7 ಪಾಲಿಕೆಗಳ ಬಿಜೆಪಿ ಸದಸ್ಯರಿಗೆ ಪ್ರಶಿಕ್ಷಣ ವರ್ಗ

bellad today
Published on

ಹುಬ್ಬಳ್ಳಿ: ರಾಜ್ಯದ 7 ಮಹಾನಗರ ಪಾಲಿಕೆಗಳ ಬಿಜೆಪಿಯ 197 ಸದಸ್ಯರಿಗೆ ಹುಬ್ಬಳ್ಳಿ ಭೈರಿದೇವರಕೊಪ್ಪದ ಶ್ರೀ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದಲ್ಲಿ ನ. 3 ಮತ್ತು 4ರಂದು ಪ್ರಶಿಕ್ಷಣ ವರ್ಗ ಆಯೋಜಿಸಲಾಗಿದೆ ಎಂದು ಶಾಸಕ ಅರವಿಂದ ಬೆಲ್ಲದ ತಿಳಿಸಿದರು.

ಹುಬ್ಬಳ್ಳಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ. 3ರಂದು ಮಧ್ಯಾಹ್ನ 3 ಗಂಟೆಗೆ ಬಿಜೆಪಿ ರಾಜ್ಯಾಧ್ಯಕ್ಷ ಉದ್ಘಾಟಿಸುವರು. ರಾಷ್ಟ್ರೀಯ ಪ್ರಶಿಕ್ಷಣ ಪ್ರಕೋಷ್ಠದ ಪ್ರಮುಖ ರವೀಂದ್ರ ಸಾಠೆ ಭಾಗವಹಿಸುವರು. ನ. 4ರಂದು ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭದಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ ಪಾಲ್ಗೊಳ್ಳುವರು.

ಒಟ್ಟು 6 ಅವಧಿಯಲ್ಲಿ 8 ಗೋಷ್ಠಿಗಳು ನಡೆಯಲಿವೆ. ಪಕ್ಷದ ಪ್ರಮುಖರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ನಂದೀಶ ರೆಡ್ಡಿ, ಬಿ.ಸಿ. ನಾಗೇಶ, ಕೆ.ಎಸ್. ನವೀನ, ಶ್ರೀಕಾಂತ ಕುಲಕರ್ಣಿ, ಸಿದ್ರಾಮಣ್ಣ, ಪ್ರದೀಪ ಶೆಟ್ಟರ್, ಇತರರು ಪಾಲಿಕೆ ಸದಸ್ಯರಿಗೆ ವಿವಿಧ ವಿಷಯಗಳನ್ನು ಬೋಧಿಸುವರು. ಕೇಂದ್ರ ಸರ್ಕಾರದ ಆರ್ಥಿಕ, ಸಾಮಾಜಿಕ, ವಿದೇಶಾಂಗ ನೀತಿ, ಗರೀಬ್ ಕಲ್ಯಾಣ ಯೋಜನೆಗಳು, ಸಾಮಾಜಿಕ ಜಾಲತಾಣಗಳನ್ನು ತೊಡಗಿಸಿಕೊಳ್ಳುವಿಕೆ, ರಾಜ್ಯ-ರಾಷ್ಟ್ರಗಳ ಪ್ರಸ್ತುತ ಸ್ಥಿತಿ, ಜನಪ್ರತಿನಿಧಿಗಳಿಂದ ಜನರ ಅಪೇಕ್ಷೆ, ಇತ್ಯಾದಿ ವಿಷಯಗಳ ಕುರಿತು ಪಾಲಿಕೆ ಸದಸ್ಯರಿಗೆ ಶಿಕ್ಷಣ ನೀಡಲಾಗುವುದು ಎಂದು ತಿಳಿಸಿದರು.

ಜನಸಂಘದ ಸಮಯದಿಂದ ಕಾಲಕಾಲಕ್ಕೆ ಪ್ರಶಿಕ್ಷಣ ವರ್ಗ ನಡೆಸಿಕೊಂಡು ಬರಲಾಗಿದೆ. ಇದು ನಿರಂತರ ಪ್ರಕ್ರಿಯೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಶಿಕ್ಷಣ ವರ್ಗ ಆಯೋಜಿಸಿಲ್ಲ ಎಂದು ಸ್ಪಷ್ಟಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಲಿಂಗರಾಜ ಪಾಟೀಲ, ಸಂಜಯ ಕಪಟಕರ, ದತ್ತಮೂರ್ತಿ ಕುಲಕರ್ಣಿ, ರವಿ ನಾಯಕ ಮೋಹನ ರಾಮದುರ್ಗ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net