

ಹುಬ್ಬಳ್ಳಿ : ಬಿಜೆಪಿ ರಾಜ್ಯಾಧ್ಯಕ್ಷರಾದ ನಂತರ ಇದೇ ಮೊದಲ ಬಾರಿಗೆ ಹುಬ್ಬಳ್ಳಿಗೆ ಆಗಮಿಸಿದ್ದ ಬಿ.ವೈ. ವಿಜಯೇಂದ್ರ ಅವರಿಗೆ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಭವ್ಯ ಸ್ವಾಗತ ನೀಡಿದರು.
ಗುರುವಾರ ಮಧ್ಯಾಹ್ನ ನಗರಕ್ಕೆ ಆಗಮಿಸಿದ್ದ ವಿಜಯೇಂದ್ರ ಅವರನ್ನು ಇಲ್ಲಿನ ಹಳೇ ಕೋರ್ಟ್ ವೃತ್ತದ ಬಳಿ ಬಿಜೆಪಿ ಮಹಾನಗರ ಜಿಲ್ಲಾ ಹಾಗೂ ಗ್ರಾಮಾಂತರ ಜಿಲ್ಲಾ ಘಟಕದ ವತಿಯಿಂದ ನೂರಾರು ಕಾರ್ಯಕರ್ತರು ಸ್ವಾಗತಿಸಿದರು. ಒಂದು ಕ್ವಿಂಟಾಲ್ ಸೇಬು, ಎರಡು ಕ್ವಿಂಟಾಲ್ ಚಂಡು ಹೂವು ಮತ್ತು ಗುಲಾಬಿ ಹೂವುಗಳಿಂದ ತಯಾರಿಸಿದ 30 ಅಡಿ ಉದ್ದದ ಬೃಹತ್ ಮಾಲೆಯನ್ನು ವಿಜಯೇಂದ್ರ ಅವರ ಕೊರಳಿಗೆ ಕ್ರೇನ್ ಮೂಲಕ ಹಾಕಲಾಯಿತು.
ನಂತರ ತೆರೆದ ವಾಹನದಲ್ಲಿ ವಿಜಯೇಂದ್ರ ಅವರನ್ನು ದೇಶಪಾಂಡೆ ನಗರದ ಪಕ್ಷದ ಕಚೇರಿವರೆಗೆ ಮೆರವಣಿಗೆ ಮಾಡಲಾಯಿತು. ಈ ಸಂದರ್ಭದಲ್ಲಿ ರ್ಸಟ್ ಹೌಸ್ ಬಳಿ ವೆಂಕಟೇಶ ಕಾಟವೆ ಅವರಿಂದ ತಯಾರಿಸಲಾಗಿದ್ದ 1,500 ಸೇಬು ಹಣ್ಣಿನ 15 ಅಡಿ ಉದ್ದದ ಹಾರವನ್ನು ವಿಜಯೇಂದ್ರ ಅವರಿಗೆ ತೊಡಿಸಲಾಯಿತು. ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಬಿ.ವೈ. ವಿಜಯೇಂದ್ರ ಅವರೊಂದಿಗೆ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಶಾಸಕರಾದ ಮಹೇಶ ಟೆಂಗಿನಕಾಯಿ, ಅರವಿಂದ ಬೆಲ್ಲದ, ಎಂ.ಆರ್. ಪಾಟೀಲ, ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರೂ ತೆರೆದ ವಾಹನವನ್ನೇರಿದ್ದರು.
ಮಾಜಿ ಶಾಸಕರಾದ ಅಶೋಕ ಕಾಟವೆ, ಸೀಮಾ ಮಸೂತಿ, ಮಹಾನಗರ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಗ್ರಾಮಾಂತರ ಜಿಲ್ಲಾಧ್ಯಕ್ಷ ನಿಂಗಪ್ಪ ಸುತಗಟ್ಟಿ, ಪಾಲಿಕೆ ಸದಸ್ಯರಾದ ಸಂತೋಷ ಚವ್ಹಾಣ, ರಾಜಣ್ಣ ಕೊರವಿ, ಉಮಾ ಮುಕುಂದ, ರೂಪಾ ಶೆಟ್ಟಿ, ವೀರಣ್ಣ ಸವಡಿ, ಶಿವು ಹಿರೇಮಠ, ಚಂದ್ರಿಕಾ ಮೇಸ್ತ್ರಿ, ಮುಖಂಡರಾದ ನಾರಾಯಣ ಜರತಾರಘರ, ಸಿದ್ದು ಮೊಗಲಿಶೆಟ್ಟರ, ಅನೂಪ ಬಿಜವಾಡ, ಮಹೇಂದ್ರ ಕೌತಾಳ, ವೆಂಕಟೇಶ ಕಾಟವೆ, ಬಸವರಾಜ ಕುಂದಗೋಳಮಠ ಹಾಗೂ ಮತ್ತಿತರರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ದೇಶಪಾಂಡೆ ನಗರದ ಬಿಜೆಪಿ ಕಚೇರಿಗೆ ಆಗಮಿಸಿದ ವಿಜಯೇಂದ್ರ ಅವರಿಗೆ ಮಹಿಳಾ ಕಾರ್ಯಕರ್ತರು ತಿಲಕ ಇಟ್ಟು, ಆರತಿ ಬೆಳಗಿ ಪಕ್ಷದ ಕಚೇರಿಯೊಳಗೆ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಬಿ.ವೈ. ವಿಜಯೇಂದ್ರ, ಕೇಂದ್ರದಲ್ಲಿ ಸತತ ಮೂರನೇ ಬಾರಿಗೆ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬರುವುದು ಖಚಿತ. ಕಾಂಗ್ರೆಸ್ನವರು ಮತದಾರರನ್ನು ಓಲೈಸಿಕೊಳ್ಳಲು ಮಾಡುತ್ತಿರುವ ಯಾವುದೇ ತಂತ್ರಗಳು ಫಲಿಸುವುದಿಲ್ಲ. ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿ ಆಗುತ್ತಾರೆ ಎಂದರು.
ನಂತರ ದೇಶಪಾಂಡೆ ನಗರದಲ್ಲಿರುವ ಬೂತ್ ಅಧ್ಯಕ್ಷ ಈರಪ್ಪ ಕಳ್ಳಿಮನಿ ಅವರ ಮನೆಗೆ ಭೇಟಿ ನೀಡಿ, ಪಕ್ಷದ ಸಂಘಟನೆ ಕುರಿತು ರ್ಚಚಿಸಿದರು.
ಬಾಕ್ಸ್
ಸೆಲ್ಪಿಗೆ ಮುಂದಾದ ಕಾರ್ಯಕರ್ತರು
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ದೇಶಪಾಂಡೆ ನಗರದ ಪಕ್ಷದ ಕಚೇರಿಗೆ ಆಗಮಿಸುತ್ತಿದ್ದಂತೆಯೇ ಮಹಿಳಾ ಕಾರ್ಯಕರ್ತರು ಸೇರಿದಂತೆ ಅನೇಕರು ಅವರೊಂದಿಗೆ ಮೋಬೈಲ್ ಫೋನ್ಗಳಲ್ಲಿ ಸೆಲ್ಪಿ ತೆಗೆದುಕೊಳ್ಳಲು ಮುಂದಾದರು. ವಿಜಯೇಂದ್ರ ಅವರು ಕೆಲ ಕಾರ್ಯಕರ್ತರ ಮೋಬೈಲ್ ಫೋನ್ ತೆಗೆದುಕೊಂಡು, ಅವರೊಂದಿಗೆ ತಾವೇ ಸೆಲ್ಪಿ ಕ್ಲಿಕ್ಕಿಸಿದರು.