

ಪುತ್ತೂರು: ಭಾರತೀಯ ಜನತಾ ಪಾರ್ಟಿ ನಗರ ಮಂಡಲದ ವತಿಯಿಂದ ನಗರಸಭೆಯ ೨೦೨೨-೨೩ನೇ ಸಾಲಿನ ಮುಖ್ಯಮಂತ್ರಿಗಳ ನಗರೋತ್ಥಾನ ಹಂತ ೪ ಯೋಜನೆಯ ಸಹಾಯಧನ ಬಿಡುಗಡೆ ವಿಳಂಬ ಮಾಡುತ್ತಿರುವ ಸರ್ಕಾರದ ನೀತಿಯನ್ನು ಖಂಡಿಸಿ ಅಮರ್ ಜವಾನ್ ಜ್ಯೋತಿ ಬಳಿ ಪ್ರತಿಭಟನೆ ನಡೆಯಿತು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಾಕೇಶ್ ರೈ ಕೆಡೆಂಜಿ ಮಾತನಾಡಿ, ನಗರಸಭೆ ವ್ಯಾಪ್ತಿಯಲ್ಲಿ ಅಭಿವೃದ್ಧಿಶೀಲವಾದ ದಕ್ಷ ಆಡಳಿತವನ್ನು ಬಿಜೆಪಿ ನೀಡಿದೆ. ನಗರೋತ್ಥಾನ ಅನುದಾನಗಳ ಅನುಷ್ಠಾನ ಆಗುವ ಸಂದರ್ಭ ಸರ್ಕಾರ ಬದಲಾಗಿರುವುದು ದುರದೃಷ್ಟಕರವಾಗಿದೆ. ಬಿಜೆಪಿ ಸರ್ಕಾರ ತಂದ ಯೋಜನೆಗಳನ್ನು ಕಾಂಗ್ರೆಸ್ ವಿರೋಽ ನೀತಿಯನ್ನಿಟ್ಟುಕೊಂಡು ತಡೆಹಿಡಿಯುತ್ತಿದೆ. ನಗರಸಭೆಯ ವ್ಯಾಪ್ತಿಯ ೧೯೮ ಫಲಾನುಭವಿಗಳಲ್ಲಿ ೬೨ ಮಂದಿಗೆ ಮಾತ್ರ ಹಣ ಬಿಡುಗಡೆ ಮಾಡಿದೆ. ಅವೈಜ್ಞಾನಿಕ ಬಿಟ್ಟಿ ಭಾಗ್ಯಗಳಿಂದ ಜನಸಾಮಾನ್ಯರಿಗೆ ಅನ್ಯಾಯವಾಗುತ್ತಿದೆ ಎಂದು ತಿಳಿಸಿದರು.
ಹಿರಿಯ ಮುಖಂಡ ಬಂಗಾರಡ್ಕ ವಿಶ್ವೇಶ್ವರ ಭಟ್ ಮಾತನಾಡಿ, ಕಾಂಗ್ರೆಸ್ ಚುನಾವಣೆಯಲ್ಲಿ ಗೆಲ್ಲುವ ಯೋಜನೆಯನ್ನು ಮಾತ್ರ ಮಾಡುತ್ತಿದೆ. ಗ್ರಾಮ ಪಂಚಾಯಿತಿಗೆ ನಿಶ್ಚಿತವಾಗಿ ಬರಬೇಕಾದ ಅನುದಾನವೇ ಸರಿಯಾಗಿ ಬರುತ್ತಿಲ್ಲ. ಗ್ರಾಮೀಣ ಭಾಗದಲ್ಲಿ ಜನರಿಗೆ ಅಗತ್ಯವಾದ ಸರ್ಕಾರಿ ಬಸ್‌ಗಳು ಸ್ಥಗಿತವಾಗುತ್ತಿವೆ. ಕೆ.ಎಸ್.ಆರ್.ಟಿ. ಸಿ. ಲಾಭದಲ್ಲಿದೆ ಎಂಬುದನ್ನು ಸದನದಲ್ಲಿ ಸ್ಪಷ್ಟಪಡಿಸಬೇಕು. ಪರ್ಲಡ್ಕದಿಂದ ತಾಲೂಕು ಆಡಳಿತ ಕಚೇರಿಯ ಕಡೆಗೆ ಬರುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಶಾಸಕರಿಗೆ ಇದು ಕಾಣಿಸುವುದಿಲ್ಲವೇ ಎಂದು ಪ್ರಶ್ನಿಸಿದರು.
ನಗರ ಮಂಡಲ ಅಧ್ಯಕ್ಷ ಶಿವಕುಮಾರ್, ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ನಗರಸಭೆ ಅಧ್ಯಕ್ಷೆ ಲೀಲಾವತಿ, ಉಪಾಧ್ಯಕ್ಷ ಬಾಲಚಂದ್ರ, ಪ್ರಮುಖರಾದ ಚಣಿಲ ತಿಮ್ಮಪ್ಪ ಶೆಟ್ಟಿ, ಆರ್.ಸಿ. ನಾರಾಯಣ, ಚಂದ್ರಶೇಖರ ರಾವ್ ಬಪ್ಪಳಿಗೆ ಮತ್ತಿತರರು ಉಪಸ್ಥಿತರಿದ್ದರು. ಜೀವಂಧರ ಜೈನ್ ಪ್ರಸ್ತಾವನೆಗೈದರು. ರಾಜೇಶ್ ಬನ್ನೂರು ಕಾರ್ಯಕ್ರಮ ನಿರೂಪಿಸಿದರು.
ಯಾರಿದ್ದರೂ ಅನುದಾನ
ಬಿಜೆಪಿ ಪ್ರತಿಭಟನೆಯ ಸಂದರ್ಭದಲ್ಲಿ ಯಾವ ಸರ್ಕಾರ ಇದ್ದರೂ ರಸ್ತೆಗಳ ತೇಪೆ ಕಾರ್ಯಕ್ಕೆ ಅನುದಾನ ಬರುತ್ತದೆ. ಹಲವು ರಸ್ತೆಗಳ ತೇಪೆ ಕಾರ್ಯಕ್ಕೆ ೨ ಕೋಟಿ ಬಿಡುಗಡೆ ಮಾಡಿಸಿ ತಂದಿದ್ದೇವೆ ಎಂದು ಶಾಸಕರು ಹೇಳುವ ಅಗತ್ಯವಿಲ್ಲ. ತೋರಿಸಿಕೊಳ್ಳುವಂಥ ಯಾವ ಯೋಜನೆಯೂ ಸರ್ಕಾರ ಬಂದ ಬಳಿಕ ಬಂದಿಲ್ಲ ಎಂದು ಲೇವಡಿ ಮಾಡಿದರು. ಶಾಸಕರ ಕಾರ್ಯವೈಖರಿಯನ್ನು ಟೀಕಿಸಿ ಸಾಮಾಜಿಕ ಜಾಲತಾಣದ ಹಕೀಂ ಕೂರ್ನಡ್ಕ ಎಂಬವರ ಆಡಿಯೋ ಒಂದು ವೈರಲ್ ಆಗಿದ್ದು, ಅವರು ಉತ್ತಮವಾಗಿ ಮಾತನಾಡಿದ್ದಾರೆಂದು ಬಿಜೆಪಿ ವತಿಯಿಂದ ಅಭಿನಂದನೆಯನ್ನು ಸಲ್ಲಿಸಲಾಯಿತು.