

ಮಂಡ್ಯ: ಕೇಂದ್ರ ಸರ್ಕಾರ ಜಿಎಸ್‌ಟಿಯನ್ನು ಪರಿಷ್ಕೃತಗೊಳಿಸಿದೆ. ಇದರಿಂದಾಗಿ ಎಲ್ಲ ವರ್ಗಗಳ ಅಗತ್ಯ ವಸ್ತುಗಳು ಕೈಗೆಟುವ ದರದಲ್ಲಿ ದೊರೆಯುವಂತೆ ಮಾಡಿರುವುದು ಶ್ಲಾಘನೀಯ ಎಂದು ಬಿಜೆಪಿ ರಾಜ್ಯಕಾರ್ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ ತಿಳಿಸಿದರು.
ಕಳೆದ 8 ವರ್ಷದಿಂದ ಜಿಎಸ್‌ಟಿಯಲ್ಲಿನ ನ್ಯೂನ್ಯತೆಗಳನ್ನು ಪರಿಶೀಲಿಸಿದ 56ನೇ ಜಿಎಸ್‌ಟಿ ಪರಿಷತ್ ಅವುಗಳನ್ನು ಸರಿಪಡಿಸಿ ಈ ನಿರ್ಧಾರವನ್ನು ಕೈಗೊಂಡಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಜಿಎಸ್‌ಟಿ ಜಾರಿಗೂ ಮೊದಲು ರಾಜ್ಯ ಸರ್ಕಾರಗಳು ತೆರಿಗೆಯನ್ನು ತನ್ನಿಷ್ಟಕ್ಕೆ ವಿಧಿಸುತ್ತಿತ್ತು. 2017ರ ಜು.1ರಿಂದ ಜಿಎಸ್‌ಟಿ ಜಾರಿ ಮಾಡಲಾದ ಹಿನ್ನಲೆ ವಿದೇಶಿ ಬಂಡವಾಳ ಹೂಡಿಕೆ ಮತ್ತು ರಾಜ್ಯಗಳ ನಡುವಿನ ಸರಕು ಸಾಗಾಣೆ ಸರಳೀಕೃತಗೊಳಿಸಲಾಯಿತು. ಈ ನಿಟ್ಟಿನಲ್ಲಿ ಏಕರಾಷ್ಟ್ರ, ಏಕ ತೆರಿಗೆ, ಏಕ ವ್ಯಾಪಾರಕ್ಕೆ ನಾಂದಿ ಹಾಡಿತ್ತು ಎಂದು ಸ್ಮರಿಸಿದರು.
ಈ ಹಿಂದೆ ನಾಲ್ಕು ಸ್ಥರಗಳಲ್ಲಿ ಜಿಎಸ್‌ಟಿ ಪಾವತಿ ಮಾಡಬೇಕಾಗಿತ್ತು. ಆದರೆ ಈಗ 2 ಸ್ಥರಗಳಲ್ಲಿ ಜಿಎಸ್‌ಟಿ ಪಾವತಿ ಮಾಡಬೇಕಿದೆ. ದುಬಾರಿ ಅಥವಾ ಐಷಾರಾಮಿ ಸರಕು ಮತ್ತು ಸೇವೆಗಳಿಗೆ ಶೇ.40ರಷ್ಟು ತೆರಿಗೆ ಪಾವತಿಸಬೇಕಿದೆ. ಆದರೆ ಔಷಧೋಪಚಾರ ಎಲ್ಲ ವರ್ಗಕ್ಕೂ ಬೇಕಿದೆ. ಕೃಷಿ ಉಪಕರಣಗಳು ರೈತರ ಅಭಿವೃದ್ಧಿಗೆ ಸಹಕಾರವಾಗಿದ್ದು, ಅತ್ಯಗತ್ಯ ವಸ್ತುಗಳನ್ನು ತೀರ ಕಡಿಮೆ ತೆರಿಗೆ ಪಾವತಿಯ ಸ್ಥರಕ್ಕೆ ತರಲಾಗಿದೆ. ಆದರೆ ರಾಜ್ಯದ ಕಾಂಗ್ರೆಸ್ ಸರ್ಕಾರ ಸರಿಯಾದ ಲೆಕ್ಕಾಚಾರವಿಲ್ಲದೇ ವಿನಃ ಕಾರಣ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್, ಪ್ರಧಾನ ಕಾರ್ಯದರ್ಶಿ ವಿವೇಕ್, ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್, ನಾಗಾನಂದ, ನಿತ್ಯಾನಂದ ಇದ್ದರು.