ಶೀಘ್ರವೇ ಸಿಎಂ, ಸಿಎನ್‌ಎಗೆ ಅಭಿನಂದನೆ: ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್ ಮಾಹಿತಿ

Bjp
Published on

ಮಂಡ್ಯ: ಮೈಶುಗರ್ ಕಾರ್ಖಾನೆ ಪುನಾರಂಭ ಮಾಡಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಂಡ್ಯ ವಿಶ್ವವಿದ್ಯಾಲಯ ಸ್ಥಾಪನೆಗೆ ಪ್ರಮುಖ ಕಾರಣರಾದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರನ್ನು ಜಿಲ್ಲೆಯಲ್ಲಿ ಬೃಹತ್ ಸಮಾರಂಭ ಆಯೋಜಿಸಿ ಅವರನ್ನು ಅಭಿನಂದಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಬಿಜೆಪಿ ಹಾಗೂ ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಿ.ಪಿ.ಉಮೇಶ್ ಹೇಳಿದರು.
ಒಂದು ಲಕ್ಷಕ್ಕೂ ಹೆಚ್ಚು ಜನರನ್ನು ಸೇರಿಸಿ ಐತಿಹಾಸಿಕ ಬೃಹತ್ ಸಮಾರಂಭ ಆಯೋಜಿಸಲಾಗುವುದು. ಈ ಹಿಂದೆ ಯಾವ ಮುಖ್ಯಮಂತ್ರಿ, ಸಚಿವರಿಗೂ ನಡೆಯದ ರೀತಿಯಲ್ಲಿ ಈ ಇಬ್ಬರೂ ಗಣ್ಯರನ್ನು ಅಭಿನಂದಿಸಲು ತೀರ್ಮಾನಿಸಲಾಗಿದೆ. ನಾಲ್ಕು ವರ್ಷಗಳಿಂದ ಸ್ಥಗಿತಗೊಂಡಿದ್ದ ಮೈಶುಗರ್ ಕಾರ್ಖಾನೆಯನ್ನು ಸರ್ಕಾರದಿಂದ ನಡೆಸುವುದು ಸಾಧ್ಯವೇ ಇಲ್ಲವೆನ್ನುವಂತಿತ್ತು. ಇಂತಹ ಪರಿಸ್ಥಿತಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ದಿಟ್ಟ ನಿಲುವು ತೆಗೆದುಕೊಂಡು ಜನರಿಗೆ ಅನುಕೂಲ ಕಲ್ಪಿಸಿಕೊಟ್ಟಿದ್ದಾರೆ. ಆದ್ದರಿಂದ ಅವರನ್ನು ಅಭಿನಂದಿಸಲಾಗುವುದು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇನ್ನು ಈವರೆಗೆ ಏಕೀಕೃತ ವಿಶ್ವವಿದ್ಯಾಲಯವಾಗಿದ್ದ ಮಂಡ್ಯ ವಿಶ್ವವಿದ್ಯಾಲಯವನ್ನು ಉನ್ನತೀಕರಿಸಿ ಇಡೀ ಜಿಲ್ಲೆಗೆ ವಿಸ್ತರಿಸಲಾಗಿದೆ. ಇದರಿಂದ ಜಿಲ್ಲೆಯ 47 ಕಾಲೇಜುಗಳು ಮಂಡ್ಯ ವಿವಿ ವ್ಯಾಪ್ತಿಗೆ ಬರಲಿವೆ. ಪರಿಣಾಮ ಜಿಲ್ಲೆಯಲ್ಲಿ ಶೈಕ್ಷಣಿಕ ಚಟುವಟಿಕೆಗಳು ಇನ್ನಷ್ಟು ಹೆಚ್ಚಾಗಲಿವೆ. ಜಿಲ್ಲೆಯ ವಿದ್ಯಾರ್ಥಿಗಳು ಉನ್ನತ ಶಿಕ್ಷಣ, ಸಂಶೋಧನೆಗಾಗಿ ದೂರದ ಪ್ರದೇಶಗಳಿಗೆ ಹೋಗುವ ಬದಲು ಸ್ಥಳೀಯವಾಗಿ ಅವಕಾಶ ಸಿಕ್ಕಂತಾಗಿದೆ. ಇದಕ್ಕೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರೇ ಕಾರಣ. ಆದ್ದರಿಂದ ಅವರನ್ನು ಗೌರವಿಸಲಾಗುವುದು. ಇನ್ನು ಎಂಟತ್ತು ದಿನಗಳಲ್ಲಿ ಕಾರ್ಯಕ್ರಮ ಆಯೋಜಿಸಬಹುದು. ಸಿಎಂ ಅವರು ದಿನಾಂಕ ನೀಡಿದ ಕೂಡಲೇ ಪ್ರಕಟಿಸಲಾಗುವುದು. ಈಗಾಗಲೇ ಪೂರ್ವ ಸಿದ್ಧತೆಯನ್ನು ಆರಂಭಿಸಲಾಗಿದೆ ಎಂದರು.
ಜಿಪಂ ಮಾಜಿ ಸದಸ್ಯ ಚಂದಗಾಲು ಶಿವಣ್ಣ, ಕೆ.ನಾಗಣ್ಣಗೌಡ, ಸಿ.ಟಿ.ಮಂಜುನಾಥ್, ವಸಂತಕುಮಾರ್, ಪ.ನಾ.ಸುರೇಶ್, ನಾಗಾನಂದ, ಎಲೆಚಾಕನಹಳ್ಳಿ ಬಸವರಾಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net