

ಹುಬ್ಬಳ್ಳಿ: ಹಿಂದುಳಿದ ವರ್ಗಗಳ ಶ್ರೇಯೋಭಿವೃದ್ಧಿಗೆ ಯಾವುದೇ ಯೋಜನೆ ರೂಪಿಸದೇ ಸತತವಾಗಿ ಅನ್ಯಾಯ ಮಾಡುತ್ತ ಬಂದಿರುವ ಕಾಂಗ್ರೆಸ್ನವರು ಜನರಿಗೆ ಮೋಸ ಮಾಡುತ್ತಲೇ ಇದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದರು.
ಇಲ್ಲಿಯ ಗೋಕುಲ ಗಾರ್ಡನ್ನಲ್ಲಿ ಗುರುವಾರ ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ವತಿಯಿಂದ ಏರ್ಪಡಿಸಿದ್ದ ಹಿಂದುಳಿದ ವರ್ಗಗಳ ಸಾಮಾಜಿಕ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಜನಸಂಖ್ಯೆಯ ಶೇ. 54ರಷ್ಟಿರುವ ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ದೇಶಕ್ಕೆ ಸ್ವಾತಂತ್ರ ಬಂದ ಆರಂಭದಲ್ಲಿ ಆಯೋಗಗಳು ನೀಡಿದ ವರದಿಯನ್ನು ಕಾಂಗ್ರೆಸ್ ಜಾರಿ ಮಾಡಲಿಲ್ಲ. ಮಂಡಲ್ ಆಯೋಗದ ವರದಿಗೂ ವಿರೋಧ ಮಾಡಿದರು. ಗರೀಭಿ ಹಠಾವೋ ಕೇವಲ ಘೋಷಣೆಯಾಗಿ ಉಳಿಯಿತು ಎಂದು ಟೀಕಿಸಿದರು.
ಕರ್ನಾಟಕದಲ್ಲಿ ಸಿದ್ದರಾಮಯ್ಯನವರು ಜನರಿಗೆ ಒಂದು ಕಾಳು ಅಕ್ಕಿಯನ್ನೂ ಕೊಡಲಿಲ್ಲ. ಪ್ರಧಾನಿ ಮೋದಿ ಅವರು ಕೊಟ್ಟಿದ್ದನ್ನೇ ತಮ್ಮದೆಂದು ಹೇಳಿಕೊಳ್ಳುತ್ತಿದ್ದಾರೆ. ಅವರು ಸುಳ್ಳು ಹೇಳುವುದರಲ್ಲಿ ನಿಸ್ಸಿಮರು ಎಂದು ದೂರಿದರು.
ಹಿಂದುಳಿದ ವರ್ಗದವರು ಕಳೆದ ನಾಲ್ಕು ಚುನಾವಣೆಗಳಲ್ಲಿ ನನ್ನ ಕೈ ಹಿಡಿದಿದ್ದಾರೆ. ಮುಂದೆಯೂ ನನ್ನ ಗೆಲುವಿಗೆ ಕಾರಣವಾಗಲಿದ್ದಾರೆ. ಎಲ್ಲ ಸಮಾಜದ ಆಶೀರ್ವಾದ ನನ್ನ ಮೇಲೆ ಇರುವುದರಿಂದಲೇ ನರೇಂದ್ರ ಮೋದಿ ಅವರು ನನಗೆ ಟಿಕೆಟ್ ಕೊಟ್ಟಿದ್ದಾರೆ. ಕ್ಷೇತ್ರದ ಮತದಾರರು ತಲೆ ತಗ್ಗಿಸುವಂತಹ ಕೆಲಸ ಮಾಡಿಲ್ಲ, ಮಾಡುವುದೂ ಇಲ್ಲ ಎಂದು ಘೋಷಿಸಿದರು.
ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯಾಧ್ಯಕ್ಷ ರು ಕೌಟಿಲ್ಯ ಮಾತನಾಡಿ, ಸುಮಾರು 30 ಹಿಂದುಳಿದ ಸಮಾಜಗಳು ಇಲ್ಲಿ ಸಮಾವೇಶಗೊಂಡಿವೆ. ಅನುಭವ ಮಂಟಪ ಮಾದರಿಯಲ್ಲಿ ಸಮ್ಮೇಳನ ನಡೆಯುತ್ತಿದ್ದು, ಪ್ರಲ್ಹಾದ ಜೋಶಿ ಅವರು ಕೇಂದ್ರ ಬಿಂದುವಾಗಿದ್ದಾರೆ. ಕಾಯಕವೇ ಕೈಲಾಸ ತತ್ವದಡಿ ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲ ಸಮಾಜದವರ ಅನುಕೂಲಕ್ಕೆ ಯೋಜನೆ ರೂಪಿಸಿದ್ದಾರೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಹಿಂದ ಹೆಸರಲ್ಲಿ ಹಿಂದುಳಿದ ವರ್ಗಗಳಿಗೆ ವಂಚನೆ ಮಾಡಿದ್ದಾರೆ. ಬಜೆಟ್ನಲ್ಲಿ ಯಾವುದೇ ನಿಗಮಕ್ಕೂ ಒಂದು ರೂಪಾಯಿ ಅನುದಾನ ನೀಡಿಲ್ಲ ಎಂದು ಆರೋಪಿಸಿದರು.
ಉಪಾಧ್ಯಕ್ಷ ಸತೀಶ ಶೇಜವಾಡಕರ ಮಾತನಾಡಿ, ಹಿಂದುಳಿದ ವರ್ಗಗಳ ಜನರು ಸದಾ ಬಿಜೆಪಿ ಜತೆ ಇದ್ದಾರೆ ಎಂಬುದನ್ನು ತೋರಿಸಿಕೊಡಲು ಸಮ್ಮೇಳನ ಆಯೋಜಿಸಲಾಗಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯದರ್ಶಿ ನಾರಾಯಣ ಮಾತನಾಡಿ, ಬಿಜೆಪಿಗೆ ಶಕ್ತಿ ತುಂಬುವ ಕೆಲಸವನ್ನು ಹಿಂದುಳಿದ ವರ್ಗಗಳ ಸಮಾಜ ಮಾಡುತ್ತ ಬಂದಿವೆ ಎಂದರು.
ಮುಖಂಡರಾದ ಸಂಜಯ ಕಪಟಕರ, ಮಾ. ನಾಗರಾಜ ಇತರರು ಮಾತನಾಡಿದರು. ಪ್ರಲ್ಹಾದ ಜೋಶಿ ಅವರಿಗೆ ಖಡ್ಗ ನೀಡಿ, ಬೃಹತ್ ಹೂಮಾಲೆ ಹಾಕಿ ಸನ್ಮಾನಿಸಲಾಯಿತು.
ಮಹಾನಗರ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ, ಮಾಜಿ ಶಾಸಕ ಅಶೋಕ ಕಾಟವೆ, ರಂಗಾ ಬದ್ದಿ, ಮೇಯರ್ ವೀಣಾ ಬರದ್ವಾಡ, ಶಂಕರ ಸೆಳಕೆ, ವಿಜಯಾನಂದ ಶೆಟ್ಟಿ, ರವಿ ನಾಯಕ, ಬಸವರಾಜ ಕುಂದಗೋಳಮಠ, ಸಿ.ಆರ್. ದವಳಗಿ, ಶಿವು ಬೆಳಾರದ, ನಿಂಗಪ್ಪ ಸುತಗಟ್ಟಿ, ಇತರರು ಉಪಸ್ಥಿತರಿದ್ದರು.