

ಮಂಗಳೂರು : ರಾಜ್ಯದ ಕಾಂಗ್ರೆಸ್ ಸರ್ಕಾರ ಪೆಟ್ರೋಲ್, ಡೀಸೆಲ್ ದರ ಏರಿಸಿರುವುದನ್ನು ಖಂಡಿಸಿ ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲ ವತಿಯಿಂದ ಗುರುವಾರ ನಗರದ ಪಿವಿಎಸ್ ವೃತ್ತದಲ್ಲಿ ಗುರುವಾರ ರಸ್ತೆ ತಡೆ ಪ್ರತಿಭಟನೆ ನಡೆಯಿತು.
ಪಿಎಸ್‌ಎಸ್ ವೃತ್ತದ ಬಳಿ ಬಿಜೆಪಿ ಕಾರ್ಯಕರ್ತರು ಮಾನವ ಸರಪಳಿ ರಚಿಸಿ ಅರ್ಧ ಗಂಟೆಗೂ ಹೆಚ್ಚು ಕಾಲ ವಾಹನ ಸಂಚಾರಕ್ಕೆ ತಡೆ ಒಡ್ಡಿದರು. ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರ ಘೋಷಣೆಗಳನ್ನು ಕೂಗಿದರು. ಬಳಿಕ ಪೊಲೀಸರು ಬಿಜೆಪಿ ಕಾರ್ಯಕರ್ತರನ್ನು ವಶಕ್ಕೆ ಪಡೆದು ವಾಹನಗಳಲ್ಲಿ ಕರೆದೊಯ್ದರು.
ಈ ಸಂದರ್ಭ ಸಂಸದ ಕ್ಯಾ.ಬ್ರಿಜೇಶ್ ಚೌಟ ಮಾತನಾಡಿ ‘ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಪ್ರಧಾನಿ ಮೋದಿ ಅವರನ್ನು ಬೆಂಬಲಿಸಿದ ಮತದಾರರಿಗೆ ಶಿಕ್ಷೆ ನೀಡಲು ತೈಲ ಬೆಲೆ ಹೆಚ್ಚಳ ಮಾಡಲಾಗಿದೆ. ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡದ ಕಾಂಗ್ರೆಸ್ ಸರ್ಕಾರ ಜನಸಾಮಾನ್ಯರಿಗೆ ಹೊರೆಯಾಗಿದೆ. ತೈಲಬೆಲೆ ಏರಿಕೆ ಹಿಂಪಡೆಯದಿದ್ದರೆ ರಾಜ್ಯ ವಿಧಾನಸಭೆಯ ಮುಂದಿನ ಅಧಿವೇಶನದಲ್ಲಿ ಬಿಜೆಪಿ ಶಾಸಕರು ಹೋರಾಟ ನಡೆಸಲಿದ್ದಾರೆ ಎಂದರು.
ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಬೆಲೆ ಏರಿಕೆ ನಿರಂತರವಾಗಿದೆ. ರಾಜ್ಯ ಸರ್ಕಾರದ ಖಜಾನೆ ತುಂಬಿ ತುಳುಕುತ್ತಿದೆ ಎಂದು ಹೇಳುತ್ತಿರುವ ಸಿದ್ದರಾಮಯ್ಯ ಅವರು ಈಗ ಯಾವ ಕಾರಣಕ್ಕೆ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳ ಮಾಡಿದ್ದಾರೆ ಎಂಬುದನ್ನು ಜನತೆಗೆ ತಿಳಿಸಬೇಕು. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಅಗತ್ಯ ವಸ್ತುಗಳ ಬೆಲೆ ಶೇ.20ರಿಂದ 30ರಷ್ಟು ಏರಿಕೆ ಆಗಲಿದ್ದು, ಜನಸಾಮಾನ್ಯರಿಗೆ ಹೊಡೆತ ಬೀಳಲಿದೆ ಎಂದರು.
ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯತೀಶ್ ಆರ್ವಾರ್, ಹಿರಿಯ ಮುಖಂಡರಾದ ಮೋನಪ್ಪ ಭಂಡಾರಿ, ನಿತಿನ್‌ಕುಮಾರ್, ರವಿಶಂಕರ ಮಿಜಾರ್, ಮಂಗಳೂರು ದಕ್ಷಿಣ ಮಂಡಲ ಅಧ್ಯಕ್ಷ ರಮೇಶ್ ಕಂಡೆಟ್ಟು,
ವಿಜಯಕುಮಾರ್ ಶೆಟ್ಟಿ, ದಿವಾಕರ್ ಪಾಂಡೇಶ್ವರ,ಮಂಜುಳಾ ರಾವ್, ಕವಿತಾ ಸನಿಲ್ ಹಾಗೂ ಬಿಜೆಪಿ ಕಾರ್ಪೋರೇಟರ್‌ಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.