ಅಭಿಪ್ರಾಯ ಸಂಗ್ರಹಣೆ ಅಭಿಯಾನ ಐತಿಹಾಸಿಕ ಹೆಜ್ಜೆ

IMG-20230331-WA0012
Published on

ಉಡುಪಿ : ಬಿಜೆಪಿ ಪಕ್ಷದ ಸಂವಿಧಾನದ ಚೌಕಟ್ಟಿನೊಳಗೆ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಗಳಲ್ಲಿ ಶಕ್ತಿಕೇಂದ್ರ ಮೇಲ್ಪಟ್ಟ ಪದಾಧಿಕಾರಿಗಳ ಅಭಿಪ್ರಾಯ ಸಂಗ್ರಹಣೆ ಅಭಿಯಾನ ರಾಜಕೀಯ ಪಕ್ಷಗಳಲ್ಲಿ ಐತಿಹಾಸಿಕ ಹೆಜ್ಜೆಯಾಗಿದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಜಗದೀಶ್ ಹಿರೇಮನೆ ಹೇಳಿದರು.


ಶುಕ್ರವಾರ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆದ ವಿಧಾನಸಭಾ ಚುನಾವಣಾ ಅಭಿಪ್ರಾಯ ಸಂಗ್ರಹಣೆ ಸಭೆಯಲ್ಲಿ ರಾಜ್ಯ ತಂಡದ ನೇತೃತ್ವ ವಹಿಸಿ ಮಾತನಾಡಿದರು.


ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಸುಮಾರು 16,000ಕ್ಕೂ ಮಿಕ್ಕಿ ಶಕ್ತಿಕೇಂದ್ರಗಳ ಅಧ್ಯಕ್ಷರ ಸಹಿತ ಮಹಾ ಶಕ್ತಿಕೇಂದ್ರ, ಮಂಡಲ, ಪ್ರಕೋಷ್ಠ, ಮೋರ್ಚಾ, ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರೀಯ ಪದಾಧಿಕಾರಿಗಳು ಹಾಗೂ ಪಕ್ಷದ ಇತರ ಪ್ರಮುಖರು ಈ ಪ್ರಕ್ರಿಯೆಯಲ್ಲಿ ಭಾಗವಹಿಸಿ ತಮ್ಮ ವಿಧಾನಸಭಾ ಕ್ಷೇತ್ರಕ್ಕೆ ಒಂದು ಅಥವಾ ಗರಿಷ್ಠ ಮೂರು ಮಂದಿ ಅಭ್ಯರ್ಥಿಗಳ ಹೆಸರನ್ನು ಸೂಚಿಸಲು ಅವಕಾಶ ನೀಡಲಾಗಿದೆ. ಮತದಾನ ಪ್ರಕ್ರಿಯೆಯ ಬಳಿಕ ಸೀಲ್ ಮಾಡಿದ ಬ್ಯಾಲೆಟ್ ಪೇಪರ್ ಬಾಕ್ಸ್‌ಗಳನ್ನು ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳು ಪರಿಶೀಲಿಸಲಿದ್ದಾರೆ ಎಂದು ಅವರು ಹೇಳಿದರು.


ಈ ಸಂದರ್ಭದಲ್ಲಿ ವಿಧಾನ ಪರಿಷತ್ ಉಪ ಸಭಾಪತಿ ಪ್ರಾಣೇಶ್ ಹಾಗೂ ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಉಪಸ್ಥಿತರಿದ್ದರು.  ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಅಧ್ಯಕ್ಷತೆ ವಹಿಸಿದ್ದರು.


 ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಬೆಳಿಗ್ಗೆ 9.30 ರಿಂದ ಸಂಜೆ 4.30ರ ತನಕ ನಡೆದ ಮಂಡಲವಾರು ಅಭಿಪ್ರಾಯ ಸಂಗ್ರಹಣೆಯಲ್ಲಿ ಕಾಪು ಮಂಡಲದಿಂದ 105 ಮಂದಿ, ಉಡುಪಿಯಿಂದ 148 ಮಂದಿ, ಕುಂದಾಪುರದಿಂದ 109 ಮಂದಿ, ಬೈಂದೂರಿನಿಂದ 106 ಮಂದಿ, ಕಾರ್ಕಳದಿಂದ 109 ಮಂದಿ ಅಪೇಕ್ಷಿತ ಪದಾಧಿಕಾರಿಗಳು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.


ಈ ಸಂದರ್ಭದಲ್ಲಿ ಬಿಜೆಪಿ ಮಂಗಳೂರು ವಿಭಾಗ ಸಂಘಟನಾ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಕುಮಾರ್, ಮಾಜಿ ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಬಿ.ಎಂ. ಸುಕುಮಾರ್ ಶೆಟ್ಟಿ, ಪ್ರಮೋದ್ ಮಧ್ವರಾಜ್ ಉಪಸ್ಥಿತರಿದ್ದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ, ಮನೋಹರ್ ಎಸ್. ಕಲ್ಮಾಡಿ ಮತ್ತು ಸದಾನಂದ ಉಪ್ಪಿನಕುದ್ರು ಮತದಾನ ಪ್ರಕ್ರಿಯೆಯನ್ನು ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net