

ಮಂಡ್ಯ: ವಿಧಾನಸಭಾ ಚುನಾವಣೆಯ ಹೊಸ್ತಿಲಿನಲ್ಲಿ ಗುಂಪುಗಾರಿಕೆ, ಉಸ್ತುವಾರಿ ಸಚಿವ ಸ್ಥಾನದ ಗೊಂದಲದಿಂದಾಗಿ ನಿತ್ರಾಣಗೊಂಡಿರುವ ಮಂಡ್ಯ ಬಿಜೆಪಿಗೆ ಟಾನಿಕ್ ನೀಡಲು ಹೈಕಮಾಂಡ್ ಮಾಸ್‌ಲೀಡರ್ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಬಿ.ವೈ.ವಿಜಯೇಂದ್ರಗೆ ಮಣೆ ಹಾಕಿದೆ. ಇದಕ್ಕೆ ಪೂರಕವೆಂಬಂತೆ ಬಿ ಫಾರ್ಮ್ ಆಕಾಂಕ್ಷಿತರು ಜಿಲ್ಲೆಯ ಸಂಜಾತ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಕುಶಲೋಪರಿ ಹಂಚಿಕೊಂಡಿದ್ದಾರೆ.
ಹಿಂದಿನ ಚುನಾವಣೆಗಳಲ್ಲಿ ಮಂಡ್ಯವನ್ನು ಅಷ್ಟೊಂದು ಗಂಭೀರವಾಗಿ ಪರಿಗಣಿಸದ ಬಿಜೆಪಿಗರು, ಈ ಬಾರಿ ಹಳೇ ಮೈಸೂರು ಪ್ರಾಂತ್ಯವನ್ನು ಟಾರ್ಗೆಟ್ ಮಾಡಿಕೊಂಡಿದ್ದಾರೆ. ಅದರಲ್ಲಿಯೂ ಮಂಡ್ಯ ಜಿಲ್ಲೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಈ ಮಿಷನ್ ಯಶಸ್ವಿಯಾಗಬೇಕಾದರೆ ಬಿ.ಎಸ್.ಯಡಿಯೂರಪ್ಪ ಹಾಗೂ ಬಿ.ವೈ.ವಿಜಯೇಂದ್ರ ಪ್ರಮುಖವಾಗಲಿದ್ದಾರೆ ಎನ್ನುವುದು ಹೈಕಮಾಂಡ್ ಅರಿವಿಗೆ ಬಂದಂತಿದೆ. ಕಳೆದ ಡಿಸೆಂಬರ್‌ನಲ್ಲಿ ನಡೆದ ಜನಸಂಕಲ್ಪ ಯಾತ್ರೆಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಬಂದಿದ್ದರು. ಆ ಸಮಯದಲ್ಲಿ ಬಿಎಸ್‌ವೈ, ಬಿವೈವಿ ಮೇಲಿನ ಅಭಿಮಾನವನ್ನು ಜಿಲ್ಲೆಯ ಕಾರ್ಯಕರ್ತರು ನಾಯಕರೆದುರೇ ಪ್ರದರ್ಶನ ಮಾಡಿದ್ದರು. ಅವರಿಬ್ಬರ ಹೆಸರನ್ನು ಹೇಳುವಾಗ ಕಾರ್ಯಕರ್ತರು ತೋರಿಸಿದ ಕ್ರೇಜ್ ಬಹುಶಃ ಯಾರಿಗೂ ಸಿಕ್ಕಿಲಿಲ್ಲ ಎನ್ನುವುದು ಬಹಿರಂಗ ಸತ್ಯ.
ಈ ಹಿನ್ನೆಲೆಯಲ್ಲಿ ಬಿಎಸ್‌ವೈ, ಬಿವಿವೈ ಬಿಟ್ಟು ಮಂಡ್ಯದಲ್ಲಿ ಕಮಲ ಅರಳಿಸುವುದು ಅಷ್ಟೊಂದು ಸುಲಭವಲ್ಲ ಎನ್ನುವುದು ನಾಯಕರಿಗೂ ಮನವರಿಕೆಯಾಗಿದೆ. ಈ ನಡುವೆ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದ ಗೊಂದಲ ಪಕ್ಷಕ್ಕೆ ಇರಿಸುಮುರಿಸು ತರಿಸಿದೆ. ಗೋಪಾಲಯ್ಯ ಅವರನ್ನು ಬದಲಿಸಿ ಅಶೋಕ್‌ಗೆ ಮಣೆ ಹಾಕಲಾಗಿತ್ತು. ಆದರೆ ಪಕ್ಷದ ಆಂತರೀಕ ಸಮಸ್ಯೆಯಿಂದ ಕೇವಲ 18 ದಿನದಲ್ಲಿ ಉಸ್ತುವಾರಿ ಹೊಣೆಯನ್ನು ಅಶೋಕ್ ಬಿಟ್ಟುಕೊಟ್ಟರು. ಇದಾದ ನಂತರ ಯಾರೊಬ್ಬರೂ ಉಸ್ತುವಾರಿ ವಹಿಸಿಕೊಳ್ಳಲು ಸಿದ್ಧವಿಲ್ಲ. ಇದು ಚುನಾವಣಾ ಸಮಯದಲ್ಲಿ ಪಕ್ಷಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಆದ್ದರಿಂದ ಮಾಸ್ಟರ್ ಪ್ಲ್ಯಾನ್ ರೂಪಿಸಿರುವ ಬಿಜೆಪಿ ಹೈಕಮಾಂಡ್ ಮಾಸ್ ಲೀಡರ್ ಬಿ.ಎಸ್.ಯಡಿಯೂರಪ್ಪ ಅವರ ಮೊರೆ ಹೋಗಿದೆ. ಅದರಂತೆಯೇ ಬಿ.ವೈ.ವಿಜಯೇಂದ್ರಗೆ ಚುನಾವಣಾ ಉಸ್ತುವಾರಿ ವಹಿಸಿದೆ.
ಕಮಲ ಅರಳಿಸಿದ ಹೆಗ್ಗಳಿಕೆ: ಜಿಲ್ಲೆಯ ಜನರಿಗೆ ಬಿಎಸ್‌ವೈ, ಬಿವೈವಿ ಅವರ ಬಗೆಗಿನ ಪ್ರೀತಿ ಕಡಿಮೆಯಾಗಿಲ್ಲ. ಅವರು ಕೂಡ ಮಂಡ್ಯಕ್ಕೆ ಬಂದಾಗ ತವರು ನೆಲದ ಬಗ್ಗೆ ಮಾತನಾಡುತ್ತಲೇ ಇರುತ್ತಾರೆ. ಇನ್ನು ಮಂಡ್ಯ ಜಿಲ್ಲೆಯಲ್ಲಿ ಕಮಲ ಅರಳಿಸಲು ಸಾಧ್ಯವೇ ಇಲ್ಲ ಎನ್ನುವ ಟೀಕೆಗಳ ನಡುವೆ ಮೊದಲ ಬಾರಿಗೆ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿದ ಶ್ರೇಯ ಇವರಿಬ್ಬರಿಗೆ ಸಲ್ಲುತ್ತದೆ. ಕೆ.ಸಿ.ನಾರಾಯಣಗೌಡ ಅವರು ದಳ ಬಿಟ್ಟು ಬಿಜೆಪಿಗೆ ಬಂದಾಗ ಗೆಲ್ಲಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಮಾತ್ರವಲ್ಲದೆ ಅದು ಬಿಎಸ್‌ವೈ ಅವರ ತವರು ಕ್ಷೇತ್ರವೂ ಆಗಿದ್ದರಿಂದ ಪ್ರತಿಷ್ಠೆ ಕಣವಾಗುತ್ತದೆ. ಅಂದು ತಂದೆ ಮತ್ತು ಮಗ ಟೊಂಕ ಕಟ್ಟಿ ನಿಂತು ಪ್ರತಿ ಹಂತದಲ್ಲಿಯೂ ಚುನಾವಣಾ ಪಟುಗಳನ್ನು ತೋರಿಸಿ ಕೆಸಿಎನ್ ಗೆಲ್ಲಿಸಿಕೊಳ್ಳುವ ಮೂಲಕ ಕೆ.ಆರ್.ಪೇಟೆಯಲ್ಲಿ ಇತಿಹಾಸ ಬರೆಯುತ್ತಾರೆ. ಈ ವೇಳೆ ಕ್ಷೇತ್ರದ ಜನರು ಬಿಎಸ್‌ವೈ ಬೆನ್ನಿಗೆ ನಿಂತಿದ್ದನ್ನು ಸ್ಮರಿಸಬಹುದು.
ಬಿವೈವಿ ಬಂದರೆ ಲಾಭವೇನು?: ಬಿ.ಎಸ್.ವಿಜಯೇಂದ್ರ ಅವರಿಗೆ ಉಸ್ತುವಾರಿ ವಹಿಸಿದರೆ ಪಕ್ಷಕ್ಕೆ ಆಗುವ ಲಾಭವೇನು ಎನ್ನುವುದು ಪ್ರಮುಖವಾಗುತ್ತದೆ. ಜಿಲ್ಲೆಯಲ್ಲಿ ಪಕ್ಷದ ಹಿಂದಿನ ಇತಿಹಾಸವನ್ನು ಗಮನಿಸಿದರೆ ಪ್ರಸ್ತುತ ಸಾಕಷ್ಟು ಬದಲಾವಣೆ ಕಂಡಿದೆ. ಅಂತೆಯೇ ಪಕ್ಷದಲ್ಲಿ ಇಂದು ಯುವಕರೇ ದಂಡೇ ಇದೆ. ಮಾತ್ರವಲ್ಲದೆ ಪ್ರತಿ ವಿಧಾನಸಭಾ ಕ್ಷೇತ್ರವಾರು ಸ್ಪರ್ಧಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪಕ್ಷದ ಯೂತ್ ಐಕಾನ್ ಆಗಿರುವ ಬಿವೈವಿ ಅವರನ್ನು ಬಳಸಿಕೊಂಡರೇ ಚುನಾವಣೆಗೆ ಫ್ಲಸ್ ಆಗಲಿದೆ. ಜತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಯುವಕರನ್ನು ಪಕ್ಷಕ್ಕೆ ಸೆಳೆಯಬಹುದಾಗಿದೆ.
ಮಾತ್ರವಲ್ಲದೆ ಪಕ್ಷದೊಳಗೆ ಎದ್ದಿರುವ ಗುಂಪುಗಾರಿಕೆಯನ್ನು ಶಮನ ಮಾಡುವ ಸಾಮರ್ಥ್ಯವನ್ನು ಬಿವೈವಿ ಹೊಂದಿದ್ದಾರೆ. ಜತೆಗೆ ಪಕ್ಷಕ್ಕೆ ಡ್ಯಾಮೇಜ್ ಆಗುವಂತಹ ಬೆಳವಣಿಗೆಗಳು ನಡೆಯುವುದು ಬಹುತೇಕ ಕಡಿಮೆಯಾಗಲಿದೆ. ಇದಕ್ಕೆ ಪೂರಕವೆಂಬಂತೆ ಮಂಡ್ಯದಿಂದಲೇ ಪ್ರಾರಂಭವಾದ ಯುವ ಮೋರ್ಚಾದ ಮೊದಲ ಸಮಾವೇಶ ಯಶಸ್ವಿಯಾಗಿದೆ. ಈ ವೇಳೆ ಬಿ.ಎಸ್.ವಿಜಯೇಂದ್ರಗೆ ಭರ್ಜರಿ ಸ್ವಾಗತವನ್ನು ನೀಡಲಾಯಿತು. ಎಲ್ಲ ಮುಖಂಡರು ಒಗ್ಗೂಡಿ ಕಾರ್ಯಕ್ರಮ ಮಾಡಿದರು. ಅಂತೆಯೇ ಬಿವೈವಿ ಅವರ ಗಮನಸೆಳೆಯುವಂತಹ ತಂತ್ರಗಾರಿಕೆಯೂ ನಡೆಯಿತು.
ಒಟ್ಟಾರೆ ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿ ತಂತ್ರಗಾರಿಕೆ ಹಾಗೂ ಪ್ರಯೋಗಾತ್ಮಕ ರಾಜಕಾರಣಕ್ಕೆ ಮುಂದಾಗಿದೆ. ಇದು ಎಷ್ಟರಮಟ್ಟಿಗೆ ಯಶಸ್ಸು ಕಾಣಲಿದೆ ಎನ್ನುವುದನ್ನು ಕಾದುನೋಡಬೇಕಿದೆ.