

ಮಂಡ್ಯ: ಚನ್ನಪಟ್ಟಣದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಅವರ ಕಾರಿನ ಮೇಲೆ ಮೊಟ್ಟೆ ಎಸೆತ ಸಣ್ಣತನದ್ದಾಗಿದೆ. ಅನ್ಯಾಯವಾಗಿದ್ದರೆ ಅದನ್ನು ವಿರೋಧಿಸುವುದಕ್ಕೆ ಅವಕಾಶವಿದೆ. ಆದರೆ ದೌರ್ಜನ್ಯ, ದಬ್ಬಾಳಕೆ, ಬೆದರಿಕೆ ಹಾಕುವುದರಿಂದ ಯಾರಿಗೂ ಲಾಭವಿಲ್ಲ ಎನ್ನುವುದನ್ನು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅರ್ಥ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಚಂದಗಾಲು ಶಿವಣ್ಣ ಚಂದಗಾಲು ಆಕ್ರೋಶ ವ್ಯಕ್ತಪಡಿಸಿದರು.
ಸಿಪಿವೈ ಅವರು ಮುಖ್ಯಮಂತ್ರಿ ಅವರಿಗೆ ಪತ್ರ ಬರೆದು ಸಿಎಂ ವಿಶೇಷ ನಿಧಿಯಡಿ ಅನುದಾನ ತಂದಿದ್ದರು. ಆದರೆ, ತಮ್ಮನ್ನು ಬಿಟ್ಟು ಈ ಅನುದಾನದ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಲಾಗುತ್ತಿದೆ ಎಂಬ ಕಾರಣದಿಂದ ಭೂಮಿಗೆ ಅಡ್ಡಿಪಡಿಸಿ, ಶಾಸಕರ ಕಾರಿನ ಮೇಲೆ ಮೊಟ್ಟೆ ಎಸೆದು ಕಾರಿನ ಗಾಜು ಜಖಂಗೊಳಿಸಲಾಗಿದೆ. ಇದೆಷ್ಟು ಸರಿ ಎಂದು ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
ಕುಮಾರಸ್ವಾಮಿ ಅವರು 2 ಬಾರಿ ಮುಖ್ಯಮಂತ್ರಿಯಾಗಿದ್ದವರು. ಸಿಎಂ ವಿಶೇಷ ಅನುದಾನದ ಬಗ್ಗೆ ತಿಳಿದಿರಬೇಕಲ್ಲವೇ?. ಶಿಷ್ಟಾಚಾರ ಉಲ್ಲಂಘನೆ ನೆಪದಲ್ಲಿ ಕಾರ್ಯಕ್ರಮಕ್ಕೆ ಅಡ್ಡಪಡಿಸಲಾಗಿದೆ. ತಪ್ಪಿದ್ದರೆ ಅದನ್ನು ತಿಳಿಸಿ ಹೇಳಲಿ. ಅದು ಬಿಟ್ಟು ದೌರ್ಜನ್ಯ ನಡೆಸುವುದು ಯಾವ ನ್ಯಾಯ?. ಮಳೆ ಬಂದು ಅತಿವೃಷ್ಟಿ ಉಂಟಾದಾಗ ಇವರೇ ಮುಖ್ಯಮಂತ್ರಿಯನ್ನು ಚನ್ನಪಟ್ಟಣಕ್ಕೆ ಕರೆತಂದು ಪರಿಶೀಲನೆ ನಡೆಸಿದರು. 224 ಕ್ಷೇತ್ರಗಳಲ್ಲಿ ಕಂಡಿದ್ದು ಚನ್ನಪಟ್ಟಣ ಮಾತ್ರವಾ?. ಉಳಿದ 223 ಕ್ಷೇತ್ರಗಳು ಗೋಚರಿಸಲಿಲ್ಲವೇ?. ಮಾಜಿ ಸಿಎಂ ಆಗ ಉಳಿದ ಕ್ಷೇತ್ರಗಳ ಬಗ್ಗೆ ಇವರಿಗೆ ಜವಾಬ್ದಾರಿ ಇಲ್ಲವೇ ಎಂದು ಪ್ರಶ್ನೆಗಳ ಸುರಿಮಳೆಗೈದರು.
ಮಾತೆತ್ತಿದರೆ ಹಾಸನ, ಮಂಡ್ಯ ನನ್ನೆರಡು ಕಣ್ಣುಗಳು ಎನ್ನುತ್ತಾರೆ. ಆದರೆ, ಮಂಡ್ಯ ಜಿಲ್ಲೆಗೆ ಇವರು ಮಾಡಿರುವುದಾದರೂ ಏನು?. ಮಗನನ್ನು ಸಂಸದನಾಗಿ ಮಾಡಲು ಮಂಡ್ಯ ಜಿಲ್ಲೆಗೆ 9 ಸಾವಿರ ಕೋಟಿ ರೂ ಅನುದಾನ ಘೋಷಣೆ ಮಾಡಿದರು. ಆದರಿದು ಬಾಯಿ ಮಾತಿನಲ್ಲೇ ಉಳಿಯಿತು. ಅನುದಾನ ಮಂಜೂರು ಮಾಡಿದ್ದರೆ ಅದೆಲ್ಲೆಗೆ ಹೋಯಿತು ಎಂದು ಎಚ್‌ಡಿಕೆ ಅವರೇ ಉತ್ತರಿಸಬೇಕೆಂದು ಆಗ್ರಹಿಸಿದರು.
ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್, ವಿನೋಬಾ ಹಾಜರಿದ್ದರು.