

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:
ದೆಹಲಿಯಲ್ಲಿ ರೈತರು ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಸುದೀರ್ಘ ಪ್ರತಿಭಟನೆ ನಡೆಸಿದರು. ಆಗ, ಸುಮಾರು 700 ರೈತರು ಮೃತಪಟ್ಟಿದ್ದರು. ಮಹಾರಾಷ್ಟ್ರದಲ್ಲಿ ಒಂದು ತಿಂಗಳಲ್ಲಿ 700ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ಬಿಜೆಪಿಯವರಿಗೆ ಕರ್ನಾಟಕದ ರೈತರ ಬಗ್ಗೆ ಮಾತ್ರ ಕಾಳಜಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಟೀಕಿಸಿದರು.
ಹುಬ್ಬಳ್ಳಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿಯಲ್ಲಿ ಕಬ್ಬು ಬೆಳಗಾರ ರೈತರ ಸಮಸ್ಯೆ ಮುಂದಿಟ್ಟುಕೊಂಡು ಬಿಜೆಪಿಯವರು ಕಾಂಗ್ರೆಸ್ ಸರ್ಕಾರದ ವಿರುದ್ಧ ಮುಗಿಬೀಳುತ್ತಿದ್ದಾರೆ. ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿಯೂ ರೈತರು ಸಮಸ್ಯೆಯಲ್ಲಿ ಇದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದೆ ಎಂಬ ಕಾರಣ ಬಿಜೆಪಿಯವರು ದೊಡ್ಡದಾಗಿ ಮಾತನಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹೇಳಿದಂತೆ ರೈತರ ಆದಾಯ ದ್ವಿಗುಣವಾಗಿದೆಯೇ ಎಂದು ಪ್ರಶ್ನಿಸಿದರು.
ಜಗತ್ತಿಗೆ ಗೊತ್ತಾಗಿದೆ:
ಚುನಾವಣೆ ಗೆಲ್ಲುವ ಉದ್ದೇಶದಿಂದ ವಿಶ್ವ ಗುರು ಮೋದಿ ಅವರು ವೋಚ್ ಚೋರಿ ಮಾಡಿಸಿರುವುದು ಇಡೀ ಜಗತ್ತಿಗೆ ಗೊತ್ತಾಗಿದೆ. ಮಾದರಿ ಚುನಾವಣೆ ವ್ಯವಸ್ಥೆ ಎಂದು ಹೇಳಿಕೊಂಡು ಇಡೀ ವ್ಯವಸ್ಥೆ ಹಾಳು ಮಾಡಿದ್ದಾರೆ. ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ, ಸಿಎಎಗೆ ಯಾವುದೇ ಅರ್ಥವಿಲ್ಲ. ಇದನ್ನು ಮಾಡುವವರಿಗೆ ಸ್ವಲ್ಪವೂ ನಾಚಿಕೆ, ಮಾನ, ಮರ್ಯಾದೆ ಇಲ್ಲ. ಚುನಾವಣಾ ಪೂರ್ವದಲ್ಲಿ ಮತದಾರರ ಪಟ್ಟಿಯಿಂದ ಸಾವಿರಾರೂ ಮತ ಕೈಬಿಡಲಾಗಿದೆ. ಕೆಲವೊಂದು ಕಡೆ ಮತದಾರರ ಸಂಖ್ಯೆ ಹೆಚ್ಚಾಗಿದೆ. ಬಿಜೆಪಿಗೆ ಯಾವುದೇ ರಾಜಕೀಯ ಸಿದ್ಧಾಂತ ಹಾಗೂ ಬದ್ಧತೆ ಇಲ್ಲ ಎಂದು ಕಿಡಿಕಾರಿದರು.
ಹು-ಧಾ ಬಿಆರ್ಟಿಎಸ್ ಬದಲು ಎಲ್ಆರ್ಟಿ (ಲೈಟ್ ರೇಲ್ ಟ್ರಾನ್ಸಿಸ್ಟ್) ವ್ಯವಸ್ಥೆ ಜಾರಿಗೆ ಸಂಬಂಧಿಸಿದಂತೆ ವಿಸõತ ಯೋಜನಾ ವರದಿ (ಡಿಪಿಆರ್) 2 ವಾರಗಳಲ್ಲಿ ರಾಜ್ಯ ಸರ್ಕಾರಕ್ಕೆ ಸಲ್ಲಿಕೆಯಾಗಲಿದೆ. ಇದು ಪಿಪಿಪಿ (ಖಾಸಗಿ ಸಾರ್ವಜನಿಕ ಸಹಭಾಗಿತ್ವ) ಮಾದರಿಯಲ್ಲಿ ಜಾರಿಯಾಗಲಿದೆ. ಅನುಷ್ಠಾನಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.