ಕೇಂದ್ರ ಅನುದಾನದಿಂದ ಮಡಿಕೇರಿಯಲ್ಲಿ ಕಾಮಗಾರಿ

bjp press meet
Published on

ಮಡಿಕೇರಿ:

ಮಡಿಕೇರಿ ನಗರಸಭೆಗೆ ಕೇಂದ್ರ ಸರ್ಕಾರದಿಂದ ವಿವಿಧ ಅನುದಾನಗಳು ಬಂದಿದ್ದು, ಈ ಅನುದಾನದಲ್ಲಿ ನಗರಸಭೆ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲಾಗುತ್ತಿದೆ ಎಂದು ನಗರಸಭೆ ಮಾಜಿ ಅಧ್ಯಕ್ಷೆ ಅನಿತಾ ಪೂವಯ್ಯ ತಿಳಿಸಿದರು. ನಗರಸಭೆ ವ್ಯಾಪ್ತಿಯಲ್ಲಿ ಕೇಂದ್ರ ಸರ್ಕಾರದ ಅನುದಾನದಿಂದ ನಡೆಯುತ್ತಿರುವ ಕಾಮಗಾರಿಗಳಿಗೆ ಕೇಂದ್ರ ಸರ್ಕಾರ ಶೇ.50, ರಾಜ್ಯ ಸರ್ಕಾರ ಶೇ. 33 ಹಾಗೂ ನಗರಸಭೆ ಶೇ.17ರಷ್ಟು ಪಾಲು ಭರಿಸುತ್ತಿದೆ. 6.69 ಕೋಟಿ ರೂ. ವೆಚ್ಚದಲ್ಲಿ ಸ್ವಚ್ಛಭಾರತ್ ಮಿಷನ್ 1, ಭಾಗ 1ರಲ್ಲಿ ಪಾರಂಪರಿಕ ತ್ಯಾಜ್ಯ ವಿಲೇವಾರಿ ಕೆಲಸ ಈಗಾಗಲೇ ಆರಂಭವಾಗಿದೆ. ಭಾಗ 2ರಲ್ಲಿ 5.71 ಕೋಟಿ ರೂ. ಪೈಕಿ 4.98 ಕೋಟಿ ರೂ. ಅನುದಾನವನ್ನು ಘನ ತ್ಯಾಜ್ಯ ನಿರ್ವಹಣೆಗೆ ಮೀಸಲಿಡಲಾಗಿದೆ. ನಗರಸಭೆಗೆ ಟ್ರಾö್ಯಕ್ಟರ್ ಮತ್ತು ಟಿಪ್ಪರ್ ತರಿಸಲಾಗಿದೆ ಎಂದು ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಸ್ವಚ್ಛಭಾರತ್ ಮಿಷನ್ 2ರಲ್ಲಿ 103.69 ಕೋಟಿ ರೂ. ಅನುದಾನವನ್ನು ಘನತ್ಯಾಜ್ಯ ನಿರ್ವವಹಣೆಗೆ ಅಗತ್ಯವಿರುವ ಶೆಡ್ ನಿರ್ಮಾಣ ಹಾಗೂ ಯಂತ್ರೋಪಕರಣ ಖರೀದಿಗೆ ಮೀಸಲಿಡಲಾಗಿದೆ. ಮಹಾನಗರಪಾಲಿಕೆಗಳಲ್ಲಿ ಬಳಕೆಯಾಗದೆ ನಗರಸಭೆಗೆ ಸಿಕ್ಕಿರುವ 59 ಲಕ್ಷ ರೂ. ಅನುದಾನದಲ್ಲಿ ಸಕ್ಕಿಂಗ್ ಯಂತ್ರ. ಕೊಳವೆ ಬಾವಿ, ಪೈಪ್‌ಲೈನ್ ಕಾಮಗಾರಿ ನಡೆಸಲಾಗಿದೆ.

ಎನ್‌ಡಿಆರ್‌ಎಫ್ ಅಡಿಯಲ್ಲಿ 30 ಲಕ್ಷ ರೂ. ಸಿಕ್ಕಿದ್ದು, ಅದನ್ನು ನಗರದ ರಸ್ತೆಗಳಲ್ಲಿನ ಗುಂಡಿ ಮುಚ್ಚಲು ಬಳಕೆ ಮಾಡಲಾಗಿದೆ. ನಗರಕ್ಕೆ ಕುಡಿಯುವ ನೀರು ಪೂರೈಕೆಗೆ 47.41 ಕೋಟಿ ರೂ ಅನುದಾನ ದೊರೆತಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಜಿಲ್ಲಾಸ್ಪತ್ರೆಯಲ್ಲಿ 20.85 ಕೋಟಿ ರೂ. ವೆಚ್ಚದಲ್ಲಿ 5 ಮಹಡಿ ಕಟ್ಟದಲ್ಲಿ 50 ಹಾಸಿಗೆ ಸಾಮರ್ಥ್ಯದ ತುರ್ತು ಚಿಕಿತ್ಸಾ ಘಟಕದ ಕಾಮಗಾರಿ ಪ್ರಗತಿಯಲ್ಲಿದ್ದು, ಇದಕ್ಕೆ ಕೇಂದ್ರ ಸರ್ಕಾರ ಶೇ.60 ಮತ್ತು ರಾಜ್ಯ ಸರ್ಕಾರ ಶೇ. 40ರಷ್ಟು ಅನುದಾನ ಕೊಟ್ಟಿದೆ. ಹಿಂದಿನ ಸಂಸದ ಪ್ರತಾಪ್ ಸಿಂಹ ಮತ್ತು ಹಾಲಿ ಸಂಸದ ಯದುವೀರ್ ಕೃಷ್ಣ ದತ್ತ ಚಾಮರಾಜ ಪಡೆಯರ್ ಪ್ರಯತ್ನದಿಂದ ಇವೆಲ್ಲಾ ಸಾಧ್ಯವಾಗಿದೆ ಎಂದು ತಿಳಿಸಿದರು.

ಮಾಜಿ ಉಪಾಧ್ಯಕ್ಷೆ ಸವಿತಾ ರಾಕೇಶ್, ನಗರಸಭಾ ಸದಸ್ಯರಾದ ಕೆ.ಎಸ್. ರಮೇಶ್, ಮಹೇಶ್ ಜೈನಿ, ಉಮೇಶ್ ಸುಬ್ರಹ್ಮಣಿ ಹಾಗೂ ಅಪ್ಪಣ್ಣ ಸುದ್ದಿಗೋಷ್ಠಿಯಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net