ವಕ್ಫ್ ಬೋರ್ಡ್ ನೀತಿ ವಿರುದ್ಧ ಬಿಜೆಪಿ ಪ್ರತಿಭಟನೆ

BJP PROTEST
Published on

ಮಡಿಕೇರಿ

ವಿಧಾನಸಭಾ ಚುನಾವಣೆ ಸೋಲಿನ ಆಘಾತದಲ್ಲೇ ಇದ್ದ ಬಿಜೆಪಿ ವಕ್ಫ್ ಬೋರ್ಡ್ ನೀತಿ ಖಂಡನೆಯ ಪ್ರತಿಭಟನೆಗಾಗಿ ಶುಕ್ರವಾರ ಮಡಿಕೇರಿಯಲ್ಲಿ ಮತ್ತೆ ತನ್ನ ಶಕ್ತಿ ಪ್ರದರ್ಶನದ ಪ್ರಯತ್ನ ಮಾಡಿತು. ಮಾಜಿ ಸಂಸದ ಪ್ರತಾಪ್ ಸಿಂಹ, ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ, ಮಾಜಿ ಸಚಿವ ಅಪ್ಪಚ್ಚುರಂಜನ್, ಎಂಎಲ್‌ಸಿ ಸುಜಾ ಕುಶಾಲಪ್ಪ, ಮಾಜಿ ಎಂಎಲ್‌ಸಿಗಳಾದ ಸುನಿಲ್ ಸುಬ್ರಹ್ಮಣಿ, ಎಸ್.ಜಿ. ಮೇದಪ್ಪ ಸೇರಿದಂತೆ ಪಕ್ಷದ ಹಿರಿಯ ಮುಖಂಡರು ಪಾಲ್ಗೊಂಡು ಸಂಜೆ ತನಕ ನಡೆದ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದ ಕಾರ್ಯಕರ್ತರಿಗೆ ಸ್ಫೂರ್ತಿ ತುಂಬಿದರು.

ಮಹದೇವಪೇಟೆಯ ಶ್ರೀ ಚೌಡೇಶ್ವರಿ ದೇವಾಲಯದಲ್ಲಿ ಬೆಳಗ್ಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ದೇವಾಲಯ ಬಳಿಯಿಂದ “ನಮ್ಮ ಭೂಮಿ-ನಮ್ಮ ಹಕ್ಕು” ಜನಾಂದೋಲನದ ಪ್ರತಿಭಟನಾ ಮೆರವಣಿಗೆ ಆರಂಭವಾಯಿತು. ಕಾಂಗ್ರೆಸ್ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವ ಜಮೀರ್ ಅಹಮ್ಮದ್, ಕೊಡಗಿನ ಇಬ್ಬರು ಶಾಸಕರ ವಿರುದ್ಧ ಘೋಷಣೆ ಕೂಗುತ್ತಾ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಮೆರವಣಿಗೆ ಮಾರುಕಟ್ಟೆ ಬಳಿ ಬರುತ್ತಿದ್ದಂತೆಯೇ ಮಾಜಿ ಸಂಸದ ಪ್ರತಾಪ್ ಸಿಂಹ ಪ್ರತಿಭಟನಾನಿರತರನ್ನು ಉದ್ದೇಶಿಸಿ ಮಾತನಾಡಿದರು.

ಬಾಂಗ್ಲಾದಲ್ಲಿ ಶೇಕ್ ಹಸೀನಾ ದೇಶ ಬಿಡುತ್ತಿದ್ದಂತೇ ಹಿಂದುಗಳ ಸ್ಥಿತಿ ಏನಾಯಿತು, ಇರಾಕ್ - ಇರಾನ್ ನಲ್ಲಿ ಹೇಗೆ ಗಲಾಟೆ ಆಗುತ್ತಿದೆಯೋ

ಅದೇ ಸ್ಥಿತಿ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದಿಂದ ಬರಲಿದೆ. ಮುಸಲ್ಮಾನರಲ್ಲೂ ಜಾತಿ ತಾರತಮ್ಯಗಳಿವೆ. ಆದರೆ ಧರ್ಮ ಎಂದು ಬಂದಾಗ ಒಗ್ಗಟ್ಟಾಗುತ್ತಾರೆ.

ಅದೇ ರೀತಿ ಹಿಂದೂಗಳು ಒಗ್ಗಟ್ಟಾಗಬೇಕಾದ ಅಗತ್ಯವಿದೆ. ಈಗ ಲ್ಯಾಂಡ್ ಜಿಹಾದ್ ನಡೆಯುತ್ತಿದೆ. ಎಲ್ಲಾ ಭೂಮಿಯನ್ನು ವಕ್ಫ್ ಆಸ್ತಿ ಎಂದು ಹೇಳುತ್ತಿದ್ದಾರೆ.

ಹಾಗಾದರೆ ಭೂಮಿಯನ್ನು ಬಾಬರ್, ಅಕ್ಬರ್ ಮತ್ತಿತರರು ಕೊಟ್ಟು ಹೋದರಾ ಎಂದು ಪ್ರಶ್ನಿಸಿದ ಪ್ರತಾಪ್ ಸಿಂಹ, ಅವರೆಲ್ಲಾ ಈ ದೇಶಕ್ಕೆ ನೆಲೆ ಹುಡುಕಿ ಬಂದವರು. ಮುಸ್ಲಿಂ ಧರ್ಮ ಈ ನೆಲದ ಧರ್ಮ ಅಲ್ಲ. ಕ್ರೈಸ್ತ ಧರ್ಮ ಈ ನೆಲದ ಧರ್ಮ ಅಲ್ಲ. ಹೀಗಿರುವಾಗ ಭೂಮಿ ಅವರದ್ದು ಹೇಗೆ ಆಗುತ್ತದೆ ?

ಕಂದಾಯ ಇಲಾಖೆಯಿಂದ ನೀಡಿರುವ ನೋಟಿಸ್ ವಾಪಸ್ ಮಾಡುವುದಲ್ಲ, ವಕ್ಫ್ ಬೋರ್ಡ್ನಿಂದ ಆಗಿರುವ ಗೆಜೆಟ್ ನೊಟಿಫಿಕೇಷನ್ ವಾಪಸ್ ಮಾಡಿ ಸಿದ್ದರಾಮಯ್ಯನವರೇ ಎಂದ ಆಗ್ರಹಿಸಿದರು.

ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ, ವಕ್ತಾರರಾದ ಬಿ.ಕೆ. ಅರುಣ್ ಕುಮಾರ್, ತಳೂರು ಕಿಶೋರ್ ಕುಮಾರ್, ಕಾಂಗೀರ ಸತೀಶ್, ನಗರ ಬಿಜೆಪಿ ಅಧ್ಯಕ್ಷ ಉಮೇಶ್ ಸುಬ್ರಹ್ಮಣಿ, ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಅನಿತಾ ಪೂವಯ್ಯ, ಎಸ್.ಸಿ. ಮೋರ್ಚಾ ಜಿಲ್ಲಾಧ್ಯಕ್ಷ ಪಿ.ಎಂ. ರವಿ, ರೈತ ಮೋರ್ಚಾ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಬಿ.ಬಿ. ಭಾರತೀಶ್. ಮನು ಮುತ್ತಪ್ಪ, ಎಂ.ಬಿ. ದೇವಯ್ಯ, ಕೋಡಿ ಪೊನ್ನಪ್ಪ ಸೇರಿದಂತೆ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net