

ಮಂಡ್ಯ: ಬೆಲ್ಲಕ್ಕೆ ವಿಧಿಸಿರುವ ಶೇ.5ರಷ್ಟು ಜಿಎಸ್‌ಟಿ ಉತ್ಪಾದಕರಿಗೆ ಅನ್ವಯಿಸುವುದಿಲ್ಲ. ಆದರೆ ಈ ಬಗ್ಗೆ ಒಂದಷ್ಟು ಗೊಂದಲವಿದ್ದು, ಶೀಘ್ರದಲ್ಲೇ ಸ್ಪಷ್ಟ ನಿಯಮಗಳು ಬರಲಿದೆ ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ ಹೇಳಿದರು.
ಉತ್ಪಾದಕರಿಗೆ ಖರೀದಿಸಿ ಮಾರಾಟ ಮಾಡುವವರಿಗೆ ಮಾತ್ರ ಜಿಎಸ್‌ಟಿ ಅನ್ವಯವಾಗುತ್ತದೆ. ಈ ಬಗ್ಗೆ ಯಾವುದೇ ಗೊಂದಲ ಬೇಡ. ಇನ್ನು ಈಗಾಗಲೇ ಜಿಲ್ಲಾಮಟ್ಟದಲ್ಲಿ ಅಧಿಕಾರಿಗಳ ಸಭೆ ಆಯೋಜಿಸಿ ಮಾಹಿತಿ ನೀಡಲಾಗಿದೆ. ಆದ್ದರಿಂದ ಉತ್ಪಾದಕರು ಆತಂಕಪಡುವುದು ಬೇಡ. ಇನ್ನು ಮಾರಾಟಗಾರರು ಜಿಎಸ್‌ಟಿ ದರವನ್ನು ಉತ್ಪಾದಕರ ಮೇಲೆ ವಿಧಿಸುತ್ತಿರುವ ಹಾಗೂ ಆದೇಶದ ಕುರಿತ ಸ್ಪಷ್ಟ ಮಾಹಿತಿಯನ್ನು ಶೀಘ್ರದಲ್ಲೇ ಸರ್ಕಾರದಿಂದ ಬಿಡುಗಡೆಗೊಳಿಸಲಾಗುವುದು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇನ್ನು ಕಬ್ಬಿನ ಕನಿಷ್ಟ ದರದಲ್ಲಿ ಶೇ.5ರಷ್ಟು ಹೆಚ್ಚಳಕ್ಕೆ ಕೇಂದ್ರ ಸರ್ಕಾರದ ಆರ್ಥಿಕ ವ್ಯವಹಾರಗಳ ಸಂಸದೀಯ ಸಮಿತಿ ತೀರ್ಮಾನ ಸ್ವಾಗತಾರ್ಹ. ದರ ಹೆಚ್ಚಳ ಮಾಡಿರುವುದರಿಂದ ಕಬ್ಬು ಬೆಳೆಗಾರರಿಗೆ ಹೆಚ್ಚಿನ ಪ್ರಯೋಜನವಾಗಲಿದೆ. ಕೇಂದ್ರ ಸರ್ಕಾರ ಉತ್ಪಾದನಾ ವೆಚ್ಚದಲ್ಲಿ ಆದ ಏರಿಕೆ ಪರಿಗಣಿಸಿ 2013-14ರಲ್ಲಿ ಟನ್ ಕಬ್ಬಿಗೆ 2100 ರೂ. ಕನಿಷ್ಟ ಖರೀದಿ ದರ, 2021-22ರಲ್ಲಿ ಕೇಂದ್ರದ ಬಿಜೆಪಿ ಸರ್ಕಾರ 2900 ರೂ ನಿಗದಿ ಮಾಡಿದೆ. ರೈತರ ಬೇಡಿಕೆಗೆ ಸ್ಪಂದಿಸಿರುವ ಕೇಂದ್ರ ಸರ್ಕಾರ ಮುಂದಿನ ಅವಧಿಯಲ್ಲಿ(2022ರ ಅಕ್ಟೋಬರ್, 2023ರ ಸೆಪ್ಟಂಬರ್) ಕನಿಷ್ಟ ಖರೀದಿ ದರದಲ್ಲಿ ಶೇ.5ರಷ್ಟು ಹೆಚ್ಚಳ ಮಾಡಿ ಟನ್ ಕಬ್ಬಿಗೆ 3,050 ರೂ ಏರಿಕೆ ಮಾಡಲು ಅನುಮೋದನೆ ನೀಡಿದೆ. ಕಳೆದ ಅವಧಿಗೆ ಹೋಲಿಸಿದರೆ 2022-23ರ ಕನಿಷ್ಟ ಖರೀದಿ ದರ ಶೇ.2.6ರಷ್ಟು ಹೆಚ್ಚಾಗಿದೆ ಎಂದು ಹೇಳಿದರು.
ಬಿಜೆಪಿ ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಕೆ.ಎಸ್.ನಂಜುಂಡೇಗೌಡ, ಜಿಪಂ ಮಾಜಿ ಸದಸ್ಯ ಚಂದಗಾಲು ಶಿವಣ್ಣ, ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್, ಮಾಧ್ಯಮ ವಕ್ತಾರ ನಾಗಾನಂದ್, ಹನಿಯಂಬಾಡಿ ನಾಗರಾಜು, ಮಂಜುನಾಥ್ ಇದ್ದರು.