ಗ್ಯಾರಂಟಿ ಆರ್ಥಿಕ ಸಂಕಷ್ಟ

bjp protest
ಇಂಧರ ದರ ಏರಿಕೆ ಆದೇಶ ಹಿಂಪಡೆಯಬೇಕು ಎಂದು ಆಗ್ರಹಿಸಿ ದೇವನಹಳ್ಳಿಯ ಜಿಲ್ಲಾಡಳಿತಭವನ ಆವರಣದಲ್ಲಿ ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಸಂಸದ ಡಾ.ಕೆ.ಸುಧಾಕರ್, ಮಾಜಿ ಸಚಿವ ಎಂಟಿಬಿ ನಾಗರಾಜ್, ಶಾಸಕ ಧೀರಜ್‌ಮುನಿರಾಜು, ಮಾಜಿ ಶಾಸಕ ಪಿಳ್ಳಮುನಿಶಾಮಪ್ಪ ಚಂದ್ರಣ್ಣ, ಜಿಲ್ಲಾಧ್ಯಕ್ಷ ರಾಮಕೃಷ್ಣಯ್ಯ, ಪ್ರಧಾನ ಕಾರ್ಯದರ್ಶಿ ಎಚ್.ಎಂ.ರವಿಕುಮಾರ್, ಮುಖಂಡರಾದ ರವಿಕುಮಾರ್, ಓಒದೇನಹಳ್ಳಿ ಮುನಿಯಪ್ಪ ಮತ್ತಿತರರಿದ್ದರು.
Published on

*ಸಂಸದ ಡಾ.ಕೆ.ಸುಧಾಕರ್ ಆರೋಪ
*ಜಿಲ್ಲಾಡಳಿತಭವನ ಆವರಣದಲ್ಲಿ ಪ್ರತಿಭಟನೆ

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ರಾಜ್ಯ ಸರ್ಕಾರ ದೂರದೃಷ್ಟಿ ಇಲ್ಲದ ಗ್ಯಾರಂಟಿ ಯೋಜನೆ ಜಾರಿಗೊಳಿಸಿ ಇದೀಗ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಇದರಿಂದ ಪಾರಾಗಲು ಜನಸಾಮಾನ್ಯರ ಮೇಲೆ ಬೆಲೆ ಏರಿಕೆ ಹೊರೆ ಹೊರೆಸುತ್ತಿದೆ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಡಾ.ಕೆ.ಸುಧಾಕರ್ ಆರೋಪಿಸಿದರು.
ದೇವನಹಳ್ಳಿಯ ಜಿಲ್ಲಾಡಳಿತಭವನದ ಆವರಣದಲ್ಲಿ ಮಂಗಳವಾರ ಪೆಟ್ರೋಲ್-ಡಿಸೇಲ್ ದರ ಏರಿಕೆ ವಿರೋಧಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು. ರಾಜ್ಯದ ರೈತರ ಹೊಟ್ಟೆ ಉರಿಸುವ ಉದ್ದೇಶದಿಂದ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿದ್ದಾರೆ. ಅಗತ್ಯ ದಿನಬಳಕೆ ಪದಾರ್ಥಗಳ ಬೆಲೆ ಹೇಳತೀರದಾಗಿದೆ, ಪ್ರತಿ ಲೀಟರ್‌ಗೆ 3.ರೂ 3.50 ರೂಪಾಯಿ ಏರಿಕೆ ಮಾಡಿರುವುದು ಖಂಡನೀಯ ಎಂದರು. ಕೃಷಿ ಚಟುವಟಿಕೆಗೆ ಸಂಬಂಧಿಸಿದಂತೆ ರೈತರ ಸರಕು ಸಾಗಾಣಿಕೆಗೆ ದೊಡ್ಡ ಹೊಡೆತ ಬೀಳಲಿದೆ. ಈ ಹೋರಾಟ ಇಂದು ಸಾಂಕೇತಿಕವಾಗಿದೆ. ಮುಂದಿನ ದಿನಗಳಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಉಗ್ರ ಹೋರಾಟ ನಡೆಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಕೆ.ಶಿವಕುಮಾರ್ ಕಿವಿ ಹಿಂಡುವ ಮಾಡಲಿದೆ ಎಂದರು. ಅಧಿಕಾರದ ದುರಾಸೆಗಾಗಿ ಬಡವರನ್ನು ಈ ಮೂಲಕ ವಂಚಿಸುತಿದ್ದಾರೆ. ಸರ್ಕಾರ ಎಚ್ಚೆತ್ತು ತೈಲ ಬೆಲೆ ಏರಿಕೆ ವಾಪಸ್ ಪಡೆಯಬೇಕು ತಪ್ಪಿದಲ್ಲಿ ಆರ್ಥಿಕ ಸವಾಲು ಎದುರಿಸಲಾಗದ ಸರ್ಕಾರದ ಮಂತ್ರಿ ಮಂಡಲ ರಾಜೀನಾಮೆ ಕೊಟ್ಟು ಹೊರಬರಬೇಕು ಎಂದರು.
ಜನವಿರೋಧಿ ಸರ್ಕಾರ: ರಾಜ್ಯದ ಇತಿಹಾಸದಲ್ಲಿ ಇಂದಿನ ಕಾಂಗ್ರೆಸ್ ಸರ್ಕಾರದಷ್ಟು ಜನ ವಿರೋಧಿ ಸರ್ಕಾರವನ್ನು ರಾಜ್ಯದ ಜನತೆ ಎಂದೂ ಕಂಡಿಲ್ಲ. ಪೆಟ್ರೋಲ್-ಡೀಸೆಲ್ ದರ ಆರಂಭವಷ್ಟೇ ಇನ್ನು ಈ ರಾಜ್ಯದಲ್ಲಿ ಪ್ರತಿ ವಸ್ತುಗಳ ಬೆಲೆಗಳೂ ಗಗನಕ್ಕೇರಲಿವೆ ಎಂದು ಬಿಜೆಪಿ ಯುವ ಮೋರ್ಚಾ ರಾಜ್ಯಾಧ್ಯಕ್ಷ ಧೀರಾಜ್ ಮುನಿರಾಜ್ ಕಿಡಿಕಾರಿದರು. ಸುಳ್ಳು ಭರವಸೆಗಳು ಹಾಗೂ ಯೋಜನೆಗಳನ್ನು ಪೂರೈಸಲಾಗದೇ ರಾಜ್ಯದ ಖಜಾನೆಯನ್ನು ಬರಿದು ಮಾಡಿಕೊಂಡಿರುವ ಈ ಸರ್ಕಾರ ಜನಕಲ್ಯಾಣವನ್ನು ಮರೆತು ಭ್ರಷ್ಟಾಚಾರದಲ್ಲಿ ತೊಡಗಿ ರಾಜ್ಯದ ಜನತೆಯನ್ನು ಸಂಕಷ್ಟಕ್ಕೆ ತಳ್ಳುತ್ತಿದೆ ಎಂದು ದೂರಿದರು.
ಟಿಕೆಟ್ ದರ ಏರಿಕೆಯ ಸದ್ದು ಕೇಳಿ ಬರುತ್ತಿದೆ. ಹಾಲಿನ ಪೋತ್ಸಹಧನ ತಡೆಯಿಡಿದಿದ್ದಾರೆ ಇದೆಲ್ಲ ಬಡವರಿಗೆ ದುಸ್ಸಪ್ನವಾಗಲಿದೆ ಎಂದ ಶಾಸಕರು ಗುರುವಾರ ರಸ್ತೆ ತಡೆಗೆ ಅಶೋಕ್ ಕರೆ ನೀಡಿದ್ದಾರೆ ಎಲ್ಲ ಕಡೆಗಳಲ್ಲಿ ಹೋರಾಟ ನಡೆಯಲಿದೆ ಎಂದರು. ಜನಸಾಮಾನ್ಯರು, ಕಾರ್ಮಿಕರು, ಬಡವರು ಹಾಗೂ ಮಧ್ಯಮ ವರ್ಗದವರು ಬೆಲೆ ಏರಿಕೆಯ ಚಕ್ರವ್ಯೆಹದಲ್ಲಿ ಸಿಲುಕಿ ನಲುಗುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಈ ಬೆಲೆ ಏರಿಕೆಯ ಬಿಸಿ ಕೃಷಿ ಉಪಕರಣಗಳನ್ನು ಬಳಸುವ ರೈತರ ಕೈ ಸುಡಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಎಂಟಿಬಿ ಹೋರಾಟದ ಎಚ್ಚರಿಕೆ ರಾಜ್ಯದ ಸಂಪನ್ಮೂಲವನ್ನು ಬಳಸಿಕೊಳ್ಳುವ ಯಾವ ಕಾಳಜಿಯೂ ಸರ್ಕಾರಕ್ಕಿಲ್ಲ, ಬದಲಾಗಿ ರಾಜ್ಯದ ಸಂಪನ್ಮೂಲವನ್ನು ಕೊಳ್ಳೆ ಹೊಡೆಯುವವರಿಗೆ ರತ್ನಗಂಬಳಿ ಹಾಸುತ್ತಿದೆ ಎಂದು ಮಾಜಿ ಸಚಿವರೂ ಆದ ಎಂಎಲ್‌ಸಿ ಎಂಟಿಬಿ ನಾಗರಾಜ್ ಆರೋಪಿಸಿದರು. ಕಾಂಗ್ರೆಸ್‌ನಿಂದ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗಿದೆ.ಈ ಕೂಡಲೇ ಇಂಧನ ಮೇಲೆ ಹೆಚ್ಚಿಸಿರುವ ದರವನ್ನು ವಾಪಾಸ್ ಪಡೆಯದಿದ್ದರೆ ಹೋರಾಟ ತೀವ್ರಗೊಳ್ಳಲಿದೆ ಎಂದು ಎಚ್ಚರಿಕೆ ನೀಡಿದರು. ವಾಹನವನ್ನು ಆಶ್ರಯಿಸಿ ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೂ ಇದರ ಬಿಸಿ ತಟ್ಟಲಿದೆ. ಎಲ್ಲ ಕ್ಷೇತ್ರಗಳಿಗೂ ಬೆಲೆ ಏರಿಕೆಯ ಬಿಸಿತಟ್ಟಿಸುವ ನಿರ್ಧಾರವನ್ನು ಈ ಕೂಡಲೇ ಕೈಬಿಡಬೇಕು ಎಂದು ಒತ್ತಾಯಿಸಿದರು. ದುರಾಡಳಿತ ನಡೆಸುವ ಬದಲು ಸರ್ಕಾರ ವಿಸರ್ಜನೆ ಮಾಡಬೇಕು. ಕೂಡಲೇ ಇಂಥ ನಿರ್ಧಾರ ಕೈಬಿಡಬೇಕು, ರಾಜ್ಯದ ಜನರ ಕಲ್ಯಾಣದತ್ತ ಯೋಜನೆ ರೂಪಿಸಬೇಕು ಎಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net