

ಉಡುಪಿ: ದೇಶದ ಎಲ್ಲಾ ಪಕ್ಷಗಳು ಕೌಟುಂಬಿಕ ಅಥವಾ ಏಕವ್ಯಕ್ತಿ ಪಕ್ಷವಾಗಿವೆ. ಕಾಂಗ್ರೆಸ್ ಪಕ್ಷವೂ ಕುಟುಂಬದಿಂದ ಹೊರತಾಗಿಲ್ಲ. ಸಮಾಜವಾದಿ ಪಕ್ಷ, ರಾಷ್ಟ್ರೀಯ ಜನತಾದಳ, ಶಿವಸೇನಾ, ವೈಎಸ್‌ಆರ್‌ಸಿಪಿ, ಟಿಆರ್‌ಎಸ್, ಡಿಎಂಕೆ ಹೀಗೆ ಎಲ್ಲವೂ ಪರಿವಾರವಾದದ ಪಕ್ಷಗಳಾಗಿವೆ. ಆದರೆ, ಬಿಜೆಪಿ ಸಮರ್ಥ ವಿಚಾರಧಾರೆ ಹೊಂದಿದ್ದು, ಬಿಜೆಪಿ ಕಾರ್ಯಕರ್ತರಿಗೆ ಪಕ್ಷವೇ ಕುಟುಂಬ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದರು.
ಸೋಮವಾರ ಎಂಜಿಎಂ ಕಾಲೇಜು ಮೈದಾನದಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ನಡೆದ ಬೂತ್ ಸಮಿತಿ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು. ಬಿಜೆಪಿ ಕಾರ್ಯಕರ್ತರಾಗುವುದು ಸೌಭಾಗ್ಯ. ವೈಚಾರಿಕ ದೃಷ್ಟಿಕೋನ, ಕೇಡರ್ ಮತ್ತು ಸಮೂಹ ಬೆಂಬಲ ಇರುವ ಏಕೈಕ ಪಕ್ಷ ಬಿಜೆಪಿ. 1952ರಲ್ಲಿ ಶ್ಯಾಮಪ್ರಸಾದ ಮುಖರ್ಜಿ ರೂಪಿಸಿದ ಚಿಂತನೆಯನ್ನು ಮೋದಿಜಿ ಅವರು 370ನೇ ವಿಧಿ ರದ್ದು ಮಾಡುವ ಮೂಲಕ ಸಾಕಾರಗೊಳಿಸಿದ್ದಾರೆ. ಇದು ವೈಚಾರಿಕತೆಯ ತಾಕತ್ತು. ಬಿಜೆಪಿಯನ್ನು ತಳಮಟ್ಟದಲ್ಲಿ ಬಲಪಡಿಸಿ, ಸರ್ಕಾರದ ವಿಶೇಷ ಸಾಧನೆಗಳನ್ನು ಜನರಿಗೆ ತಿಳಿಸುವ ಮೂಲಕ ಮುಂದಿನ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಶ್ರಮಿಸಬೇಕು ಎಂದು ಹೇಳಿದರು.
ಕರ್ನಾಟಕದಲ್ಲಿ ಗರಿಷ್ಠ ವಿದೇಶಿ ನೇರ ಹೂಡಿಕೆ ಬರುತ್ತಿದೆ. ಭಾರೀ ವಾಹನಗಳ ಉತ್ಪಾದನೆಯಲ್ಲಿ ದೇಶದಲ್ಲೇ 2ನೇ ಸ್ಥಾನದಲ್ಲಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಕರ್ನಾಟಕದ ಕೊಡುಗೆ ಶೇ. 25ರಷ್ಟಿದೆ. ರಕ್ಷಣಾ ಕ್ಷೇತ್ರದಲ್ಲಿ ಶೇ. 75ರಷ್ಟು ಕೊಡುಗೆ ರಾಜ್ಯದ್ದಾಗಿದೆ. ವಂದೇ ಭಾರತ್ ಎಕ್ಸ್‌ಪ್ರೆಸ್ ಮೂಲಕ ಸಂಪರ್ಕ ಕ್ರಾಂತಿ ಆಗುತ್ತಿದೆ. 5 ಸಾವಿರ ಕೋಟಿ ರೂ. ವೆಚ್ಚದಲ್ಲಿ ಕೆಂಪೇಗೌಡ ವಿಮಾನನಿಲ್ದಾಣ ಆಧುನೀಕರಣ ಕಾರ್ಯ ನಡೆದಿದೆ. ನಾಡಪ್ರಭು ಕೆಂಪೇಗೌಡರ ಪ್ರತಿಮೆ ಸ್ಥಾಪಿಸಲಾಗಿದೆ. ಕರ್ನಾಟಕದ ಅಭಿವೃದ್ಧಿಗೆ ಹೆಚ್ಚುವರಿಯಾಗಿ ಕೇಂದ್ರ ಸರ್ಕಾರ 32000 ಕೋಟಿ ರೂ. ಹಣವನ್ನು ಕೇಂದ್ರ ಸರಕಾರ ಬಿಡುಗಡೆ ಮಾಡಿದೆ. ಈ ಮೂಲಕ ಕರ್ನಾಟಕ ದೇಶದ ಎರಡನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಲಿದೆ ಎಂದರು.
ಭಾರತದ ವಿಶ್ವದ ಆರ್ಥಿಕ ಶಕ್ತಿ
ಬ್ರಿಟನ್ ದೇಶವು 2 ಶತಮಾನಗಳ ಕಾಲ ನಮ್ಮನ್ನು ಆಳಿತ್ತು. ಆದರೆ ಈಗ ಭಾರತವು ಬ್ರಿಟನ್ ಹಿಂದಿಕ್ಕಿ ವಿಶ್ವದ 5ನೇ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ. ಇಲೆಕ್ಟ್ರಾನಿಕ್ ವಸ್ತುಗಳ ಉತ್ಪಾದನೆ ಮತ್ತು ರಫ್ತಿನಲ್ಲಿ, ಮೊಬೈಲ್ ಉತ್ಪಾದನೆಯಲ್ಲಿ ಗಮನಾರ್ಹ ಸಾಧನೆ ಮಾಡಿದ್ದೇವೆ. 2014ಕ್ಕಿಂತ ಹಿಂದೆ ಶೇ. 92ರಷ್ಟು ಮೊಬೈಲ್ಗಳನ್ನು ವಿದೇಶದಿಂದ ತರಲಾಗುತ್ತಿತ್ತು. ಈಗ ಶೇ. 97ರಷ್ಟು ಮೊಬೈಲ್ಗಳನ್ನು ದೇಶದಲ್ಲೇ ಉತ್ಪಾದಿಸಲಾಗುತ್ತಿದೆ. 200 ದೇಶಕ್ಕೆ ಔಷಧಿ ರಪ್ತು ಮಾಡಲಾಗುತ್ತಿದ್ದು, ಆಟೋಮೊಬೈಲ್ ಕ್ಷೇತ್ರದಲ್ಲೂ ಜಪಾನನ್ನು ಹಿಂದಿಕ್ಕಿ ಮೂರನೇ ಅತಿ ದೊಡ್ಡ ಉತ್ಪಾದನಾ ರಾಷ್ಟ್ರವಾಗಿ ಬೆಳೆಯುತ್ತಿದೆ ಎಂದು ಹೇಳಿದರು.
ಉಕ್ರೇನ್-ರಷ್ಯಾ ಯುದ್ಧ ಸ್ಥಗಿತ
ಉಕ್ರೇನ್- ರಷ್ಯಾ ಯುದ್ಧದ ಸಂದರ್ಭದಲ್ಲಿ ಅಮೇರಿಕಾ, ಬ್ರಿಟನ್ ಸಹಿತ ಯಾವುದೇ ದೇಶಗಳು ತಮ್ಮ ವಿದ್ಯಾರ್ಥಿಗಳನ್ನು ಕರೆತರುವ ಸಾಹಸ ಮಾಡಿಲ್ಲ. ಆದರೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಎರಡೂ ದೇಶಗಳ ಮುಖ್ಯಸ್ಥರ ಜೊತೆ ಮೋದಿಜಿ ಮಾತನಾಡಿದರಲ್ಲದೆ ಯುದ್ಧವನ್ನು ಸ್ವಲ್ಪ ಸಮಯ ಸ್ಥಗಿತಗೊಳಿಸುವ ಮೂಲಕ ಸುರಕ್ಷಿತವಾಗಿ ಮಕ್ಕಳನ್ನು ಕರೆತರಲು ಕಾರಣರಾಗಿದ್ದಾರೆ. 15 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲಾಗಿದೆ ಎಂದು ತಿಳಿಸಿದರು.
ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಮಾತನಾಡಿದರು. ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಸಚಿವರಾದ ಸುನಿಲ್ಕುಮಾರ್, ಎಸ್. ಅಂಗರ, ಕೋಟ ಶ್ರೀನಿವಾಸ ಪೂಜಾರಿ, ಶಾಸಕ ರಘುಪತಿ ಭಟ್, ಲಾಲಜಿ ಮೆಂಡನ್, ಶ್ರೀನಿವಾಸ ಶೆಟ್ಟಿ, ಜಿಲ್ಲಾ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.