

ಕಾರವಾರ: ಶಾಸಕ ಶಿವರಾಮ ಹೆಬ್ಬಾರ ಹಾಗೂ ಮಾಜಿ ಶಾಸಕ ಸುನೀಲ ನಾಯ್ಕ ಅವರ ದೂರಿನ ಮೇರೆಗೆ ಜವಾಬ್ದಾರಿಯಿಂದ ವಿಮುಕ್ತಿಗೊಂಡಿದ್ದ 10 ಪದಾಧಿಕಾರಿಗಳನ್ನು ಬಿಜೆಪಿ ಮರು ನೇಮಕ ಮಾಡಿ ಆದೇಶಿಸಿದೆ.
ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿಗಳ ವಿರುದ್ಧ ಕೆಲಸ ಮಾಡಿದ್ದಾರೆ ಎಂದು ಶಿವರಾಮ ಹೆಬ್ಬಾರ ದೂರು ನೀಡಿದ್ದರು. ಹಲವು ತಿಂಗಳಾದರೂ ಅವರ ಮೇಲೆ ಕ್ರಮ ವಹಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಅಭ್ಯರ್ಥಿಗಳ ದೂರಿನ ಮೇರೆಗೆ ರಾಜ್ಯ ಶಿಸ್ತು ಸಮಿತಿಯ ಸೂಚನೆಯಂತೆ ಭಾರತೀಯ ಜನತಾ ಪಾರ್ಟಿಯ ಜವಾಬ್ದಾರಿಯಿಂದ ಇವರನ್ನು ವಿಮುಕ್ತಗೊಳಿಸಿ ಆದೇಶಿಸಲಾಗಿತ್ತು. ಆ ಆದೇಶವನ್ನು ರದ್ದು ಮಾಡಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಯಲ್ಲಾಪುರ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಜಿಲ್ಲಾ ಉಪಾಧ್ಯಕ್ಷೆ ಕಲ್ಪನಾ ಗಜಾನನ ನಾಯ್ಕ, ಶಕ್ತಿ ಕೇಂದ್ರದ ಪ್ರಮೂಖ ಬಾಬು ಬಾಂದೇಕರ್, ತಾಲೂಕು ಮಾಧ್ಯಮ ಪ್ರಕೋಷ್ಠ ಸಂಚಾಲಕ ಕೆ.ಟಿ.ಹೆಗಡೆ, ತಾಲೂಕು ಯುವ ಮೋರ್ಛಾ ಪ್ರಧಾನ ಕಾರ್ಯದಶಿ ವಿಠ್ಠಲ ಜಾನು ಪಾಂಡ್ರಮೀಶೆ, ಜಿಲ್ಲಾ ವಿಶೇಷ ಆಮಂತ್ರಿತ ಗಣಪತಿ ಆರ್.ಗಾಂವಕರ್ ಅವರನ್ನು ವಾಪಸ್ ಅದೇ ಹುದ್ದೆಯಲ್ಲಿ ಮುಂದುವರಿಸಲಾಗಿದೆ.
ಭಟ್ಕಳ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ರವಿ ನಾಯ್ಕ, ಕಾನೂನು ಪ್ರಕೋಷ್ಠಾದ ಸಂಚಾಲಕ ಸುರೇಶ ತಿಮ್ಮಪ್ಪ ನಾಯ್ಕ, ಜಿಲ್ಲಾ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿಷ್ಣುಮೂರ್ತಿ ಹೆಗಡೆ, ಜಿಲ್ಲಾ ಕಾರ್ಮಿಕ ಪ್ರಕೋಷ್ಠಾದ ಸಂಚಾಲಕ ಮುಕುಂದ ಮಂಜುನಾಥ ನಾಯ್ಕ, ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾ ಪ್ರಭಾರಿ ಈಶ್ವರ ನಾರಾಯಣ ನಾಯ್ಕ ಅವರನ್ನು ಹಿಂದಿನ ಹುದ್ದೆಯಲ್ಲೇ ಮುಂದುವರಿಸಲಾಗಿದೆ ಎಂದು ವೆಂಕಟೇಶ ನಾಯಕ ತಿಳಿಸಿದ್ದಾರೆ.
ಮುಖಭಂಗ:
ಶಾಸಕ ಶಿವರಾಮ ಹೆಬ್ಬಾರ ಕಾಂಗ್ರೆಸ್‌ನತ್ತ ಮುಖ ಮಾಡಿದ್ದಾರೆ ಎಂಬ ವದಂತಿ ಇದೆ. ಯಾವುದೇ ಕ್ಷಣದಲ್ಲೂ ಕಾಂಗ್ರೆಸ್‌ಗೆ ತೆರಳುವ ನಿಟ್ಟಿನಲ್ಲಿ ಅವರು ವರ್ತನೆ ಇದೆ. ಇದರಿಂದ ಎಚ್ಚೆತ್ತಿರುವ ಬಿಜೆಪಿ ತನ್ನಿಂದ ಆದ ತಪ್ಪನ್ನು ಸರಿಪಡಿಸಿಕೊಳ್ಳಲು ಹೊರಟಿದೆ. ಇನ್ನು ಮಾಜಿ ಶಾಸಕ ವಿಧಾನಸಭೆ ಚುನಾವಣೆಯ ಸೋಲಿನ ಬಳಿಕ ಪಕ್ಷ ಸಂಘಟನೆಯಿಂದ ದೂರವಾಗಿದ್ದರು. ಹಾಗಾಗಿ ಪಕ್ಷದ ಆಂತರಿಕ ಮಾಹಿತಿಯಂತೆ ಅವರ ವಿರೋಧಿಗಳಿಗೂ ಜವಾಬ್ದಾರಿ ನೀಡಲಾಗಿದೆ ಎಂಬ ಮಾಹಿತಿ ಇದೆ. ಪಕ್ಷದ ಈ ನಡೆಯಿಂದ ಇಬ್ಬರೂ ನಾಯಕರಿಗೆ ಹಿನ್ನಡೆಯಾಗಿದೆ.