ಅಭಿವೃದ್ಧಿಗೆ ವಿನಿಯೋಗವಾಗಬೇಕಾದ ನಗರ ಸಭೆಯ 31 ಲಕ್ಷ ರೂ. ಕಛೇರಿಗೆ ವಿನಿಯೋಗಿಸುರುವುದು ಖಂಡನೀಯ - ಮಾಜಿ ಶಾಸಕ ಮಠಂದೂರು

Published on

ಪುತ್ತೂರು: ಶಾಸಕರ ನೂತನ ಕಛೇರಿಗೆ ಅನುದಾನ ಎಲ್ಲಿಂದ ಬಂದಿದೆ ಎಂಬುದನ್ನು ಯಾರು ನೋಡಿಲ್ಲ. ಪುತ್ತೂರಿನ ಇತಿಹಾಸದಲ್ಲಿ ಜನರ ತೆರಿಗೆಯಲ್ಲಿ ಐಶಾರಾಮಿ ಕಛೇರಿಯನ್ನು ಮಾಡಿಲ್ಲ. ಜನ ಸಾಮಾನ್ಯರಿಗೆ ಸಿಗುವ ರೀತಿಯಲ್ಲಿ ಎಲ್ಲಾ ಸರ್ಕಾರಿ ಕಛೇರಿಯಲ್ಲೇ ಮಾಡಲಾಗಿತ್ತು ಮತ್ತು ಸರ್ಕಾರದ ಹಣವನ್ನು ಪೋಲು ಮಾಡಿಲ್ಲ. ಪುತ್ತೂರಿನ ಅಭಿವೃದ್ಧಿಗೆ ವಿನಿಯೋಗವಾಗಬೇಕಾದ ನಗರ ಸಭೆಯ ೩೧ ಲಕ್ಷ ರೂ. ಕಛೇರಿಗೆ ವಿನಿಯೋಗಿಸಿರುವುದು ಖಂಡನೀಯ. ಶಾಸಕರು ಹಲವು ಮಂದಿ ಪಿ.ಎ.ಗಳನ್ನು ನೇಮಕ ಮಾಡಿಕೊಂಡಿದ್ದಾರೆಂದಾದರೆ ಸರ್ಕಾರಿ ಅಧಿಕಾರಿಗಳು ಕೆಲಸ ಮಾಡುತ್ತಿಲ್ಲವಾದರೆ ಸರ್ಕಾರಿ ವ್ಯವಸ್ಥೆ ನಿಷ್ಕ್ರಿಯವಾಗಿದೆ ಎಂದಾಯಿತು ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಹೇಳಿದರು.

ಬ್ರಷ್ಟಾಚಾರದ ಬಗ್ಗೆ ಮಾತನಾಡುವಾಗ ಸರ್ಕಾರದ ದುಡ್ಡು ಪೋಲಾಗುತ್ತಿರುವ ಬಗ್ಗೆಯೂ ಯೋಜನೆ ಮಾಡಬೇಕಾಗಿದೆ. ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ಕಛೇರಿಯನ್ನು ೩ಲಕ್ಷ ರೂ ನಲ್ಲಿ ಮಾಡಿದ್ದು, ಇದನ್ನು ಪಿಡಬ್ಲ್ಯುಡಿ ಅವರು ನೀಡಿದ್ದರು. ಆಡಳಿತ ಸಂಕೀರ್ಣಕ್ಕಾಗಿ ೪ ಕೋಟಿಯ ಅನುದಾನವನ್ನು ಇಟ್ಟಿದ್ದು, ಟೆಂಡರ್ ಆಗಿದೆ. ಪೂಡಾ ಕಛೇರಿ ಈಗ ಖಾಸಗೀ ಕಟ್ಟಡಕ್ಕೆ ಸ್ಥಳಾಂತರವಾಗಿ ನಗರ ಸಭೆಗೆ ೧೪ ಸಾವಿರ ರೂ ನಷ್ಟವಾಗುವ ಜತೆಗೆ, ಪೂಡಾಕ್ಕೆ ೨ಸಾವಿರ ದಷ್ಟು ಹೆಚ್ಚುವರಿ ಹೊರೆಯಾಗಿದೆ. ನಗರ ಸಭೆಯ ಹಣವನ್ನು ಜಿಲ್ಲಾಧಿಕಾರಿಗಳು ತಕ್ಷಣ ನೀಡುವ ಮೂಲಕ ನಗರ ಸಭೆ ಸದಸ್ಯರಿಗೆ ತಮ್ಮ ವಾರ್ಡ್ ನಲ್ಲಿ ಅಭಿವೃದ್ಧಿ ಮಾಡಲು ಅನುವು ಮಾಡಿಕೊಡಬೇಕು. ಇಲ್ಲದೇ ಹೋದಲ್ಲಿ ನಗರ ಸಭೆಯ ಸದಸ್ಯರ ಜತೆಗೆ ಬಿಜೆಪಿ ನಗರ ಸಭೆ ಮುಂಭಾಗದಲ್ಲಿ ಪ್ರತಿಭಟನೆಯನ್ನು ಮಾಡುವ ಅನಿವಾರ್ಯತೆ ಬರಬಹುದು ಎಂದು ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ತಿಳಿಸಿದರು.

ನಗರ ಸಭೆ ಮಾಜಿ ಅಧ್ಯಕ್ಷ ಜೀವಂಧ ಜೈನ್, ಸದಸ್ಯ ಪಿ. ಜಿ. ಜಗನ್ನಿವಾಸ ರಾವ್, ಗ್ರಾಮಾಂತರ ಮಂಡಲ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಮುಂಗ್ಲಿಮನೆ, ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಯುವರಾಜ್ ಪೆರಿಯತ್ತೋಡಿ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net