

ಮೈಸೂರು: ಅಯೋಧ್ಯೆ ಕರಸೇವಕ ಹುಬ್ಬಳ್ಳಿಯ ಶ್ರೀಕಾಂತ್ ಪೂಜಾರಿ ಬಂಧನ ಖಂಡಿಸಿ ಬಿಜೆಪಿ ಕಾರ್ಯಕರ್ತರು ನಗರದ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಹೋರಾಟದಲ್ಲಿ ನಾವು ಸಹ ಕರಸೇವಕರಾಗಿ ಪಾಲ್ಗೊಂಡಿದ್ದೆವು. ನಮ್ಮನ್ನು ಸಹ ಬಂಧಿಸಿ. ರಾಮಜನ್ಮಭೂಮಿ ವಿವಾದ ನ್ಯಾಯಾಲಯದಲ್ಲಿಯೇ ಇತ್ಯರ್ಥಗೊಂಡಿದೆ. ಹೀಗಿರುವಾಗ ಕರಸೇವಕರನ್ನು ಬಂಧಿಸುವುದು ಎಷ್ಟರ ಮಟ್ಟಿಗೆ ಸರಿ? ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಿರುವುದನ್ನು ಸಹಿಸದೆ ಕಾಂಗ್ರೆಸ್ ಸರ್ಕಾರ ಕರಸೇವಕ ಶ್ರೀಕಾಂತ್ ಪೂಜಾರಿ ಅವರನ್ನು ಬಂಧಿಸಿದ್ದಾರೆ ಎಂದು ಶಾಸಕ ಟಿ.ಎಸ್. ಶ್ರೀವತ್ಸ ಅಸಮಾಧಾನ ವ್ಯಕ್ತಪಡಿಸಿದರು.
ಗೋದ್ರಾ ಹತ್ಯಾಕಾಂಡ ಮಾದರಿಯಲ್ಲಿ ರಾಜ್ಯದಲ್ಲೂ ಹತ್ಯಾಕಾಂಡ ನಡೆಯುವ ಸಾಧ್ಯತೆ ಇದೆ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಹೇಳಿಕೆ ನೀಡಿದ್ದಾರೆ. ಕೂಡಲೇ ಅವರನ್ನು ಬಂಧಿಸಿದ ಈ ಬಗ್ಗೆ ವಿಚಾರಣೆಗೆ ಒಳಪಡಿಸಿ ಸತ್ಯಾಂಶ ಬಯಲಿಗೆ ಎಳೆಯಬೇಕು ಎಂದು ಒತ್ತಾಯಿಸಿದರು.
ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಹಿಂದುಗಳನ್ನು ಅವಹೇಳನ ಮಾಡುವ ಹಾಗೂ ಹಿಂದು ಕಾರ್ಯಕರ್ತರನ್ನು ಬಂಧಿಸುವಂತಹ ಕಾರ್ಯವನ್ನು ನಿರಂತರವಾಗಿ ಮಾಡುತ್ತಿದೆ. ತನ್ನ ಹೆಸರಿನಲ್ಲೇ ರಾಮನ ಹೆಸರನ್ನು ಇಟ್ಟುಕೊಂಡು ಈ ರೀತಿ ರಾಮಮಂದಿರದ ಉದ್ಘಾಟನೆಯನ್ನು ವಿರೋಧಿಸುತ್ತಿರುವುದು ಹಿಂದು ವಿರೋಧಿ ನೀತಿಯಾಗಿದೆ. ಮುಸ್ಲಿಮರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮುಸ್ಲಿಮರ ಅಭಿವೃದ್ಧಿಗೆ 10,000 ಕೋಟಿ ರೂ. ನೀಡುತ್ತೇನೆ ಎಂದು ಹೇಳುವ ಸಿದ್ದರಾಮಯ್ಯ, ಹಿಂದುಗಳ ಯಾವುದೇ ಕಾರ್ಯಕ್ರಮದಲ್ಲಿ ಹಿಂದುಗಳ ಅಭಿವೃದ್ಧಿಗಾಗಿ ಅಥವಾ ಸಮುದಾಯಗಳ ಅಭಿವೃದ್ಧಿಗಾಗಿ ಹಣ ನೀಡುತ್ತೇನೆ ಎಂದು ಘೋಷಿಸಿದ ಉದಾಹರಣೆ ಇಲ್ಲ ಎಂದು ಟೀಕಿಸಿದರು.
ಬಿಜೆಪಿ ಜಿಲ್ಲಾ ಸಹವಕ್ತಾರ ಡಾ.ಕೆ. ವಸಂತ್ ಕುಮಾರ್ ಮಾತನಾಡಿ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಈ ದೇಶದ ಕೋಟ್ಯಾಂತರ ಹಿಂದುಗಳ ಭಾವನೆಗೆ ಸಿಕ್ಕಂತಹ ಜಯ. ಇದು ದೇಶದ ಪ್ರತಿಯೊಬ್ಬ ಹಿಂದುಗಳಿಗೆ ಗೌರವ ಮತ್ತು ಹೆಮ್ಮೆಯ ಸಂಗತಿ. ಮೊದಲಿನಿಂದಲೂ ಬಾಬರಿ ಮಸೀದಿ ಪರವಾಗಿರುವ ಕಾಂಗ್ರೆಸ್ ಈಗಲೂ ಹಿಂದುವಿರೋಧಿ ನೀತಿ ಅನುಸರಿಸುತ್ತಿದ್ದು, ಮಂದಿರ ನಿರ್ಮಾಣಕ್ಕೆ ನಡೆದ ಹೋರಾಟದಲ್ಲಿ ಭಾಗವಹಿಸಿದ ಕರಸೇವಕ ಶ್ರೀಕಾಂತ್ ಪೂಜಾರಿಯನ್ನು ಬಂಧಿಸಿರುವುದು ಖಂಡನೀಯ ಎಂದರು.
ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಸಿದ್ದರಾಜು, ಮಾಜಿ ಶಾಸಕ ಎಲ್. ನಾಗೇಂದ್ರ, ಮಾಜಿ ಮೇಯರ್ ಶಿವಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷೆ ಮಂಗಳ ಸೋಮಶೇಖರ್, ನಗರ ಪ್ರಧಾನ ಕಾರ್ಯದರ್ಶಿಗಳಾದ ವಿ.ಸೋಮಸುಂದರ್, ವಾಣೀಶ್, ಗಿರಿಧರ್, ನಗರ ಮಹಿಳಾಮೋರ್ಚಾ ಅಧ್ಯಕ್ಷೆ ಹೇಮ ನಂದೀಶ್, ವಿವಿಧ ನಿಗಮ ಮಂಡಳಿಗಳ ಮಾಜಿ ಅಧ್ಯಕ್ಷರಾದ ಮಿರ್ಲೆ ಶ್ರೀನಿವಾಸ್ ಗೌಡ, ಎಸ್. ಮಹದೇವಯ್ಯ, ಯಶಸ್ವಿ ಸೋಮಶೇಖರ್, ಎಲ್.ಆರ್. ಮಹದೇವಸ್ವಾಮಿ, ಹೇಮಂತ್ ಕುಮಾರ್ ಗೌಡ, ಫಣೀಶ್ ಹಾಗೂ ಇತರರು ಪಾಲ್ಗೊಂಡಿದ್ದರು.