ಬೆಲೆ ಏರಿಕೆ! ಕಾಂಗ್ರೆಸ್​ ಸರ್ಕಾರ ವಜಾಗೊಳಿಸಬೇಕು: ಜಿಲ್ಲಾಧ್ಯಕ್ಷ ರಾಜು ಕುರಡಗಿ

05GDG06
Published on

ವಿಜಯವಾಣಿ ಸುದ್ದಿಜಾಲ ಗದಗ

ರಾಜ್ಯದಲ್ಲಿ ಸಿದ್ರಾಮಯ್ಯ ನೇತೃತ್ವದ ಕಾಂಗ್ರೆಸ್​ ಸರ್ಕಾರ ಧರ ಏರಿಕೆಯ ಸರ್ಕಾರವಾಗಿದೆ. ಬಸ್​ ಧರ, ಮೆಟ್ರೋ ಧರ, ಸ್ಟಾಂಪ್​ ಡ್ಯೂಟಿ, ನೋಂದಣಿ ಶುಲ್ಕ, ಜನನ ಪ್ರಮಾಣ ಪತ್ರ ಏರಿಕೆ, ಪೆಟ್ರೋಲ್​, ಡಿಸೈಲ್​ ಧರ, ಆಲ್ಕೋಹಾಲ್​, ವಿದ್ಯುತ್​ ಧರ ಏರಿಕೆ ಮಾಡಿ ಈಗ ಹಾಲಿನ ಧರವನ್ನು ಕೂಡಾ ಪ್ರತಿ ಲೀಟರ್​ಗೆ 4 ರೂ. ಹೆಚ್ಚಿಸಿ ಜನರಿಗೆ ಆಥಿರ್ಕ ಹೊರೆ ಮಾಡುತ್ತಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ ಆರೋಪಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ರಾಜ್ಯ ಸರ್ಕಾರ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಎಲ್ಲ ವಸ್ತುಗಳ ಬೆಲೆ ಏರಿಗೆ ಜನರ ಜೇಬಿಗೆ ಕತ್ತರಿ ಹಾಕಿದೆ. ರಾಜ್ಯದಲ್ಲಿ 22 ತಿಂಗಳ ಹಿಂದೆ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್​ ಸರ್ಕಾರ ಪಂಚ ಗ್ಯಾರಂಟಿಗಳಿಗೆ ಹಣ ಹೊಂದಿಸಲು ಅಗತ್ಯ ಸೇವೆಗಳ ಧರ ಹೆಚ್ಚಳದ ದಾರಿ ಹಿಡಿದಿದೆ. ಏ. 1 ರಿಂದ ಜಾರಿಯಾಗುವಂತೆ ರಾಜ್ಯ ಸರ್ಕಾರ ಈಗಾಗಲೇ ವಿದ್ಯುತ್​, ಹಾಲು ಬಳಿಕ ಈಗ ರಾತ್ರೋರಾತ್ರಿ ಪ್ರತಿ ಲೀಟರ್​ ಡಿಸೈಲ್​ಗೆ 2 ರೂಪಾಯಿ ಹೆಚ್ಚಿಗೆ ಮಾಡಿದೆ. ಏರುಗತಿಯಲ್ಲಿ ಸಾಗಿರುವ ತೆರಿಗೆ ಹೇರಿಕೆಯಿಂದ ಸಾಮಾನ್ಯ ಜನರ ಜೀವನ ನಿರ್ವಹಣೆ ಸಾಧ್ಯವಾಗುತ್ತಿಲ್ಲ. ಬೆಲೆ ಏರಿಕೆಯಿಂದ ಡಿಸೈಲ್​ ಮಾರಾಟದ ಮೇಲೂ ಹೊರೆ ಆಗಿದೆ. ಈ ಮೊದಲು ಇದ್ದ ಶೇ. 18.44 ಮಾರಾಟ ತೆರಿಗೆಯನ್ನು ರಾಜ್ಯ ಕಾಂಗ್ರೆಸ್​ ಸರ್ಕಾರ ಇದಿಗ ಶೇ. 21.17 ಕ್ಕೆ ಏರಿಸಿದೆ. ಇದರಿಂದ ಡಿಸೈಲ್​ ಧರ ಸರಾಸರಿ 2 ರೂಪಾಯಿ ಹೆಚ್ಚಳವಾಗಿದೆ ಎಂದು ಆರೋಪಿಸಿದರು.

ಈಗಾಗಲೇ ಬೆಲೆ ಏರಿಕೆಯ ಸರಣಿಯಿಂದ ಜನರು ಕಂಗಾಲಾಗಿದ್ದಾರೆ. ಒಂದರ ಹಿಂದೆ ಮತ್ತೊಂದರಂತೆ ಅಗತ್ಯ ವಸ್ತುಗಳು ದುಬಾರಿ ಆಗುತ್ತಿವೆ. ಡಿಸೈಲ್​ ಧರ ಏರಿಕೆಯ ಪರಿಣಾಮದಿಂದ ಬಹುತೇಕ ಎಲ್ಲ ವಿಧದ ವಾಹನಗಳ ಮೇಲೂ ಪರಿಣಾಮ ಬೀರಲಿದ್ದು, ಸಾರಿಗೆ ವೆಚ್ಚ ಅಧಿಕ ಆಗಲಿದೆ ಎಂದು ಆರೋಪಿಸಿದರು. ವಿದ್ಯುತ್​, ಹಾಲು ಮತ್ತು ಡಿಸೈಲ್​ ಬೆಲೆ ಇಳೀಸಬೇಕು ಎಂದು ಆಗ್ರಹಿಸಿದರು. ಸರ್ಕಾರ ವಜಾಗೊಳಿಸಬೇಕು ಎಂದು ಆಗ್ರಹಿಸಿ ಜಿಲ್ಲಾಡಳಿತ ಮೂಲಕ ರಾಜ್ಯ ಪಾಲರಿಗೆ ಮನವಿ ಸಲ್ಲಿಸಿದರು.

ಎಂ.ಎಂ.ಹಿರೇಮಠ, ಸಿದ್ದಣ್ಣ ಪಲ್ಲೇದ, ಸುರೇಶ ಮರಳಪ್ಪನವರ, ಬೂದಪ್ಪ ಹಳ್ಳಿ, ಅಶೋಕ ಕರೂರ, ಅನೀಲ ಅಬ್ಬಿಗೇರಿ, ಕೆ.ಪಿ.ಕೋಟಿಗೌಡ್ರ, ಸಂತೋಷ ಅಕ್ಕಿ, ಅಮರನಾಥ ಗಡಗಿ, ಮಾಂತೇಶ ಬಾತಾಖಾನಿ, ಮುತ್ತು ಮುಶಿಗೇರಿ, ರವಿ ಮಾನ್ವಿ, ಅಶೋಕ ಕುಡತಿನಿ, ಅಮರನಾಥ ಬೆಟಗೇರಿ, ಮುತ್ತು ಕಡಗದ ಹಲವರು ಇದ್ದರು.

ಬಾಕ್ಸ್​:

ಬಿಜೆಪಿ ಆರೋಪಗಳೇನು?

* ಶೇ. 15 ರಷ್ಟು ಬಸ್​ ಧರ ಏರಿಕೆ

* 2 ರೂ ಡಿಸೈಲ್​ ಏರಿಕೆ

* ವಿದ್ಯುತ್​, ಹಾಲು ಹಾಗು ಡಿಸೈಲ್​ ಬೆಲೆ ಏರಿಕೆಯಿಂದ ಜನ ಸಾಮಾನ್ಯರ ಜೀವನ ನಿರ್ವಹಣೆ ದುಬಾರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net