ಈರಣ್ಣ ಕಡಾಡಿ ಮೇಲೆ ಹಲ್ಲೆ ಯತ್ನ ಸರಿಯಲ್ಲ: ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಜೋಗಿಗೌಡ ಆಕ್ರೋಶ

Tulasi-2
Published on

ಮಂಡ್ಯ: ರಾಜ್ಯಸಭಾ ಸದಸ್ಯ, ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಈರಣ್ಣ ಕಡಾಡಿ ಅವರ ಮೇಲೆ ಸತೀಶ್ ಜಾರಕಿಹೊಳಿ ಬೆಂಬಲಿಗರು ಹಲ್ಲೆಗೆ ಯತ್ನಿಸಿರುವ ಘಟನೆಯನ್ನು ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಜೋಗಿಗೌಡ ತೀವ್ರವಾಗಿ ಖಂಡಿಸಿದರು.

ಈರಣ್ಣ ಕಡಾಡಿ ಅವರು ಪ್ರಯಾಣಿಸುತ್ತಿದ್ದ ಕಾರನ್ನು ಸತೀಶ್ ಜಾರಕಿಹೊಳಿ ಅವರ ಬೆಂಬಲಿಗರು ಮತ್ತು ಗೂಂಡಾಗಳು ತಡೆದು, ಅವರ ಮೇಲೆ ಹಲ್ಲೆಗೆ ಪ್ರಯತ್ನಿಸಿದ್ದಾರೆ. ಇದು ಸರಿಯಲ್ಲ. ಇಂತಹ ಕೃತ್ಯಗಳು ಅವರ ಮನಃಸ್ಥಿತಿಯನ್ನು ತೋರುತ್ತವೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಕ್ಷೇಪ ವ್ಯಕ್ತಪಡಿಸಿದರು.

ವಿಚಾರವಾದಿ ಎಂಬ ಮುಖವಾಡ ಧರಿಸಿರುವ ಸತೀಶ್ ಜಾರಕಿಹೊಳಿ ಅವರು ಭ್ರಷ್ಟಾಚಾರವನ್ನೇ ಉಸಿರಾಗಿಸಿಕೊಂಡು ರಾಜಕೀಯ ಮಾಡುತ್ತಿದ್ದಾರೆ. ದಲಿತ ಸಂಘಟನೆಗಳ ಹೆಸರಿನಲ್ಲಿ ಒಬ್ಬ ರಾಜ್ಯಸಭಾ ಸದಸ್ಯರ ಮೆಲೆ ಹಲ್ಲೆಗೆ ಪ್ರಯತ್ನಿಸಿರುವುದು ಪ್ರಜಾಪ್ರಭುತ್ವದ ಮೌಲ್ಯಗಳ ದಮನವಾಗಿದೆ. ಪ್ರತಿಭಟಿಸುವ ಹಕ್ಕು ಎಲ್ಲರಿಗೂ ಇದೆ. ಆದರೆ, ಪ್ರತಿಭಟನೆಗಳು ಜನಪರವಾಗಿರಬೇಕು. ದ್ವೇಷ ಸಾಧನೆಗೆ ಅವಕಾಶ ಕೊಡಬಾರದು. ಸತೀಶ್ ಜಾರಕಿಹೊಳಿ ಮತ್ತವರ ಬೆಂಬಲಿಗರು ತಮ್ಮ ಮನಸ್ಥಿತಿ ಬದಲಾಯಿಸಿಕೊಳ್ಳಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಅವರ ವಿರುದ್ಧ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಜಿಲ್ಲಾ ಉಪಾಧ್ಯಕ್ಷ ಯಮದೂರು ಸಿದ್ದರಾಜು ಮಾತನಾಡಿ, ಮುಂಬರುವ ಚುನಾವಣೆಯಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಪಕ್ಷ ಸಂಘಟನೆಗೆ ಆದ್ಯತೆ ನೀಡಲಾಗಿದೆ. ಈ ನಿಟ್ಟಿನಲ್ಲಿ ಪ್ರತಿ ಹೋಬಳಿ, ಪಂಚಾಯಿತಿ ಮಟ್ಟದಲ್ಲಿ ಮುಖಂಡರನ್ನು ಭೇಟಿಯಾಗಿ ಚರ್ಚಿಸಿ, ಸಭೆ-ಸಮಾರಂಭಗಳನ್ನು ನಡೆಸಿ ಬಿಜೆಪಿ ಬೆಂಬಲಿಸುವಂತೆ ಮನವೊಲಿಸಲಾಗುವುದು. ಪಕ್ಷದ ರಾಜ್ಯ ಮಟ್ಟದ ನಾಯಕರು ಸಭೆಗಳಲ್ಲಿ ಭಾಗವಹಿಸುವರು ಎಂದರು.

ಕಾರ್ಯದರ್ಶಿಗಳಾದ ಎಚ್.ಎಂ.ಕೃಷ್ಣ, ಜೆ.ಜೆ.ನಿಂಗರಾಜು ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net