ಕೈ ಕಾರ್ಯಕರ್ತರ ವಿರುದ್ಧ ಬಿಜೆಪಿ ಆಕ್ರೋಶ

BJP outraged against hand workers
ಜಮಖಂಡಿ ನಗರದ ಬಸ್ ನಿಲ್ದಾಣದಲ್ಲಿ ಅಧಿಕಾರಿಗಳ ಜತೆ ವಾಗ್ವಾದ ನಡೆಸಿದ ಬಿಜೆಪಿ ಮುಖಂಡರು.
Published on

ಜಮಖಂಡಿ: ಮಹಿಳೆಯರಿಗೆ ಉಚಿತ ಬಸ್ ಸಂಚಾರಕ್ಕೆ ಚಾಲನೆ ನೀಡುವ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ನಗರದ ಬಸ್ ನಿಲ್ದಾಣದಲ್ಲಿ ಘೋಷಣೆ ಕೂಗಿ ಕೆಲಕಾಲ ಗೊಂದಲದ ವಾತಾವರಣ ಮೂಡಿಸಿದರು.

ಮಧ್ಯಾಹ್ನ 1 ಗಂಟೆಗೆ ನಗರದ ಬಸ್ ನಿಲ್ದಾಣದಲ್ಲಿ ಮಹಿಳೆಯರಿಗೆ ಉಚಿತ ಟಿಕೆಟ್ ವಿತರಿಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಶಾಸಕ, ನಾಡೋಜ ಜಗದೀಶ ಗುಡಗುಂಟಿ ಅವರು ಆಗಮಿಸಿ ವೇದಿಕೆಗೆ ತೆರಳುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಪಕ್ಷದ ಪರ ಘೋಷಣೆ ಕೂಗಿದರು. ಕೆಲ ಸಮಯದ ನಂತರ ಆಗಮಿಸಿದ ಮಾಜಿ ಶಾಸಕ ಆನಂದ ನ್ಯಾಮಗೌಡ ಅವರನ್ನು ವೇದಿಕೆಯವರೆಗೂ ಕಾರ್ಯಕರ್ತರು ಜೋರಾಗಿ ಘೊಷಣೆ ಕೂಗುತ್ತ ಕರೆತಂದದ್ದು ಬಿಜೆಪಿ ಮುಖಂಡರು, ಕಾರ್ಯಕರ್ತರಲ್ಲಿ ಅಸಮಾಧಾನ ಮೂಡಿಸಿತು.

ಬಸ್‌ನಲ್ಲಿ ಟಿಕೆಟ್ ನೀಡಿ ಬಸ್‌ಗೆ ಚಾಲನೆ ನೀಡುವ ಸಂದರ್ಭದಲ್ಲಿಯೂ ಕಾಂಗ್ರೆಸ್ ಧ್ವಜದೊಂದಿಗೆ ಕಾರ್ಯಕರ್ತರೊಬ್ಬರು ಆಗಮಿಸಿದ್ದನ್ನು ನೋಡಿದ ಬಿಜೆಪಿ ಮುಖಂಡರು, ಪದಾಧಿಕಾರಿಗಳು ಘಟಕ ವ್ಯವಸ್ಥಾಪಕ ಸಂಗಮೇಶ ಮಟೋಳಿ, ತಹಸೀಲ್ದಾರ್ ಸದಾಶಿವ ಮಕ್ಕೋಜಿ ಅವರಿಗೆ ಸರ್ಕಾರದ ಶಿಷ್ಟಾಚಾರ ಪಾಲನೆಯಾಗುತ್ತಿಲ್ಲ. ಇದೇನು ಪಕ್ಷದ ಕಾರ್ಯಕ್ರಮವೇ ಎಂದು ಪ್ರಶ್ನಿಸಿದರು. ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಬೇಕು ಎಂದು ಅಧಿಕಾರಿಗಳ ಜತೆ ವಾಗ್ವಾದ ನಡೆಸಿದರು. ಪೊಲೀಸ್ ಸಿಬ್ಬಂದಿ ಮಧ್ಯಪ್ರವೇಶಿಸಿ ವಾತಾವರಣ ತಿಳಿಗೊಳಿಸಿದರು.

ಘಟಕ ವ್ಯವಸ್ಥಾಪಕರ ವಿರುದ್ಧ ಆಕ್ರೋಶ
ಇಲ್ಲಿನ ಘಟಕ ವ್ಯವಸ್ಥಾಪಕ ಬೇಜವಾಬ್ದಾರಿಯುತವಾಗಿ ನಡೆದುಕೊಂಡಿದ್ದಾರೆ. ಜಮಖಂಡಿಯಲ್ಲಿ ಇಂತಹ ಸಂಸ್ಕೃತಿ ಇರಲಿಲ್ಲ. ಶಾಸಕರ ಹಕ್ಕುಚ್ಯುತಿ ಮಾಡುವುದು ಸರಿಯಲ್ಲ. ಮಾಜಿ ಶಾಸಕರನ್ನು ಆಹ್ವಾನಿಸುತ್ತಾರೆ ಎಂದರೆ ನನಗೆ ಯಾಕೆ ಕರೆದಿಲ್ಲ? ಇನ್ನೊಮ್ಮೆ ಈ ರೀತಿಯಾದರೆ ನಾವು ಸುಮ್ಮನೆ ಇರಲು ಸಾಧ್ಯವಿಲ್ಲ. ಸರ್ಕಾರಿ ಕಾರ್ಯಕ್ರಮವನ್ನು ಪಕ್ಷದ ಸಭೆಯಂತೆ ನಡೆಸುವುದು ಸರಿಯಲ್ಲ, ಈ ಹಿಂದೆ ನಮ್ಮ ಬಿಜೆಪಿ ಸರ್ಕಾರ ಇದ್ದಾಗ ಶಾಸಕರಿಗೆ ಮುಜುಗರ ಆಗುವಂತೆ ನಾವು ನಡೆದುಕೊಂಡಿಲ್ಲ. ಇಂದಿನ ಬೆಳವಣಿಗೆಯನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಪತ್ರಿಕೆಗೆ ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net