

ಕೆ.ಆರ್.ಪೇಟೆ: ಕೋಲಾರದ ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್ ನಮ್ಮ ಸೇನೆಯ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿರುವುದು ತೀವ್ರ ಖಂಡನೀಯ. ಕೂಡಲೇ ಕೊತ್ತೂರು ಮಂಜುನಾಥ್ ಅವರನ್ನು ಶಾಸಕ ಸ್ಥಾನದಿಂದ ವಜಾ ಮಾಡಿ, ಅವರ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸಬೇಕು ಎಂದು ಮಂಡ್ಯ ಜಿಲ್ಲಾ ಬಿಜೆಪಿ ನಿಕಟಪೂರ್ವ ಅಧ್ಯಕ್ಷ, ರಾಮನಗರ ಜಿಲ್ಲಾ ಬಿಜೆಪಿ ಉಸ್ತುವಾರಿ ಕೆ.ಜೆ.ವಿಜಯ್‌ಕುಮಾರ್ ಆಗ್ರಹಿಸಿದರು.
ಕೊತ್ತೂರು ಮಂಜುನಾಥ್ ಕೇವಲ ಶಾಸಕ ಅಷ್ಟೇ. ದೇಶದ ಸೇನೆಯ ಬಗ್ಗೆ ಮಾತನಾಡೋಕೆ ನೈತಿಕತೆ ಏನಿದೆ. ಆಪರೇಷನ್ ಸಿಂಧೂರ ನಡೆಸಿ ಪಾಕ್ ಉಗ್ರರನ್ನು ಸದೆಬಡಿದ ಸೇನೆಯ ಶೌರ್ಯದ ಬಗ್ಗೆ ಕೇವಲವಾಗಿ ಮಾತನಾಡಿದ್ದು ಖಂಡಿನೀಯ. 2005ರಿಂದ 2013ರವರೆವಿಗೂ ದೇಶಾದ್ಯಂತ ನಿತ್ಯ ಒಂದಲ್ಲ, ಒಂದು ಕಡೆ ಉಗ್ರರಿಂದ ಬಾಂಬ್ ದಾಳಿ ನಡೆಯುತ್ತಿದ್ದವು. ನೂರಾರು ಅಮಾಯಕರು ಸಾವನ್ನಪ್ಪುತ್ತಿದ್ದರು. ಆಗ ಉಗ್ರರು ಎಲ್ಲಿಂದ ಬಂದರು. ಘಟನೆಯ ನಂತರ ಎಲ್ಲಿಗೆ ಹೋದರು ಎಂಬುದನ್ನು ಕೊತ್ತೂರು ಮಂಜುನಾಥ್ ತಿಳಿಸಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಕೊತ್ತೂರು ಮಂಜುನಾಥ್ ಅವರಂತಹ ದೇಶಾಭಿಮಾನವಿಲ್ಲದ, ನಮ್ಮ ಸೇನೆಯ ಬಗ್ಗೆ ಗೌರವ ಇಲ್ಲದ ವ್ಯಕ್ತಿಯನ್ನು ಕೂಡಲೇ ಕಾಂಗ್ರೆಸ್ ಪಕ್ಷದಿಂದ ಉಚ್ಚಾಟನೆ ಮಾಡಬೇಕು. ವಿಧಾಸಭೆಯ ಅಧ್ಯಕ್ಷರು ಕೊತ್ತೂರು ಮಂಜುನಾಥ್ ಅವರನ್ನು ಕೂಡಲೇ ಶಾಸಕ ಸ್ಥಾನದಿಂದ ವಜಾ ಮಾಡಬೇಕು ಎಂದು ಒತ್ತಾಯಿಸಿದರು.