

ಉಡುಪಿ: ಪ್ರಧಾನಿ ಮೋದಿ ಕೆಲಸದಿಂದ ಭಾರತವನ್ನು ವಿಶ್ವ ನೋಡುವ ದೃಷ್ಟಿ ಬದಲಾಗಿದೆ. ಕರೋನಾ ಸಂಕಷ್ಟ ಕಾಲದಲ್ಲಿ ಅನೇಕ ದೇಶಗಳಿಗೆ ಭಾರತ ಸಹಾಯಹಸ್ತ ಚಾಚಿದ್ದು, ಭಾರತಕ್ಕೆ ಒಳ್ಳೆಯದಾದರೆ ಜಗತ್ತಿಗೆ ಪ್ರಯೋಜನವಿದೆ ಎಂಬ ಭಾವನೆ ವಿಶ್ವದಲ್ಲಿ ವ್ಯಾಪಕವಾಗಿದೆ. ರಾಷ್ಟ್ರ ಉತ್ಕರ್ಷ ಕಾಲದಲ್ಲಿದ್ದು, 2024ರ ಚುನಾವಣೆ ರಾಷ್ಟ್ರದ ಭವಿಷ್ಯದ ದೃಷ್ಟಿಯಲ್ಲಿ ಅತ್ಯಂತ ನಿರ್ಣಾಯಕ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಹೇಳಿದರು.
ಬುಧವಾರ ಮಂಗಳೂರು ವಿಭಾಗ ಮಟ್ಟದ ಪುರಸಭಾ ಮತ್ತು ಪಟ್ಟಣ ಪಂಚಾಯಿತಿ ಸದಸ್ಯರ ಪ್ರಶಿಕ್ಷಣ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಕಳೆದ 9 ವರ್ಷಗಳಲ್ಲಿ 13.5 ಕೋಟಿ ಜನ ಬಡತನ ರೇಖೆಗಿಂತ ಮೇಲಕ್ಕೆ ಬಂದಿದ್ದಾರೆ. ಆದರೆ ದೇಶದಲ್ಲಿ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ವಿದೇಶಿ ಶಕ್ತಿಗಳೊಂದಿಗೆ ಸೇರಿ ಭಾರತದ ಉತ್ಥಾನದ ಹಾದಿಯಲ್ಲಿ ಕೊಡುಗೆ ನೀಡುವ ಬದಲು ಕೊಳ್ಳಿ ಇಡುತ್ತಿದ್ದಾರೆ. ಹೀಗಾಗಿ ಬಿಜೆಪಿ ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರಿಗೆ ಮಹತ್ವ ಜವಾಬ್ದಾರಿ ಇದ್ದು, ಕೇಂದ್ರ ಸರ್ಕಾರದ ಸಾಧನೆಗಳನ್ನು ಮನೆ ಮನೆಗಳಿಗೆ ತಲುಪಿಸಬೇಕು ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್ ನಾಯಕ್ ಕುಯಿಲಾಡಿ ಅಧ್ಯಕ್ಷತೆ ವಹಿಸಿದ್ದರು. ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಶಾಸಕರಾದ ಶ್ರೀಕಾಂತ್ ಕುಲಕರ್ಣಿ, ರುಪತಿ ಭಟ್, ರಾಜ್ಯ ಪ್ರಶಿಕ್ಷಣ ಪ್ರಕೋಷ್ಠ ಸದಸ್ಯೆ ಡಾ. ಮಂಜುಳಾ ರಾವ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮನೋಹರ ಕಲ್ಮಾಡಿ ಉಪಸ್ಥಿತರಿದ್ದರು. ಪ್ರಶಿಕ್ಷಣ ಪ್ರಕೋಷ್ಠ ಜಿಲ್ಲಾ ಸಂಚಾಲಕ ರುಘುವೀರ ಶೆಣೈ ಸ್ವಾಗತಿಸಿ, ಕುತ್ಯಾರು ನವೀನ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಸದಸ್ಯರ ಗೈರಿಗೆ ಜಿಲ್ಲಾಧ್ಯಕ್ಷರ ಕ್ಲಾಸ್
ಉಡುಪಿ ಜಿಲ್ಲೆಯ ಪಪಂ ಮತ್ತು ಪುರಸಭೆ ಸದಸ್ಯರು ಕಡಿಮೆ ಸಂಖ್ಯೆಯಲ್ಲಿದ್ದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧ್ಯಕ್ಷ ಸುರೇಶ್ ನಾಯಕ್, ಪ್ರಶಿಕ್ಷಣ ಸಂಟನೆಯ ಅವಿಭಾಜ್ಯ ಅಂಗ. ಇತ್ತೀಚೆಗೆ ಎಂಪಿಗಳಿಗೆ ನಡೆದ ಪ್ರಶಿಕ್ಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ದಿನವಿಡೀ ಭಾಗವಹಿಸಿದ್ದರು. ಆದರೆ ಮೀಸಲಾತಿ ಪ್ರಕಟವಾದ ಬಳಿಕ ಅಧ್ಯಕ್ಷ ಗಾದಿಗಾಗಿ ದಿನವಿಡೀ ಪಕ್ಷದ ಮುಖಂಡರು ಮತ್ತು ಶಾಸಕರ ಮನೆಗಳಿಗೆ ಎಡತಾಗುವವ ಸದಸ್ಯರಿಗೆ ಪ್ರಶಿಕ್ಷಣಕ್ಕೆ ಬರಲು ಪುರುಸೋತ್ತಿಲ್ಲ. ಜನಪ್ರತಿನಿಧಿ ಆಗಲು ಜಾತಿ ಒಂದು ಮಾನದಂಡ ಮಾತ್ರ. ರಾಜಕೀಯದಲ್ಲಿ ಬೆಳೆಯಬೇಕು ಎಂಬವವರಿಗೆ ಹೊಸತನ್ನು ಕಲಿಯುವ ಮನಸ್ಸಿರಬೇಕು ಎಂದು ಕ್ಲಾಸ್ ತೆಗೆದುಕೊಂಡರು.