ಸಕ್ಕರೆನಾಡಲ್ಲಿ ಕಮಲದ ಅಬ್ಬರ: ಕೈ, ದಳದ ವಿರುದ್ಧ ನಾಯಕರ ಟೀಕಾಪ್ರಹಾರ

16M.D.R.3
Published on

ಮಂಡ್ಯ: ಜೆಡಿಎಸ್, ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಮಂಡ್ಯ ಜಿಲ್ಲೆಯಲ್ಲಿ ಶುಕ್ರವಾರ ಬಿಜೆಪಿ ಅಬ್ಬರ ಜೋರಾಗಿತ್ತು. ಜನಸಂಕಲ್ಪ ಯಾತ್ರೆಗೆ ನಿರೀಕ್ಷೆಯನ್ನೂ ಮೀರಿಸಿ ಇಪ್ಪತೈದು ಸಾವಿರಕ್ಕೂ ಹೆಚ್ಚು ಜನರು ಸೇರಿಸುವ ಮೂಲಕ ಸ್ಥಳೀಯ ಮುಖಂಡರು ಶಕ್ತಿ ಪ್ರದರ್ಶನ ಮಾಡಿದರೆ, ಇತ್ತ ಜಿಲ್ಲಾ ಬಿಜೆಪಿ ಇತಿಹಾಸದಲ್ಲಿಯೇ ಬೃಹತ್ ಸಂಖ್ಯೆಯ ಜನರನ್ನು ಸೇರಿಸಿದ್ದನ್ನು ಕಂಡು ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ರಾಜ್ಯಮಟ್ಟದ ನಾಯಕರ ಉತ್ಸಾಹವನ್ನು ಹೆಚ್ಚಿಸಿತು.
ಚುನಾವಣೆ ವಿಚಾರಕ್ಕೆ ಬಂದರೆ ಜಿಲ್ಲೆಯ ಬಗ್ಗೆ ಬಿಜೆಪಿ ನಾಯಕರು ಅಷ್ಟೊಂದು ಒಲವು ತೋರುತ್ತಿರಲಿಲ್ಲ. ಆದರೆ ಕೆ.ಆರ್.ಪೇಟೆ ವಿಧಾನಸಭಾ ಉಪಚುನಾವಣೆ ಗೆಲುವಿನ ಬಳಿಕ ಮತ್ತಷ್ಟು ಕ್ಷೇತ್ರವನ್ನು ತೆಕ್ಕೆಗೆ ಹಾಕಿಕೊಳ್ಳಬಹುದೆಂಬ ನಿರೀಕ್ಷೆ ಹುಟ್ಟಿಸಿತು. ಈ ನಡುವೆ ವಿಧಾನ ಪರಿಷತ್ ಚುನಾವಣೆ ಸೋಲಿನ ಬಳಿಕ ತಣ್ಣಗಾಗಿದ್ದ ಬಿಜೆಪಿಗರು, ಇದೀಗ ಮುಂಬರುವ ಚುನಾವಣೆಗೆ ಸಜ್ಜಾಗುತ್ತಿದ್ದಾರೆ. ಇದಕ್ಕೆ ಪೂರ್ವಭಾವಿ ಎಂಬಂತೆ ಪಾಂಡವಪುರ ಹಾಗೂ ಮದ್ದೂರಿನಲ್ಲಿ ಆಯೋಜಿಸಿದ್ದ ಸಮಾರಂಭಕ್ಕೆ ಬೃಹತ್ ಸಂಖ್ಯೆಯಲ್ಲಿಯೇ ಜನರು ಸೇರಿಸಲಾಗಿತ್ತು. ಇದನ್ನು ಕಂಡು ಸ್ವತಃ ನಾಯಕರೇ ಆಶ್ಚರ್ಯ ವ್ಯಕ್ತಪಡಿಸಿದರು. ಮಾತ್ರವಲ್ಲದೆ ಮೇಲುಕೋಟೆ ವಿಧಾನಸಭಾ ಕ್ಷೇತ್ರಕ್ಕೆ ಡಾ.ಇಂದ್ರೇಶ್ ಮತ್ತು ಮದ್ದೂರಿಗೆ ಎಸ್.ಪಿ.ಸ್ವಾಮಿ ಅವರೇ ಅಭ್ಯರ್ಥಿ ಎಂದು ಘೋಷಣೆ ಮೊಳಗಿಸುವುದರ ಜತೆಗೆ ತಮ್ಮ ಭಾಷಣದ ವೇಳೆ ಜಿಲ್ಲೆಯ ಜನರು ಬದಲಾವಣೆ ಬಯಸಿರುವುದು ಸಮಾರಂಭಕ್ಕೆ ಸೇರಿರುವ ಜನಸ್ತೋಮವೇ ಹೇಳುತ್ತಿದೆ ಎನ್ನುವ ಮೂಲಕ ಮುಖಂಡರು, ಕಾರ್ಯಕರ್ತರ ಹುಮ್ಮಸ್ಸನ್ನು ವೃದ್ಧಿಸಿದರು.
ಎರಡು ಕಾರ್ಯಕ್ರಮದ ವೇಳೆಯೂ ನೆರೆದಿದ್ದ ಸಹಸ್ರಾರೂ ಜನರು ಪ್ರಧಾನಮಂತ್ರಿ ನರೇಂದ್ರ ಮೋದಿ, ಬಸವರಾಜ ಬೊಮ್ಮಾಯಿ, ಬಿ.ಎಸ್.ಯಡಿಯೂರಪ್ಪ ಅವರ ಪರ ಘೋಷಣೆಗಳನ್ನು ಮೊಳಗಿಸಿದರು. ಒಟ್ಟಾರೆ ಜನಸಂಕಲ್ಪ ಯಾತ್ರೆ ಮೂಲಕ ವಿಪಕ್ಷಗಳಿಗೆ ಬಿಜೆಪಿ ತನ್ನ ಸಾಮರ್ಥ್ಯ ಪ್ರದರ್ಶಿಸಿತು. ಮಾತ್ರವಲ್ಲದೆ ನಾಯಕರು ತಮ್ಮ ಭಾಷಣದುದ್ದಕ್ಕೂ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ವಿರುದ್ಧ ಕಟು ಟೀಕೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net