ಬಿಜೆಪಿ ಕಾರ್ಯಕ್ರಮದಲ್ಲಿ ಶ್ರದ್ಧಾ ಶೆಟ್ಟರ್!

25-bgv-1-Web
ಬೆಳಗಾವಿ ಎಪಿಎಂಸಿಯಲ್ಲಿ ಬಿಜೆಪಿ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಅಟಲ್ ಜೀ ಸ್ಮರಣೆ ಹಾಗೂ ಕಿಸಾನ್ ಸಮ್ಮಾನ್ ಕಾರ್ಯಕ್ರಮದಲ್ಲಿ ಶ್ರದ್ಧಾ ಶೆಟ್ಟರ್, ಉಜ್ವಲಾ ಬಡವನಾಚೆ, ಈರಣ್ಣ ಚಂದರಗಿ, ಎಂ.ಬಿ.ಝಿರಲಿ ಇತರರು ಪಾಲ್ಗೊಂಡಿದ್ದರು.
Published on

ಬೆಳಗಾವಿ : ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ದಿ.ಸುರೇಶ ಅಂಗಡಿ ಅವರ ದ್ವಿತೀಯ ಪುತ್ರಿ ಶ್ರದ್ಧಾ ಶೆಟ್ಟರ್ ಬಿಜೆಪಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ಬಹಿರಂಗವಾಗಿ ಕಾಣಿಸಿಕೊಳ್ಳುವ ಮೂಲಕ ಜಿಲ್ಲಾ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದಾರೆ.

ಎಪಿಎಂಸಿಯಲ್ಲಿ ಶುಕ್ರವಾರ ಬಿಜೆಪಿ ಆಯೋಜಿಸಿದ್ದ ಅಟಲ್ ಜೀ ಸ್ಮರಣೆ ಹಾಗೂ ಕಿಸಾನ್ ಸಮ್ಮಾನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಿಜೆಪಿ ಮುಖಂಡರೊಂದಿಗೆ ವೇದಿಕೆ ಹಂಚಿಕೊಂಡರು. ದಿ.ಸುರೇಶ ಅಂಗಡಿ ಅವರು ಕರೊನಾ ಸೋಂಕಿನಿಂದ ಮೃತಪಟ್ಟ ಬಳಿಕ ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಅಭ್ಯರ್ಥಿ ಯಾರಾಗುತ್ತಾರೆ ಎಂಬ ಕುತೂಹಲ ಜನರಲ್ಲಿದೆ. ಅಂಗಡಿ ಅವರ ಕುಟುಂಬದಲ್ಲೇ ಯಾರಿಗಾದರೂ ಟಿಕೆಟ್ ನೀಡಬೇಕೆಂಬ ಮಾತುಗಳೂ ಕೇಳಿ ಬಂದಿವೆ. ಹೀಗಾಗಿ ಶ್ರದ್ಧಾ ಅವರು ಕಾರ್ಯಕ್ರಮದಲ್ಲಿ ಪ್ರಥಮ ಬಾರಿಗೆ ಕಾಣಿಸಿಕೊಂಡಿದ್ದು, ಟಿಕೆಟ್ ಬೇಡಿಕೆ ವಿಚಾರಕ್ಕೆ ಮತ್ತಷ್ಟು ಪುಷ್ಠಿ ನೀಡಿದಂತಾಗಿದೆ.

ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಅಂಗಡಿ ಕುಟುಂಬದ ಸದಸ್ಯರು ಸ್ಪರ್ಧಿಸುವ ವಿಚಾರವಾಗಿ ಶ್ರದ್ಧಾ ಶೆಟ್ಟರ್ ಮಾತನಾಡಿ, ಉಪ ಚುನಾವಣೆ ಬಗ್ಗೆ ಈಗಲೇ ಏನೂ ಹೇಳುವುದಿಲ್ಲ ಎಂದು ಪ್ರತಿಕ್ರಿಯಿಸಿದರು.

ಬೆಳಗಾವಿ ಕ್ಷೇತ್ರಕ್ಕೆ ಇನ್ನೂ ಉಪಚುನಾವಣೆ ಘೋಷಣೆ ಆಗಿಲ್ಲ. ಆದರೆ, ಸುರೇಶ ಅಂಗಡಿ ಪುತ್ರಿ ಪಕ್ಷದಲ್ಲಿ ಸಕ್ರಿಯರಾಗುತ್ತಿರುವುದರಿಂದ ಅವರು ಕೂಡ ರಾಜಕೀಯ ಪ್ರವೇಶಿಸಬಹುದು. ಅವರೂ ಟಿಕೆಟ್ ಆಕಾಂಕ್ಷಿ. ಹಾಗಾಗಿಯೇ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ರಾಜಕೀಯ ತಾಲೀಮು ಆರಂಭಿಸಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net