ಪರಪ್ಪನ ಅಗ್ರಹಾರ ಜೈಲಿನಲ್ಲಿ ಖೈದಿಗಳಿಗೆ ರಾಜಾತಿಥ್ಯ ಖಂಡಿಸಿ ಪ್ರತಿಭಟನೆ

12GDG03
Published on
ಗದಗ: ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಖೈದಿಗಳಿಗೆ ರಾಜಾತಿಥ್ಯ ನೀಡಲಾಗುತ್ತಿದೆ ಅಂತ ಆರೋಪಿಸಿ ಜಿಲ್ಲಾ ಬಿಜೆಪಿ ಯುವ ಮೋರ್ಚಾದಿಂದ ಪ್ರತಿಭಟನೆ ನಡೆಯಿತು. ಯುವ ಮೋರ್ಚಾ ಅಧ್ಯಕ್ಷ ಸಂತೋಷ ಅಕ್ಕಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಹೊಸ ಬಸ್ ನಿಲ್ದಾಣದಿಂದ ಎಸ್ಪಿ ಕಛೇರಿ ವರೆಗೆ ಪಾದಯಾತ್ರೆ ಮೂಲಕ ತೆರಳಿ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ದ ಆಕ್ರೋಶ ಹೋರಹಾಕಿದರು. ಗೃಹ ಸಚಿವ ಡಾ. ಜಿ. ಪರಮೇಶ್ವರ ಹಾಗೂ ಸಿಎಂ ಸಿದ್ರಾಮಯ್ಯ ಕೂಡಲೇ ರಾಜೀನಾಮೆ ನೀಡಬೇಕು ಅಂತ ಆಗ್ರಹಿಸಿ ಎಸ್ಪಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಎಸ್ ವ್ಹಿ ಸಂಕನೂರ, ವಿವಿಧ ಕ್ರಿಮಿನಲ್ ಪ್ರಕರಣಗಳಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರುವ ಕೈದಿಗಳಿಗೆ ರಾಜಾತಿಥ್ಯ ನೀಡುವ ಮೂಲಕ ರಾಜ್ಯ ಸರ್ಕಾರ ಕ್ರಿಮಿನಲ್‌ಗಳನ್ನು ಪೋಷಿಸುವ ಕೆಲಸ ಮಾಡುತ್ತಿದೆ. ಇದರಿಂದ ರಾಜ್ಯದ ಜನತೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಪರಾಧಿಕ ಮನಸ್ಸಿನಿಂದ ಹೊರಬರಲು ಶಿಕ್ಷೆಗೆ ಒಳಗಾದ ಕೈದಿಗಳಿಗೆ ಜೈಲುಗಳಲ್ಲೇ ರಾಜಾಶ್ರಯ ನೀಡುವ ಮೂಲಕ ರಾಜ್ಯ ಸರ್ಕಾರ ಭಯೋತ್ಪಾದಕರು, ಕ್ರಿಮಿನಲ್‌ಗಳು, ರೇಪಿಸ್ಟ್‌ಗಳಿಗಳ, ವಂಚಕರ ಪರವಾಗಿ ಸರ್ಕಾರ ಕೆಲಸ ಮಾಡುತ್ತಿದೆ ಅಂತ ಆಕ್ರೋಶ ವ್ಯಕ್ತಪಡಿಸಿದರು.
ಸಂತೋಷ ಅಕ್ಕಿ ಮಾತನಾಡಿ, ವಂಚಕರು, ಭಯೋತ್ಪಾದಕರು ಜೈಲಿನಲ್ಲಿ ನಿರ್ಭೀತಿಯಿಂದ ಓಡಾಡುತ್ತಿದ್ದಾರೆ. ಮೊಬೈಲ್, ಮಧ್ಯ, ಸಿಗರೇಟ್ ಸೇರಿದಂತೆ ಎಲ್ಲಾ ಸೌಲತ್ತುಗಳನ್ನು ಅವರು ಪಡೆಯುತ್ತಿದ್ದಾರೆ. ಇದು ರಾಜ್ಯವೇ ನಾಚಿಕೆಪಡುವ ಸಂಗತಿಯಾಗಿದೆ. ಈಗಾಗಲೇ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಉಗ್ರ ಚಟುವಟಿಕೆಯಲ್ಲಿ ಭಾಗಿಯಾದ ಭಯೋತ್ಪಾದಕನಿಗೆ ಮೊಬೈಲ್ ನೀಡಿರುವುದು ದೇಶಕ್ಕೆ ಗಂಡಾಂತರ ತರುವ ಕೃತ್ಯವಾಗಿದೆ. ಸೀರಿಯಲ್ ರೇಪಿಸ್ಟ್ ಉಮೇಶ್ ರೆಡ್ಡಿಯಂತಹ ಅಪರಾಧಿಗೆ ಐಷರಾಮಿ ಸೌಲತ್ತುಗಳನ್ನು ನೀಡಿರುವುದು ಕಣ್ಣಿಗೆ ರಾಚುವಂತಿದೆ ಎಂದರು.
ಅಕ್ರಮ ಚಿನ್ನ ಸಾಗಾಣಿಕೆ ಪ್ರಕರಣದಲ್ಲಿ ಜೈಲು ಸೇರಿದ ತರುಣ್ ಎನ್ನುವ ಆರೋಪಿಗೂ ಸಹ ರೆಸಾರ್ಟ್ ಸೌಲಭ್ಯ ನೀಡಿರುವುದನ್ನು ಗಮನಿಸಿದರೇ ಗೃಹ ಸಚಿವರು ನಿದ್ದೆ ಮಾಡುತ್ತಿದ್ದಾರೋ ಅಥವಾ ಎಲ್ಲವನ್ನು ಅವರೇ ವ್ಯವಸ್ಥೆ ಮಾಡಲು ಜೈಲಿನ ಅಧಿಕಾರಿಗಳಿಗೆ ಮೌಖಿಕ ಸೂಚನೆ ನೀಡಿದ್ದಾರೋ ಎನ್ನುವ ಅನುಮಾನಗಳು ಜನತೆಯನ್ನು ಕಾಡುತ್ತಿವೆ. ಈ ಕೃತ್ಯವನ್ನು ಬಿಜೆಪಿ ಯುವ ಮೋರ್ಚಾ ಜಿಲ್ಲಾ ಘಟಕ ತೀವ್ರವಾಗಿ ಖಂಡಿಸುತ್ತದೆ ಜೊತೆಗೆ ಈ ಎಲ್ಲಾ ಕಾರಣಗಳಿಗೆ ನೈತಿಕ ಹೊಣೆ ಹೊತ್ತು ರಾಜ್ಯದ ಮುಖ್ಯಮಂತ್ರಿ ಹಾಗೂ ಗೃಹಸಚಿವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಅಂತ ಆಗ್ರಹಿಸಿದರು.
ಈ ವೇಳೆ ನಗರಸಭೆ ಸದಸ್ಯೆ ವಿಜಯಲಕ್ಷ್ಮೀ ದಿಂಡೂರ, ವಿದ್ಯಾವತಿ ಗಡಗಿ, ಶಶಿಧರ ದಿಂಡೂರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net