ಎಥೆನಾಲ್ ಘಟಕದಿಂದ ಆರ್ಥಿಕ ಚೈತನ್ಯ: ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್ ವಿಶ್ವಾಸ

Bjp
Published on

ಮಂಡ್ಯ: ಮೈಶುಗರ್ ಪುನಶ್ಚೇತನದ ಉದ್ದೇಶದೊಂದಿಗೆ ಎಥೆನಾಲ್ ಘಟಕ ಸ್ಥಾಪನೆ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ. ಈ ಮೂಲಕ ಕಾರ್ಖಾನೆಗೆ ಆರ್ಥಿಕವಾಗಿ ಚೈತನ್ಯ ತುಂಬುವ ಕೆಲಸವಾಗಲಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್ ಹೇಳಿದರು.

ಹಲವು ವರ್ಷಗಳಿಂದ ಸ್ಥಗಿತಗೊಂಡಿದ್ದ ಕಾರ್ಖಾನೆಗೆ ಮರುಜೀವ ನೀಡಲಾಗಿದೆ. ಖಾಸಗೀಕರಣ, ಸರ್ಕಾರಿ-ಖಾಸಗಿ ಸಹಭಾಗಿತ್ವದಲ್ಲಿ ಮುನ್ನಡೆಸಲು ಚಿಂತನೆ ನಡೆಸಲಾಗಿತ್ತು. ರೈತರ ಒತ್ತಾಯದ ಕಾರಣ ಸರ್ಕಾರವೇ ನಡೆಸಲು ನಿರ್ಧರಿಸಿ ಕಾರ್ಖಾನೆಯನ್ನು ಪ್ರಾರಂಭಿಸಲಾಗಿದೆ. ಕಬ್ಬಿನ ಕೊರತೆಯಿಂದಾಗಿ ಸದ್ಯ ಕಾರ್ಖಾನೆ ಸ್ಥಗಿತವಾಗಿದೆ. ಮುಂದಿನ ಹಂಗಾಮಿನಲ್ಲಿ ಕಾರ್ಖಾನೆ ಉತ್ತಮವಾಗಿ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.

ಮುಂದಿನ ದಿನಗಳಲ್ಲಿ ಸಕ್ಕರೆಗೆ ಪರ್ಯಾಯವಾಗಿ ಎಥೆನಾಲ್ ಉತ್ಪಾದನೆ ಮಾಡಿ ಆರ್ಥಿಕವಾಗಿ ಚೈತನ್ಯ ನೀಡಲಾಗುವುದು. ಆ ಮೂಲಕ ಕಬ್ಬು ಬೆಳೆಗಾರರ ಜೀವನೋಪಾಯಕ್ಕೆ ಹೆಚ್ಚಿನ ಉತ್ತೇಜನ ನೀಡುವ ಉದ್ದೇಶಿಸಲಾಗಿದೆ. ಶೈಕ್ಷಣಿಕವಾಗಿಯೂ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಕೆ.ಆರ್.ಪೇಟೆಯ ತಾಂತ್ರಿಕ ಕಾಲೇಜನ್ನು ಕೆಐಟಿಯಾಗಿ ಮೇಲ್ದರ್ಜೆಗೇರಿಸಲು ಪ್ರಸ್ತಾಪಿಸಲಾಗಿದೆ. ಇದರೊಂದಿಗೆ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್)ಯಲ್ಲಿ ಸ್ನಾತಕೋತ್ತರ ಪದವಿಯನ್ನು ಪ್ರಾರಂಭಿಸಲು ಮುಖ್ಯಮಂತ್ರಿಗಳು ನಿರ್ಧರಿಸಿದ್ದಾರೆ ಎಂದು ಹೇಳಿದರು.

ರೈತರ ಸಾಲದ ಮೊತ್ತವನ್ನು 3 ಲಕ್ಷ ರೂ.ಗಳಿಂದ 5 ಲಕ್ಷ ರೂ.ಗೆ ಏರಿಸಲಾಗಿದೆ. ಕ್ರೀಡಾಇಲಾಖೆಗೆ 1 ಸಾವಿರ ಕೋಟಿ ರೂ. ನೀಡುವ ಮೂಲಕ ಕ್ರೀಡಾಂಗಣ, ಜಿಮ್ ಸ್ಥಾಪನೆ, ಮಂಡ್ಯದಲ್ಲಿ ಕ್ರೀಡಾ ವಿಜ್ಞಾನ ಕೇಂದ್ರ ಸ್ಥಾಪನೆ, ಅಗ್ನಿವೀರ್ ಯೋಧರರಿಗೆ ಉಚಿತ ತರಬೇತಿ ಸೇರಿದಂತೆ ವಿವಿಧ ಯೋಜನೆಗಳನ್ನು ನೀಡುವ ಮೂಲಕ ಸರ್ವವ್ಯಾಪಿ, ಸರ್ವಸ್ಪರ್ಶಿ ಬಜೆಟ್ ನೀಡಿದ್ದಾರೆ ಎಂದು ಬಣ್ಣಿಸಿದರು.

ನಗರ ಘಟಕದ ಅಧ್ಯಕ್ಷ ವಿವೇಕ್, ಮಾಧ್ಯಮ ವಕ್ತಾರ ನಾಗಾನಂದ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net