ಬಿಜೆಪಿ ಹಿಂದುಳಿದ ವರ್ಗಗಳ ಪಕ್ಷ : ರಾಜೇಶ್​

udp-16-bjp
Published on

ಉಡುಪಿ: ದೇಶದಾದ್ಯಂತ ಸಣ್ಣ ಸಣ್ಣ ಜಾತಿಗಳನ್ನು ಹುಡುಕಿ ಸ್ಥಾನಮಾನ ನೀಡಿದ ರಾಜಕೀಯ ಪಕ್ಷ ಬಿಜೆಪಿ. ದೇಶದ ಮೊದಲ ಒಬಿಸಿ ಪ್ರಧಾನಿ ಬಿಜೆಪಿಯಿಂದ ಆಯ್ಕೆಯಾಗಿದ್ದಾರೆ. ಒಬಿಸಿ ಸಮುದಾಯ ಹಿಂದುತ್ವದ ಜೊತೆಗೆ ಬಲವಾಗಿ ನಿಂತಿದೆ. ನೈಜಾರ್ಥದಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ಪಕ್ಷವಾಗಿದೆ ಎಂದು ಬಿಜೆಪಿ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್​ ಜಿ.ವಿ. ಯವರು ಹೇಳಿದರು.

ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಬಿಜೆಪಿ ಜಿಲ್ಲಾ ಪದಾಧಿಕಾರಿಗಳ ಸಭೆಯನ್ನುದ್ದೇಶಿಸಿ ಮಾತನಾಡಿದರು. ಮಾಜಿ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವಧಿಯಲ್ಲಿ ಜಾರಿಗೆ ತಂದಿರುವ ಜನಪರ ಯೋಜನೆಗಳು ಅತ್ಯಂತ ಶ್ರೇಷ್ಠವಾಗಿದ್ದು, ಕಾಂಗ್ರೆಸ್​ ಗ್ಯಾರಂಟಿಗಳು ಇಲ್ಲದವರಿಂದ ಪಡೆದು ಉಳ್ಳವರಿಗೆ ಕೊಡುವ ಯೋಜನೆಯಾಗಿದೆ. ದಲಿತರ ಅಭಿವೃದ್ಧಿಗೆ ಮೀಸಲಿಟ್ಟ ಎಸ್ಸಿ ಮತ್ತು ಎಸ್ಟಿ ಹಣ 11,000 ಕೋಟಿ ರೂ. ಗ್ಯಾರಂಟಿ ಯೋಜನೆಗಳಿಗೆ ವರ್ಗಾಯಿಸಿದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ದಲಿತ ವಿರೋಧಿ ಎಂದರು.

ಇತ್ತೀಚೆಗೆ ರಾಜ್ಯದಲ್ಲಿ ಗುತ್ತಿಗೆದಾರರೊಬ್ಬರ ಮನೆಗೆ ನಡೆದ ಐಟಿ ದಾಳಿಯಿಂದ ಅಧಿಕಾರಿಗಳು ಕೋಟ್ಯಾಂತರ ರೂ. ವಶಪಡಿಸಿಕೊಂಡಿರುವುದು ಕಾಂಗ್ರೆಸ್​ ಎಟಿಎಂ ಸರ್ಕಾರ ಎಂಬ ಪ್ರಧಾನಿ ಮೋದಿ ಮಾತಿಗೆ ಸಾಕ್ಷಿಯಂತಿದೆ ಎಂದರು.

ಪಕ್ಷದ ಸಂಘಟನಾ ಶಕ್ತಿ ಮತ್ತು ಅಭ್ಯರ್ಥಿಯ ವೈಯಕ್ತಿಕ ವರ್ಚಸ್ಸಿನ ಮೇಲೆ ಪದವೀಧರ ಕ್ಷೇತ್ರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆ ನಡೆಯುತ್ತದೆ. ಮತದಾರರ ಪಟ್ಟಿಗೆ ಅರ್ಹ ಪದವೀಧರರು ಮತ್ತು ಶಿಕ್ಷಕರ ಹೆಸರು ನೊಂದಾವಣೆಗೆ ಸಕ್ರಿಯವಾಗಿ ತೊಡಗಿಸಿಕೊಂಡು ನೈಋತ್ಯ ಪದವೀಧರ ಕ್ಷೇತ್ರ ಮತ್ತು ನೈಋತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ಗೆಲುವಿಗೆ ಸಂಘಟಿತರಾಗಿ ಶ್ರಮಿಸಬೇಕು ಎಂದು ಅವರು ಕರೆ ನೀಡಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್​ ನಾಯಕ್​ ಪ್ರಾಸ್ತಾವಿಕವಾಗಿ ಮಾತನಾಡಿ, ಸೇವಾ ಪಾಕ್ಷಿಕ ಅಭಿಯಾನದ ಸಹಿತ ರಾಜ್ಯ ಬಿಜೆಪಿ ನೀಡಿರುವ ಎಲ್ಲ ಚಟುವಟಿಕೆಗಳನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ನಿರ್ವಹಿಸಲಾಗಿದೆ. ನೈಋತ್ಯ ಪದವೀಧರರ ಕ್ಷೇತ್ರ ಮತ್ತು ನೈಋತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯನ್ನೂ ಸವಾಲಾಗಿ ಸ್ವೀಕರಿಸಿ ಗರಿಷ್ಠ್ಠ ಸಂಖ್ಯೆಯಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಒತ್ತು ನೀಡುವ ಮೂಲಕ ಚುನಾವಣೆಯ ಗೆಲುವಿಗೆ ಕಾರ್ಯಕರ್ತರು ಕಂಕಣಬದ್ಧರಾಗಿ ತೊಡಗಿಸಿಕೊಳ್ಳಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ನಯನಾ ಗಣೇಶ್​, ವಿಭಾಗ ಸಂಘಟನಾ ಪ್ರಧಾನ ಕಾರ್ಯದರ್ಶಿ ಪ್ರಸಾದ್​ ಕುಮಾರ್​, ಶಾಸಕರಾದ ಯಶ್ಪಾಲ್​ ಎ. ಸುವರ್ಣ, ವಿ.ಸುನೀಲ್​ ಕುಮಾರ್​, ಗುರ್ಮೆ ಸುರೇಶ್​ ಶೆಟ್ಟಿ, ಕಿರಣ್​ ಕುಮಾರ್​ ಕೊಡ್ಗಿ, ಗುರುರಾಜ್​ ಗಂಟಿಹೊಳೆ, ನಿಕಟಪೂರ್ವ ಶಾಸಕ ಕೆ.ರಘುಪತಿ ಭಟ್​, ಲಾಲಾಜಿ ಆರ್​. ಮೆಂಡನ್​, ನಿಕಟಪೂರ್ವ ಜಿಲ್ಲಾಧ್ಯಕ್ಷ ಮಟ್ಟಾರ್​ ರತ್ನಾಕರ ಹೆಗ್ಡೆ, ಜಿಲ್ಲಾ ಉಪಾಧ್ಯಕ್ಷರಾದ ರವಿ ಅಮೀನ್​, ಪೆರ್ಣಠಕಿಲ ಶ್ರೀಶ ನಾಯಕ್​, ಪ್ರಕಾಶ್​ ಶೆಟ್ಟಿ ಪಾದೆಬೆಟ್ಟು, ಗೀತಾಂಜಲಿ ಎಮ್​. ಸುವರ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕುತ್ಯಾರು ನವೀನ್​ ಶೆಟ್ಟಿ, ಮನೋಹರ್​ ಎಸ್​. ಕಲ್ಮಾಡಿ, ಸದಾನಂದ ಉಪ್ಪಿನಕುದ್ರು, ಮಹಿಳಾ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ, ಎಸ್ಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ದಿನಕರ ಬಾಬು ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net