ಜನರ ಆರೋಗ್ಯದ ಜತೆ ಚೆಲ್ಲಾಟ ಆಡಬೇಡಿ

30 vpt. 3
ವಿರಾಜಪೇಟೆ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಕಿಲನ್ ಗಣಪತಿ, ಸುವೀನ್ ಗಣಪತಿ, ನೆಲ್ಲಿರ ಚಲನ್ ಕುಮಾರ್, ಪಟ್ರಪಂಡ ರಘು ನಾಣಯ್ಯ, ಮನು ಕುಮಾರ್, ಅಪ್ಪಣ್ಣ, ಸತೀಶ್, ವಾಟೇರಿರ ಬೋಪಣ್ಣ, ಸುನಿತಾ ಜೂನಾ, ಸುಭಾಷ್ ಇದ್ದರು.
Published on

ವಿರಾಜಪೇಟೆ: ಕೇಂದ್ರ ಸರ್ಕಾರವು ನಾಗರಿಕರಿಗೆ ಕೈಗೆಟುಕುವ ಬೆಲೆಯಲ್ಲಿ ಔಷಧ ಲಭ್ಯವಾಗಬೇಕು ಎಂಬ ಹಿತದೃಷ್ಟಿಯಿಂದ ಜನೌಷಧಿ ಕೇಂದ್ರಗಳನ್ನು ತೆರೆದಿದೆ. ಆದರೆ ರಾಜ್ಯ ಸರ್ಕಾರದ ಜನ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ ಎಂದು ಮಾಜಿ ಶಾಸಕ ಕೆ.ಜಿ.ಬೋಪಯ್ಯ ವಾಗ್ದಾಳಿ ನಡೆಸಿದರು.

ಭಾರತೀಯ ಜನತಾ ಪಕ್ಷ ವಿರಾಜಪೇಟೆ ತಾಲೂಕು ವತಿಯಿಂದ ನಗರದ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಶುಕ್ರವಾರ ನಡೆದ ಮೌನ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಎರಡು ವರ್ಷಗಳು ಪೂರ್ಣಗೊಂಡಿದೆ. ಆದರೆ ಅಭಿವೃದ್ಧಿ ಮಾತ್ರ ಶೂನ್ಯ. ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಭ್ರಷ್ಟಚಾರದ ಕೂಪವಾಗಿದೆ. ಕೇಂದ್ರ ಮತ್ತು ನಮ್ಮ ಸರ್ಕಾರವು ಜಾರಿಗೆ ತಂದಿರುವ ಕೆಲವು ಯೋಜನೆಗಳನ್ನು ನಮ್ಮ ಯೋಜನೆ ಎಂದು ಬಿಂಬಿಸುತ್ತಿದೆ. ಇದೀಗ ಬಡ ಜನತೆಯ ಆರೋಗ್ಯದ ಹಿತದೃಷ್ಟಿಯಿಂದ ಜನೌಷಧ ಕೇಂದ್ರಗಳನ್ನು ಸ್ಥಾಪನೆ ಮಾಡಿದೆ. ಇದರಿಂದ ಜನಸಾಮಾನ್ಯರಿಗೆ ಕೈಗೆಟುಕುವ ಬೆಲೆಯಲ್ಲಿ ಔಷಧಗಳು ಲಭ್ಯವಾಗುತ್ತಿದೆ. ಆದರೆ ರಾಜ್ಯ ಸರ್ಕಾರವು ಇದನ್ನು ರದ್ದು ಮಾಡಲು ಮುಂದಾಗಿದ್ದು, ಜನರ ಆರೋಗ್ಯದ ಜತೆ ಚೆಲ್ಲಾಟವಾಡುತ್ತಿದೆ ಎಂದು ಖಂಡಿಸಿದರು.

ಜನೌಷಧ ಕೇಂದ್ರಗಳಲ್ಲಿ ಪ್ರಧಾನಿ ಮೋದಿ ಭಾವಚಿತ್ರ ಇದೆ ಎಂಬ ಕಾರಣಕ್ಕೆ ರದ್ದುಗೊಳಿಸುವ ನಿರ್ಧಾರಕ್ಕೆ ಬಂದಿದೆ. ರಾಜ್ಯದಲ್ಲಿ ಸುಮಾರು 15 ಸಾವಿರ ಜನೌಷಧ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಏಕಾಏಕಿಯಾಗಿ ಇಂತಹ ನಿರ್ಧಾರ ತಾಳುವುದು ಶೋಭೆಯಲ್ಲ. ರದ್ದುಗೊಳಿಸುವ ನಿರ್ಧಾರವನ್ನು ತಕ್ಷಣವೇ ಕೈಬಿಡಬೇಕು. ಇಲ್ಲವಾದಲ್ಲಿ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.

ಕೊಡಗು ಜಿಲ್ಲಾ ಜನೌಷಧ ಕೇಂದ್ರ ಮಾಲೀಕರ ಸಂಘದ ಅಧ್ಯಕ್ಷ ದಿನೇಶ್ ಕುಮಾರ್ ಮಾತನಾಡಿ, ಜನೌಷಧ ಕೇಂದ್ರಗಳು ಹೆಚ್ಚಿನ ಲಾಭಾಂಶ ಪಡೆಯಲು ಸ್ಥಾಪನೆ ಮಾಡಲಿಲ್ಲ. ಬದಲಿಗೆ ಸೇವಾ ಮನೋಭಾವದಿಂದ ಆರಂಭಿಸಲಾಗಿದೆ. ಇಲ್ಲಿ ಶೇ.20ರಷ್ಟು ಮಾತ್ರ ಮಾಲೀಕರಿಗೆ ಲಾಭ ಬರುತ್ತದೆ. ಜನೌಷಧ ಕೇಂದ್ರ ಮತ್ತು ಖಾಸಗಿ ಅಂಗಡಿಗಳ ಔಷಧಗಳ ಬೆಲೆಯಲ್ಲಿ ಅಜಗಜಾಂತರ ವ್ಯತ್ಯಾಸವಿದೆ. ಜನತೆಗೆ ಕಡಿಮೆ ಬೆಲೆಯಲ್ಲಿ ಔಷಧಗಳನ್ನು ನೀಡಲು ಕೇಂದ್ರ ಸರ್ಕಾರವು ಯೋಜನೆ ಜಾರಿಗೆ ತಂದಿದೆ. ಹೀಗಾಗಿ ರಾಜ್ಯ ಸರ್ಕಾರವು ಈ ನಿರ್ಧಾರವನ್ನು ತಕ್ಷಣವೇ ಕೈಬಿಡಬೇಕೆಂದು ಒತ್ತಾಯಿಸಿದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕಿಲನ್ ಗಣಪತಿ, ತಾಲೂಕು ಅಧ್ಯಕ್ಷ ಸುವೀನ್ ಗಣಪತಿ, ತಾಲೂಕು ಪ್ರಧಾನ ಕಾರ್ಯದರ್ಶಿ ನೆಲ್ಲಿರ ಚಲನ್ ಕುಮಾರ್, ಪಟ್ರಪಂಡ ರಘು ನಾಣಯ್ಯ, ಕೊಡವ ಸಮಾಜ ವಿರಾಜಪೇಟೆ ಅಧ್ಯಕ್ಷ ಮನು ಕುಮಾರ್, ನಗರಸಭೆ ಸದಸ್ಯರಾದ ಅಪ್ಪಣ್ಣ, ಸತೀಶ್, ವಾಟೇರಿರ ಬೋಪಣ್ಣ, ಪುರಸಭೆ ಸದಸ್ಯರಾದ ಜೂನಾ, ಸುಭಾಷ್, ಕಾರ್ಯಕರ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net