

ಕಾರವಾರ: ಧರ್ಮಸ್ಥಳ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿ ಬಿಜೆಪಿ ಸೆಪ್ಟೆಂಬರ್ 1 ರಂದು ಧರ್ಮಸ್ಥಳ ಚಲೋ ಆಯೋಜಿಸಿದೆ ಎಂದು ಪಕ್ಷದ ರಾಜ್ಯ ಉಪಾಧ್ಯಕ್ಷೆ ಹಾಗೂ ಧರ್ಮಸ್ಥಳ ಚಲೋ ಸಂಚಾಲಕಿ ರೂಪಾಲಿ ನಾಯ್ಕ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಅಽಕಾರಕ್ಕೆ ಬಂದ ನಂತರ ಹಿಂದು ದೇವಾಲಯ ಹಾಗೂ ಹಿಂದುಗಳ ಧಾರ್ಮಿಕ ಶ್ರದ್ಧೆಯ ಮೇಲೆ ದಾಳಿ ನಡೆಸುವ ನಿರಂತರ ಪ್ರಯತ್ನ ನಡೆದಿದೆ. ಹಿಂದಿನ ಬಿಜೆಪಿ ಸರ್ಕಾರ ಧಾರ್ಮಿಕ ದತ್ತಿ ಇಲಾಖೆಯಿಂದ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ನೀಡಿದ್ದ ಹಣವನ್ನು ಈಗಿನ ಸರ್ಕಾರ ಕಡಿತ ಮಾಡಿದೆ. ಹಿಂದು ದೇವಾಲಯಗಳು ಹಾಗೂ ಆಚರಣೆಗಳ ಬಗ್ಗೆ ಕಪು÷್ಪ ಮಸಿ ಎರಚುವ ಎಡಪಂಥೀಯರ ತಂತ್ರಕ್ಕೆ ಕಾಂಗ್ರೆಸ್ ಸರ್ಕಾರ ತಲೆಬಾಗಿದೆ. ಅದರ ಭಾಗವಾಗಿ ಧರ್ಮಸ್ಥಳ ಕ್ಷೇತ್ರ ಹಾಗೂ ವಿರೇಂದ್ರ ಹೆಗ್ಗಡೆ ಅವರ ಹೆಸರಿಗೆ ಕಳಂಕ ತರುವ ಷಡ್ಯಂತ್ರ ನಡೆದಿದೆ.
ಧರ್ಮಸ್ಥಳ ಕೇವಲ ಧಾರ್ಮಿಕ ಕೇಂದ್ರವಲ್ಲ. ವೀರೇಂದ್ರ ಹೆಗ್ಗಡೆ ಅವರು ಜಾರಿಗೆ ತಂದ ಗ್ರಾಮೀಣಾಭಿವೃದ್ಧಿ ಯೋಜನೆ ವಿಶ್ವಕ್ಕೇ ಮಾದರಿಯಾಗಿದೆ. ಕೋಟ್ಯಂತರ ಬಡ ಕುಟುಂಬಗಳು ಆರ್ಥಿಕವಾಗಿ ಸದೃಢವಾಗಲು ಹೆಗ್ಗಡೆ ಅವರು ಕಾರಣರಾಗಿದ್ದಾರೆ. ಯಾರೋ ಆರೋಪ ಮಾಡಿದರು ಎಂಬ ಕಾರಣಕ್ಕೆ ಪೂರ್ವಾಪರ ವಿಚಾರಿಸದೇ ಕಾಂಗ್ರೆಸ್ ಸರ್ಕಾರ ಎಸ್‌ಐಟಿ ರಚಿಸಿತು. ಮಾಸ್ಕ್ ಧರಿಸಿ ಒಬ್ಬ ಬಂದು ದೂರು ಕಟ್ಟ ಎಂದಾಕ್ಷಣ ಆತನ ಹಿನ್ನೆಲೆ ತಿಳಿಯದೇ ಎಸ್‌ಐಟಿ ಎಲ್ಲೆಡೆ ಉತ್ಖನನ ನಡೆಸಿತು. ಸರ್ಕಾರ ಗುಪ್ತಚರ ಇಲಾಖೆಯ ವೈಫಲ್ಯ ಇದರಲ್ಲಿ ಎದ್ದು ಕಾಣುತ್ತದೆ. ಕೋಟ್ಯಂತರ ಜನರ ಶ್ರದ್ಧಾ ಕೇಂದ್ರವಾಗಿರುವ ಧರ್ಮಸ್ಥಳದ ಹೆಸರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೆಡಿಸುವ ತಂತ್ರ ನಡೆಯಿತು.
ಧಮಸ್ಥಳದ ಯುವತಿ ಸೌಜನ್ಯಳಿಗೆ ನ್ಯಾಯ ಸಿಗಬೇಕು ಎಂಬುದು ಸತ್ಯ ಆದರೆ, ಅದನ್ನು ಕಾರಣವಾಗಿಟ್ಟುಕೊಂಡು ಸಮೀರ್ ಹಾಗೂ ಇತರ ಗ್ಯಾಂಗ್ ನಡೆಸಿದ ತಂತ್ರಗಳು ಬಯಲಾಗಬೇಕಿದೆ. ಈ ಹಿನ್ನೆಲೆಯಲ್ಲಿ ಸಿಬಿಐ ತನಿಖೆಯೇ ಸೂಕ್ತವಾಗಿದೆ ಎಂದರು.
ಕಾರವಾರ ನಗರಸಭೆ ಅಧ್ಯಕ್ಷ ರವಿರಾಜ ಅಂಕೋಲೆಕರ್, ಪಕ್ಷದ ಜಿಲ್ಲಾ ಉಪಾಧ್ಯಕ್ಷ ಸಂಜಯ ಸಾಳುಂಕೆ, ಕಾರ್ಯದರ್ಶಿ ಪ್ರಶಾಂತ ನಾಯ್ಕ, ಮಾಧ್ಯಮ ಸಹ ವಕ್ತಾರ ಜಗದೀಶ ನಾಯಕ ಮೊಗಟಾ, ವಿಶೇಷ ಆಮಂತ್ರಿತ ಮನೋಜ ಭಟ್, ಅಂಕೋಲಾ ಮಂಡಲ ಅಧ್ಯಕ್ಷ ಸಂಜಯ ನಾಯ್ಕ, ಕಾರವಾರ ಗ್ರಾಮೀಣ ಮಂಡಲ ಅಧ್ಯಕ್ಷ ಸುಭಾಷ ಗುನಗಿ, ಸೂರಜ್ ಸೋನಿ ಇದ್ದರು.
5 ಸಾವಿರ ಜನ ಭಾಗಿ
ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್.ಹೆಗಡೆ ಮಾತನಾಡಿ, ಪ್ರತಿ ಮನೆಯಲ್ಲಿ ಸಧರ್ಮಸ್ಥಳ ಮಂಜುನಾಥನ ಫೋಟೋ ಇದೆ. ಕೋಟ್ಯಂತರ ಜನರ ಧಾರ್ಮಿಕ ಭಾವನೆಗಳಿಗೆ ಈ ಘಟನೆಯಿಂದ ಧಕ್ಕೆಯಾಗಿದೆ. ಹಾಗಾಗಿ ಎಲ್ಲರನ್ನೂ ಒಗ್ಗೂಡಿಸಿ ಸೆ.1 ರಂದು ಧರ್ಮಸ್ಥಳದಲ್ಲಿ ದೊಡ್ಡ ಸಮಾವೇಶ ನಡೆಯಲಿದೆ. ಧರ್ಮಸ್ಥಳ ಚಲೋದಲ್ಲಿ ಉತ್ತರ ಕನ್ನಡದಿಂದ ಕನಿಷ್ಠ 5 ಸಾವಿರ ಜನ ಪಾಲ್ಗೊಳ್ಳಲು ನಿರ್ಧರಿಸಿರುವುದಾಗಿ ತಿಳಿಸಿದರು.