

ಹುಬ್ಬಳ್ಳಿ : ಬಿಜೆಪಿ ರಾಜ್ಯ ಅಧ್ಯಕ್ಷರ ಬದಲಾವಣೆಯ ಮಾತುಗಳು ಕೇಳಿಬರುತ್ತಿರುವ ಮಧ್ಯೆಯೇ ಪಕ್ಷದ ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲೆ ಹಾಗೂ ಧಾರವಾಡ ಗ್ರಾಮೀಣ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕಾಗಿ ಆಕಾಂಕ್ಷಿಗಳ ಪೈಪೋಟೆ ಪ್ರಾರಂಭಗೊಂಡಿದೆ.
ಪ್ರತಿ ಮೂರು ವರ್ಷಕ್ಕೊಮ್ಮೆ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಜಿಲ್ಲಾ ಅಧ್ಯಕ್ಷರು ಬದಲಾಗುತ್ತಾರೆ. ಕೆಲ ಬಾರಿ ಹಿಂದಿನ ಅಧ್ಯಕ್ಷರೇ ಮುಂದುವರಿದ ಉದಾಹರಣೆಗಳೂ ಇವೆ. ಈ ಬಾರಿಯ ಅಧ್ಯಕ್ಷರ ಅವಧಿ ಕಳೆದ ಜನವರಿಯಲ್ಲಿಯೇ ಪೂರ್ಣಗೊಂಡಿತ್ತು. ಆದರೆ, ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಅಧ್ಯಕ್ಷರ ಅವಧಿಯನ್ನು ಮುಂದೂಡಲಾಗಿತ್ತು.
ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ನಿರೀಕ್ಷಿತ ಮಟ್ಟಕ್ಕೆ ಜಯ ಕಾಣದ ಕಾರಣ ಪಕ್ಷದ ರಾಜ್ಯ ಅಧ್ಯಕ್ಷರನ್ನು ಬದಲಾಯಿಸುವ ಮಾತುಗಳು ಕೇಳಿಬರುತ್ತಿವೆ. ಪಕ್ಷದ ರಾಜ್ಯ ಅಧ್ಯಕ್ಷರ ಬದಲಾವಣೆ ಬೆನ್ನಲ್ಲಿಯೇ ಎಲ್ಲ ಜಿಲ್ಲೆಗಳ ಅಧ್ಯಕ್ಷರೂ ಬದಲಾಗಲಿದ್ದಾರೆ. ಆದರೆ, ಇದುವರೆಗೆ ಅಧ್ಯಕ್ಷರ ಬದಲಾವಣೆ ಬಗ್ಗೆ ಅಧಿಕೃತವಾಗಿ ಯಾವುದೇ ಪ್ರಕ್ರಿಯೆಗಳು ಆರಂಭಗೊಂಡಿಲ್ಲ. ಆದರೂ, ಅಧ್ಯಕ್ಷ ಸ್ಥಾನಗಳ ಮೇಲೆ ಕಣ್ಣಿಟ್ಟಿರುವ ಹಲವಾರು ಆಕಾಂಕ್ಷಿಗಳು ಈಗಿನಿಂದಲೇ ಹುದ್ದೆ ಗಿಟ್ಟಿಸಿಕೊಳ್ಳಲು ತೆರೆಮರೆಯ ಕಸರತ್ತು ಪ್ರಾರಂಭಿಸಿದ್ದಾರೆ.
ಮುಂದಿನ ವರ್ಷ ಲೋಕಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಬಿಜೆಪಿ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳುವವರ ಮೇಲೆ ಹೆಚ್ಚಿನ ಜವಾಬ್ದಾರಿ ಬೀಳಲಿದೆ. ಈ ಹಿನ್ನೆಲೆಯಲ್ಲಿ ಈ ಬಾರಿಯ ಹು-ಧಾ ಮಹಾನಗರ ಹಾಗೂ ಗ್ರಾಮೀಣ ಜಿಲ್ಲಾಧ್ಯಕ್ಷರ ಆಯ್ಕೆಗೆ ಹೆಚ್ಚಿನ ಮಹತ್ವ ಬಂದಿದೆ.
2020ರ ಜನವರಿಯಲ್ಲಿ ನಡೆದಿದ್ದ ಹು-ಧಾ ಮಹಾನಗರ ಜಿಲ್ಲಾ ಹಾಗೂ ಧಾರವಾಡ ಗ್ರಾಮಾಂತರ ಜಿಲ್ಲಾ ಅಧ್ಯಕ್ಷರ ಆಯ್ಕೆ ಕುತೂಹಲದಿಂದ ಕೂಡಿತ್ತು. ಆಕಾಂಕ್ಷಿಗಳ ರೇಸ್ನಲ್ಲಿಯೇ ಇರದ ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಅವರನ್ನು ಬಿಜೆಪಿ ಮಹಾನಗರ ಜಿಲ್ಲಾ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಆದರೆ, ಅರವಿಂದ ಬೆಲ್ಲದ ಅವರು ಒಂದೂವರೆ ವರ್ಷಕ್ಕಿಂತ ಹೆಚ್ಚಿನ ಅವಧಿಯವರೆಗೆ ಅಧ್ಯಕ್ಷ ಸ್ಥಾನದಲ್ಲಿ ಉಳಿಯಲಿಲ್ಲ. ಹೀಗಾಗಿ, ಮಹಾನಗರ ಪಾಲಿಕೆ ಮಾಜಿ ಸದಸ್ಯ ಸಂಜಯ ಕಪಟಕರ ಅವರನ್ನು ಇನ್ನುಳಿದ ಒಂದೂವರೆ ವರ್ಷದವರೆಗೆ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಧಾರವಾಡ ಗ್ರಾಮಾಂತರ ಜಿಲ್ಲಾ ಅಧ್ಯಕ್ಷರಾಗಿ ಬಸವರಾಜ ಕುಂದಗೋಳಮಠ ನೇಮಕಗೊಂಡಿದ್ದರು.
ಮಹಾನಗರ ಜಿಲ್ಲಾ ಅಧ್ಯಕ್ಷ ಸ್ಥಾನವನ್ನು ಪೂರ್ಣ ಅವಧಿವರೆಗೆ ನಿಭಾಯಿಸಲು ಆಗದ ಸಂಜಯ ಕಪಟಕರ ಅವರು ಈ ಬಾರಿಯೂ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಈ ಬಾರಿಯೂ ಅವಕಾಶ ಸಿಕ್ಕರೆ ಪೂರ್ಣ ಅವಧಿಯವರೆಗೆ ಅಧ್ಯಕ್ಷ ಸ್ಥಾನದ ಜವಾಬ್ದಾರಿ ನಿಭಾಯಿಸುವ ಆಶಯ ಹೊಂದಿದ್ದಾರೆ.
ಮೂಲಗಳ ಪ್ರಕಾರ ಈ ಬಾರಿ ಮಹಾನಗರ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಹಾಲಿ ವಕ್ತಾರ ರವಿ ನಾಯಕ, ಪ್ರಧಾನ ಕಾರ್ಯದರ್ಶಿ ದತ್ತಮೂರ್ತಿ ಕುಲಕರ್ಣಿ, ಪಾಲಿಕೆ ಸಭಾನಾಯಕ ತಿಪ್ಪಣ್ಣ ಮಜ್ಜಗಿ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ.
ಈ ಮಧ್ಯೆ ಧಾರವಾಡ ಗ್ರಾಮೀಣ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೂ ಪೈಪೋಟೆ ಹೆಚ್ಚಿದೆ. ಗ್ರಾಮೀಣ ಘಟಕದ ಪ್ರಧಾನ ಕಾರ್ಯದರ್ಶಿ ಶಿವಾನಂದ ಗುಂಡಗಾಂವಿ, ನಿಂಗಪ್ಪ ಸುತಗಟ್ಟಿ, ಸಿದ್ದನಗೌಡರ ಪಾಟೀಲ ಅವರ ಹೆಸರು ಕೇಳಿಬರುತ್ತಿದ್ದು, ಆಕಾಂಕ್ಷಿಗಳ ಸಂಖ್ಯೆ ಮತ್ತಷ್ಟು ಹೆಚ್ಚುವ ನಿರೀಕ್ಷೆ ಇದೆ.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಧಾರವಾಡ ಕ್ಷೇತ್ರಕ್ಕೆ ಹುಬ್ಬಳ್ಳಿ ಕೇಂದ್ರವಾಗುವ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಅಧ್ಯಕ್ಷ ಸ್ಥಾನವನ್ನು ಈ ಬಾರಿ ಹುಬ್ಬಳ್ಳಿಯವರಿಗೇ ಕೊಡಬೇಕು ಎಂಬ ಬೇಡಿಕೆ ಹುಬ್ಬಳ್ಳಿಯ ಕಾರ್ಯಕರ್ತರಿಂದ ಕೇಳಿಬರುತ್ತಿದೆ.