

ಉಡುಪಿ: ಕಳೆದ ಲೋಕಸಭಾ ಚುನವಣೆಯಲ್ಲಿ ಜನಸಾಮಾನ್ಯರಿಗೆ ಕೊಟ್ಟಿರುವ ಆಶೋತ್ತರಗಳನ್ನು ಬಿಜೆಪಿ ಈಡೇರಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಉತ್ತಮ ಆಡಳಿತದಿಂದಾಗಿ ವಿಶ್ವದಲ್ಲಿ ಭಾರತ ಐದನೇ ಬಲಿಷ್ಠ ರಾಷ್ಟ್ರವಾಗಿ ಗುರುತಿಸಿಕೊಂಡಿದೆ. ಹೀಗಾಗಿ ಈ ಬಾರಿ ಲೋಕಸಭಾ ಚುನಾವಣೆಯನ್ನು ಬಿಜೆಪಿ ನೈತಿಕ ಆಧಾರದ ಮೇರೆಗೆ ಎದುರಿಸಲಿದೆ ಎಂದು ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ. ಪ್ರಾಣೇಶ್ ತಿಳಿಸಿದರು.
ಉಡುಪಿಯ ಕಡಿಯಾಳಿಯಲ್ಲಿರುವ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕಾಂಗ್ರೆಸ್ ನಾಯಕರು ಯಾವುದನ್ನೂ ಅವಲೋಕನ ಮಾಡದೆ ತೆರಿಗೆ ಹಣದ ಹಂಚಿಕೆ ಕುರಿತಂತೆ ಆರೋಪ ಮಾಡುತ್ತಿದ್ದು, ಮಾತನಾಡುವ ಚಟಕ್ಕೋಸ್ಕರ ಭಾಷಣ ಮಾಡುತ್ತಿದ್ದಾರೆ. ಬಿಜೆಪಿ ಸರ್ಕಾರ ಭ್ರಷ್ಟಾಚಾರದ ಆರೋಪ ಇಲ್ಲದೆ ಕೆಲಸ ಮಾಡಿದೆ. ಗ್ಯಾರಂಟಿ ಯೋಜನೆಗಾಗಿ ಜನರ ತೆರಿಗೆ ಹಣವನ್ನೆಲ್ಲ ಪೋಲು ಮಾಡುತ್ತಿದ್ದೀರಿ. ಕಳೆದ 20 ವರ್ಷದ ಲೆಕ್ಕಾಚಾರ ತುಲನೆ ಮಾಡಿ ನೋಡಿ ಎಂದರು.
ರಾಜ್ಯಕ್ಕೆ 2.36 ಲಕ್ಷ ಕೋಟಿ ರೂ. ಅನುದಾನ
ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಮಾತನಾಡಿ, ರಾಜ್ಯಕ್ಕೆ ಲಭಿಸಿರುವ ಯುಪಿಎ ಮತ್ತು ಎನ್ ಡಿಎ ಅವಧಿಯ 20 ವರ್ಷದ ತೆರಿಗೆ ಮತ್ತು ಅನುದಾನ ಲೆಕ್ಕವನ್ನು ಜನತೆಯ ಮುಂದೆ ಇಡುತ್ತೇವೆ. ಮನಮೋಹನ್ ಸಿಂಗ್ ಸರ್ಕಾರ ಕರ್ನಾಟಕ್ಕೆ 81 ಸಾವಿರ ಕೋಟಿ ರೂ. ತೆರಿಗೆ ಹಣ ನೀಡಿದೆ. ಮೋದಿ ಅವಧಿಯಲ್ಲಿ 2,82,000 ಕೋಟಿ ರೂ. ನೀಡಿದೆ. ರಾಜ್ಯಕ್ಕೆ ಯುಪಿಎ ಅನುದಾನ 60 ಸಾವಿರ ಕೋಟಿ, ಬಿಜೆಪಿ ಸರ್ಕಾರದ ಅವಧಿಯಲ್ಲಿ 2.36 ಲಕ್ಷ ಕೋಟಿ ರೂ. ಅನುದಾನ ಬಂದಿದೆ ಎಂದು ಮಾಹಿತಿ ನೀಡಿದರು.
ವಿಪ ಸದಸ್ಯೆ ಭಾರತಿ ಶೆಟ್ಟಿ ಮಾತನಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರಕುಮಾರ್ ಕುಂದಾಪುರ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರೇಷ್ಮಾ ಉದಯ್ ಶೆಟ್ಟಿ, ರಾಘವೇಂದ್ರ ಕಿಣಿ, ಜಿಲ್ಲಾ ವಕ್ತಾರ ವಿಜಯ್ಕುಮಾರ್ ಉಪಸ್ಥಿತರಿದ್ದರು.