

ಕೋಲಾರ : ಇವಿಎಂ ಮೂಲಕ ಬಿಜೆಪಿ ಗೆಲ್ಲುತ್ತಿದೆ ಎನ್ನುತ್ತಿದ್ದ ಪ್ರತಿಪಕ್ಷಗಳಿಗೆ ಬ್ಯಾಲೆಟ್ (ಮತಪತ್ರ)ದ ಮೂಲಕ ನಡೆದ ಗ್ರಾಪಂ ಚುನಾವಣೆ ತಕ್ಕ ಉತ್ತರ ನೀಡಿದ್ದು, ಎಲ್ಲ ಹಿಂದುಳಿದ ವರ್ಗಗಳನ್ನು ಪಕ್ಷದಲ್ಲಿ ಜೋಡಿಸುವ ಕೆಲಸ ಆಗಬೇಕು ಎಂದು ಸಂಸದ ಎಸ್.ಮುನಿಸ್ವಾಮಿ ಹೇಳಿದರು.
ನಗರದ ಬಾಲಾಜಿ ಪ್ರಾರ್ಥನಾ ಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ಒಬಿಸಿ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿ, ಬಿಜೆಪಿ ಇವಿಎಂನಿಂದ ಚುನಾವಣೆ ಗೆಲ್ಲುತ್ತಿದೆಯೆಂದು ಪ್ರತಿಪಕ್ಷಗಳು ದೂರುತ್ತಿದ್ದವು. ಗ್ರಾಪಂ ಚುನಾವಣೆಯಲ್ಲಿ ಬ್ಯಾಲೆಟ್‌ನಿಂದ ಶೇ.60ಕ್ಕಿಂತ ಹೆಚ್ಚು ಮತ ಪಡೆದು ಗ್ರಾಮ ಮಟ್ಟದಲ್ಲಿ ಪಕ್ಷ ಬಲಗೊಂಡಿರುವುದು ಪ್ರತಿಪಕ್ಷಗಳಿಗೆ ನಡುಕ ಹುಟ್ಟಿಸಿದೆ. ಕಾಂಗ್ರೆಸ್‌ಗೆ ಜನ್ಮ ನೀಡಿದವರು ಚುನಾವಣೆಗೆ ನಿಂತರೂ ಸೋಲಿಸಿ ಮನೆಗೆ ಕಳುಹಿಸುತ್ತಾರೆಂಬುದು ಮನದಟ್ಟಾಗಿದೆ ಎಂದರು.
ಒಬಿಸಿ ಮೋರ್ಚಾ ಬೂತ್ ಮಟ್ಟದಲ್ಲಿ ಸಮುದಾಯದ ನಾಯಕರನ್ನು ಬೆಳೆಸಿ ಬಲಿಷ್ಠಗೊಳಿಸಬೇಕು. ಎಲ್ಲ ಹಿಂದುಳಿದ ವರ್ಗಗಳನ್ನು ಪಕ್ಷಕ್ಕೆ ಜೋಡಿಸಿಕೊಂಡರೆ ತಾಪಂ, ಜಿಪಂ ಚುನಾವಣೆಯಲ್ಲಿ ಕಾಂಗ್ರೆಸ್, ಇತರ ಪಕ್ಷಗಳನ್ನು ಮನೆಗೆ ಕಳುಹಿಸಬಹುದು ಎಂದರು.
ಪಕ್ಷದ ತತ್ವ, ಸಿದ್ಧಾಂತ ಒಪ್ಪುವವರನ್ನು ಸೇರಿಸಿಕೊಂಡು ಸಂಘಟಿಸಿ ಮುಂದೆ ನಾಲ್ಕೈದು ಕ್ಷೇತ್ರಗಳಲ್ಲಾದರೂ ಬಿಜೆಪಿ ಗೆಲ್ಲಬೇಕು. ಮುಂದಿನ 40-50 ವರ್ಷ ಪ್ರತಿಪಕ್ಷಗಳು ದೆಹಲಿ, ಬೆಂಗಳೂರು ಕಡೆ ನೋಡದಂತೆ, ಅಧಿಕೃತ ಪ್ರತಿಪಕ್ಷ ಸ್ಥಾನ ಸಿಗದಂತೆ ನೋಡಿಕೊಳ್ಳಬೇಕು ಎಂದರು.
ಕಾರ್ಯಕಾರಿಣಿ ಉದ್ಘಾಟಿಸಿ ಮಾತನಾಡಿದ ರಾಜ್ಯ ಒಬಿಸಿ ಅಧ್ಯಕ್ಷ ನೆ.ಲ. ನರೇಂದ್ರಬಾಬು, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಮಾರ್ಗದರ್ಶನ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೀಡುವ ಸಲಹೆಗಳನ್ನು ಬೂತ್ ಮಟ್ಟ ಮಹಾಶಕ್ತಿ ಕೇಂದ್ರ ಶಕ್ತಿ ಕೇಂದ್ರ, ಮಂಡಲ್ ವ್ಯಾಪ್ತಿಯಲ್ಲಿ ಪಸರಿಸಿ ಸಂಘಟನೆ ಬಲಪಡಿಸಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಕಟ್ಟ ಕಡೆಯ ಫಲಾನುಭವಿಗಳಿಗೆ ತಲುಪಿಸುವ ಕೆಲಸವನ್ನು ಒಬಿಸಿ ಕಾರ್ಯಕರ್ತರು ಮಾಡಿದರೆ ಪ್ರಧಾನಿಗಳ ಆಶಯ ಈಡೇರಲು ಸಾಧ್ಯ ಎಂದರು.
ರಾಜ್ಯದಲ್ಲಿ ಒಬಿಸಿ ಮೋರ್ಚಾವನ್ನು ಸದೃಢಗೊಳಿಸಬೇಕಿದ್ದು, ಮುಂದೆ ಮಂಡಲ ಮಟ್ಟಕ್ಕೆ ಭೇಟಿ ನೀಡುವ. ವೆಬಿನಾರ್ ಮೂಲಕ ಮಂಡಲಗಳ ಪದಾಧಿಕಾರಿಗಳನ್ನು ಸಂಪರ್ಕದಲ್ಲಿ ಇಟ್ಟುಕೊಳ್ಳುವುದಾಗಿ ತಿಳಿಸಿದ ಅವರು, ಪ್ರತಿ ತಿಂಗಳಲ್ಲಿ ಕನಿಷ್ಠ ಒಂದು ಬಾರಿಯಾದರೂ ಶ್ರಮದಾನ ಮಾಡುವಂತೆ ಕರೆ ನೀಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಕೆ.ಎನ್.ವೇಣುಗೋಪಾಲ್, ರಾಜ್ಯ ಬಿಜೆಪಿ ಕಾರ್ಯದರ್ಶಿ ಕೇಶವಪ್ರಸಾದ್, ಒಬಿಸಿ ಉಪಾಧ್ಯಕ್ಷ ಸುರೇಶ್‌ಬಾಬು, ಖಜಾಂಚಿ ಗೋವಿಂದರಾಜು, ಕಾರ್ಯಕಾರಿಣಿ ಸದಸ್ಯ ಸೊಣ್ಣೂರು ವೆಂಕಟೇಶ್, ಕಿರಣ್, ಚನ್ನಕೇಶವ, ಉಪಾಧ್ಯಕ್ಷ ಗೋವಿಂದರಾಜು, ಜಿಲ್ಲಾಧ್ಯಕ್ಷ ಕೋಳಿ ನಾಗರಾಜ್,ಪ್ರಧಾನ ಕಾರ್ಯದರ್ಶಿ ಆರ್.ಎಸ್. ಚಂದ್ರಶೇಖರ್, ಬಿಜೆಪಿ ನಗರಾಧ್ಯಕ್ಷ ತಿಮ್ಮರಾಯಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ ಇತರರು ಭಾಗವಹಿಸಿದ್ದರು.