯ ವಾತಾವರಣ ನಿರ್ಮಾಣವಾಗಿದೆ. ಅಲ್ಪಸಂಖ್ಯಾತರ ಓಲೈಕೆ ಮಿತಿಮೀರಿದೆ ಎಂದರು.
ಕಾಂಗ್ರೆಸ್ ಸರಕಾರಕ್ಕೆ ಧಿಕ್ಕಾರ ಕೂಗುತ್ತ ಬಿಜೆಪಿ ಕಾರ್ಯಕರ್ತರು ರಸ್ತೆ ತಡೆಗೆ ಮುಂದಾದರು. ಆದರೆ ಪೊಲೀಸರು ಅವಕಾಶ ನೀಡಲಿಲ್ಲ. ಬಿಜೆಪಿ ದಕ್ಷಿಣ ಮಂಡಲ ಅಧ್ಯಕ್ಷ ರಮೇಶ್ ಕಂಡೆಟ್ಟು, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಮಂಜುಳಾ ರಾವ್, ಬಿಜೆಪಿ ಪ್ರಮುಖರಾದ ಪ್ರೇಮಾನಂದ ಶೆಟ್ಟಿ, ರಾಜ್‌ಗೋಪಾಲ್ ರೈ, ವಿಜಯ್ ಕುಮಾರ್ ಶೆಟ್ಟಿ, ಅನೂಪ್ ಶೆಟ್ಟಿ, ದಿವಾಕರ ಪಾಂಡೇಶ್ವರ, ಪೂರ್ಣಿಮಾ, ವಸಂತ ಪೂಜಾರಿ, ಜಯಲಕ್ಷ್ಮಿ ಶೆಟ್ಟಿ, ಪೂಜಾ ಪೈ, ಮಹೇಶ್, ಎಚ್.ಕೆ.ಪುರುಷೋತ್ತಮ ಮುಂತಾದವರು
ಭಾಗವಹಿಸಿದ್ದರು.