ಸಿದ್ದರಾಮಯ್ಯ ಬಹಿರಂಗವಾಗಿ ಕ್ಷಮೆಯಾಚಿಸಲಿ: ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್ ಆಗ್ರಹ

Tulasi-1
Published on

ಮಂಡ್ಯ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ನಾಯಿಗೆ ಹೋಲಿಸಿದ ಮಾಜಿ ಸಿಎಂ ಸಿದ್ದರಾಮಯ್ಯ ಕೂಡಲೇ ಬಹಿರಂಗವಾಗಿ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಅವರ ವಿರುದ್ಧ ಜಿಲ್ಲಾದ್ಯಂತ ಸರಣಿ ಪ್ರತಿಭಟನೆ ಮಾಡಲಾಗುವುದು ಎಂದು ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷರೂ ಆದ ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್ ಎಚ್ಚರಿಸಿದರು.

ಸಾಮಾಜಿಕ ಜೀವನದಲ್ಲಿರುವ ಸಿದ್ದರಾಮಯ್ಯ ಅವರು ಮತ್ತೊಬ್ಬರ ಬಗ್ಗೆ ಮಾತನಾಡುವ ಎಚ್ಚರಿಕೆಯಿಂದ ಇರಬೇಕು. ವೈಯಕ್ತಿಕ ಮಟ್ಟದಲ್ಲಿ ಟೀಕೆ ಸರಿಯಲ್ಲ. ಸಂವಿಧಾನದಡಿ ಕೆಲಸ ಮಾಡಿ ಅನುಭವ ಇರುವವರು ಈ ರೀತಿಯ ಪದ ಪ್ರಯೋಗ ಮಾಡುವುದು ಅವರಿಗೆ ಶೋಭೆಯಲ್ಲ. ಹುದ್ದೆಗೆ ಗೌರವ ತರುವ ಕೆಲಸವನ್ನು ಮಾಡಬೇಕೇ ಹೊರತು ಕಳಂಕ ತರುವುದಲ್ಲ. ಅವರಿಗೆ ಅನುಕೂಲ ಮಾಡಿಕೊಟ್ಟರೆ ಅಥವಾ ಹೇಳಿದಂತೆ ಕೇಳಿದರೆ ಒಳ್ಳೆಯವರು, ಇಲ್ಲದಿದ್ದರೆ ಕೆಟ್ಟವರೇ ಎಂದು ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

ನಾಯಿ ನಿಯತ್ತಿನ ಸಂಕೇತ. ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ನಾಯಿಗೆ ವಿಶೇಷ ಸ್ಥಾನವಿದೆ. ಆದ್ದರಿಂದ ಸಿದ್ದರಾಮಯ್ಯ ಅವರು ತಮ್ಮ ಘನತೆಗೆ ತಕ್ಕಂತೆ ಮಾತನಾಡಬೇಕು. ವೈಯಕ್ತಿಕ ಟೀಕೆ, ತೇಜೋವಧೆ ಸಲ್ಲದು ಎಂದ ಅವರು, ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರು ಲವ್ ಜಿಹಾದ್ ಬಗ್ಗೆ ಮಾತನಾಡುವಾಗ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ್ ಅವರು ಪ್ರೀತಿ ಮಾಡಿದ್ದರೆ ಗೊತ್ತಾಗುತ್ತಿತ್ತು ಎಂದು ಟೀಕಿಸಿರುವುದು ಖಂಡನೀಯ. ಇನ್ನೊಬ್ಬಂತೆ 10-15 ಜನರನ್ನು ಮದುವೆಯಾಗುವ ಸಂಸ್ಕೃತಿ ನಮ್ಮದಲ್ಲ ಎಂದು ಟಾಂಗ್ ನೀಡಿದರು.

ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಅಶೋಕ್ ಜಯರಾಂ ಮಾತನಾಡಿ, ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಸಿ.ಎಂ.ಇಬ್ರಾಹಿಂ ಕೀಳು ಮಟ್ಟದಲ್ಲಿ ಮಾತನಾಡಿದ್ದಾರೆ. ಇದು ಅವರ ಸಂಸ್ಕೃತಿಯನ್ನು ತೋರುತ್ತದೆ. ಬೇರೆಯವರ ಖಾಸಗಿ ಜೀವನದ ಬಗ್ಗೆ ಮಾತನಾಡುವಾಗ ಮೊದಲು ನಮ್ಮ ಜೀವನ ಸರಿಯಾಗಿದೆಯೇ ಎಂದು ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಸಿ.ಎಂ.ಇಬ್ರಾಹಿಂ ಹೇಳಿಕೆಯು ಎಲ್ಲ ಮಠಾಧಿಶರು, ಸಾಧು-ಸಂತರಿಗೆ ಮಾಡಿರುವ ಅಪಮಾನ. ಸಿದ್ದರಾಮಯ್ಯನವರು ಜನರ ಚಪ್ಪಾಳೆ ಗಿಟ್ಟಿಸಲು ನಾಟಕೀಯ ಡೈಲಾಗ್‌ಗಳನ್ನು ಹೇಳುತ್ತಿದ್ದಾರೆ. ಇದೇ ರೀತಿ ವರ್ತನೆಯಿಂದ ಈಗಾಗಲೇ ಸಾರ್ವಜನಿಕರು ಅವರನ್ನು ತಿರಸ್ಕರ ಮಾಡಿದ್ದಾರೆ. ಅದನ್ನೇ ಮುಂದುವರೆಸಿಕೊಂಡು ಹೋದರೆ ಮತ್ತೆ ತಕ್ಕ ಪಾಠ ಕಲಿಯಬೇಕಾಗುತ್ತದೆ ಎಂದು ಲೇವಡಿ ಮಾಡಿದರು.

ಬಿಜೆಪಿ ಮಂಡ್ಯ ನಗರ ಘಟಕದ ಅಧ್ಯಕ್ಷ ವಿವೇಕ್, ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್, ಮಾಧ್ಯಮ ವಕ್ತಾರ ನಾಗಾನಂದ, ವಸಂತ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net